ADVERTISEMENT

ಹಿರಿಯೂರು: ಪ್ರಾಬಲ್ಯ ಮೆರೆದ ಜೆಡಿಎಸ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 9:15 IST
Last Updated 6 ಜನವರಿ 2011, 9:15 IST

ಭದ್ರಾವತಿ: ತಾಲ್ಲೂಕಿನ ಹಿರಿಯೂರು ಜಿ.ಪಂ. ಕ್ಷೇತ್ರವನ್ನು ಸತತ ಮೂರನೇ ಬಾರಿ ಗೆಲ್ಲುವ ಮೂಲಕ ಜೆಡಿಎಸ್ ಅಭ್ಯರ್ಥಿಎಸ್. ಕುಮಾರ್ ಮತ್ತೊಮ್ಮೆ ತಮ್ಮ ಪ್ರಾಬಲ್ಯ ತೋರಿದ್ದಾರೆ.
ಗ್ರಾ.ಪಂ. ಸದಸ್ಯರಾಗಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾಗಿ, ಪ್ರಥಮಬಾರಿಗೆ 2000ದಲ್ಲಿ ಜಿ.ಪಂ. ಚುನಾವಣೆಯಲ್ಲಿ ಜಯಗಳಿಸಿದ ಎಸ್. ಕುಮಾರ್, 2005ರಲ್ಲಿ ತಮ್ಮ ಪತ್ನಿ ಜ್ಯೋತಿ ಅವರನ್ನು ಇದೇ ಕ್ಷೇತ್ರದಿಂದ ಗೆಲ್ಲಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದರು.

ಅವರ ನಾಗಾಲೋಟಕ್ಕೆ ಬ್ರೇಕ್ ಹಾಕುವ ಯತ್ನವಾಗಿ ಕಾಂಗ್ರೆಸ್-ಬಿಜೆಪಿ ಜಂಟಿಯಾಗಿ ಪಕ್ಷೇತರ ಅಭ್ಯರ್ಥಿಎಚ್.ಸಿ. ಪದ್ಮನಾರಾಯಣ ಅವರನ್ನು ಕಣಕ್ಕೆ ಇಳಿಸಿತ್ತು. ಆದರೆ, ಇದರಲ್ಲಿ ಯಶಸ್ಸು ಮಾತ್ರ ದೊರೆಯಲಿಲ್ಲ. ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಅವರ ಬೆಂಬಲ ಹಾಗೂಎಸ್. ಕುಮಾರ್ ಅವರ ಜನಪ್ರಿಯತೆ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಸಾಬೀತಾಗಿದ್ದು, ಇಲ್ಲಿನ ನಾಲ್ಕು ತಾ.ಪಂ. ಕ್ಷೇತ್ರದಲ್ಲಿ ಜೆಡಿಎಸ್ 3ನ್ನು ತೆಕ್ಕೆಗೆ ತೆಗೆದುಕೊಂಡಿದೆ. ಎರಡು ಜಿ.ಪಂ. ಚುನಾವಣೆಯಲ್ಲೂ ಸಿಂಗನಮನೆ ಕ್ಷೇತ್ರ ಮಾಜಿ ಶಾಸಕ ಅಪ್ಪಾಜಿ ಅವರ ಬೆಂಬಲಿಗರ ಪಾಲಾಗಿತ್ತು. ಆದರೆ, ಈ ಬಾರಿ ಅದಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ಕಾಂಗ್ರೆಸ್ ಈ ಕ್ಷೇತ್ರವನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

ಹಿಂದೆ ಅಪ್ಪಾಜಿ ಬೆಂಬಲಿಗರಾಗಿದ್ದ ಸತೀಶ್‌ಗೌಡ ಅವರ ಪತ್ನಿ ವೈ.ಡಿ. ಉಷಾ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದಾರೆ. ಶಾಸಕ ಸಂಗಮೇಶ್ವರ ಅವರ ಬೆಂಬಲಿಗರಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ, ಗುರುತಿಸಿಕೊಂಡಿದ್ದ ಟಿ. ಚಂದ್ರೇಗೌಡ ಅವರ ಪತ್ನಿ ವನಜಾಕ್ಷಿ ಅವರ ನಡುವೆ ಸ್ಪರ್ಧೆ ನಡೆದದ್ದು ಇಲ್ಲಿನ ವಿಶೇಷ. ಪಕ್ಷ ಹಾಗೂ ಶಾಸಕ ಬಿ.ಕೆ. ಸಂಗಮೇಶ್ವರ, ಸತೀಶ್‌ಗೌಡ ಅವರ ವೈಯುಕ್ತಿಕ ವರ್ಚಸ್ಸಿನ ‘ಕಮಾಲ್’ ಇಲ್ಲಿ ಕೆಲಸ ಮಾಡಿದ ಪರಿಣಾಮ ಕ್ಷೇತ್ರ ಕಾಂಗ್ರೆಸ್ ಮಡಿಲಿಗೆ ಒಲಿದಿದೆ. ತಲಾ ಎರಡು ತಾ.ಪಂ.ಗಳು ಕಾಂಗ್ರೆಸ್-ಜೆಡಿಎಸ್ ಪಾಲಾಗಿದೆ.

ಕೂಡ್ಲಿಗೆರೆ ಜಿ.ಪಂ. ಕ್ಷೇತ್ರಕ್ಕೆ ಮುಖ್ಯಮಂತ್ರಿ ಸ್ವತಃ ಚುನಾವಣಾ ಪ್ರಚಾರ ಸಭೆ ನಡೆಸಿದರು ಸಹ ಸ್ಪರ್ಧೆ ಏರ್ಪಟಿದ್ದು, ಕಾಂಗ್ರೆಸ್-ಜೆಡಿಎಸ್ ನಡುವೆ. ಇಲ್ಲಿ ಪುನಃ ಹಾಲಿ-ಮಾಜಿ ಶಾಸಕರ ವ್ಯಕ್ತಿ ಪ್ರತಿಷ್ಠೆ ರಾಜಕಾರಣ ಮೆರೆಯಿತು. ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿದ್ದ ಬಿಜೆಪಿಗೆ ಇಲ್ಲಿ ತೀವ್ರ ಮುಖಭಂಗವಾಗಿದೆ. ಅದನ್ನು ಸೆಳೆಯುವಲ್ಲಿ ಸಂಗಮೇಶ್ವರ ಯಶಸ್ಸು ಕಂಡಿದ್ದಾರೆ ಎಂಬುದು ಕಾಂಗ್ರೆಸ್ ಜಯದಿಂದ ಸಾಬೀತಾಗಿದೆ.

ಪಕ್ಷ ರಾಜಕೀಯ ವಾತಾವರಣ ಸೃಷ್ಟಿಸಿದ್ದ ತಾಲ್ಲೂಕಿನ ಹೊಳೆಹೊನ್ನೂರು ಹಾಗೂ ಆನವೇರಿ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಸಮಬಲದ ಹೋರಾಟ ನಡೆಸಿ ತಲಾ ಒಂದು ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ. ಈ ಭಾಗದ ಏಳು ತಾ.ಪಂ. ಕ್ಷೇತ್ರದಲ್ಲಿ ಕಾಂಗ್ರೆಸ್ 5ನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮೂಲಕ ಪ್ರಾಬಲ್ಯ ಮೆರೆದಿದೆ. ಹೊಳೆಹೊನ್ನೂರು ಮತ್ತೊಮ್ಮೆ ಕ್ಷೇತ್ರದ ಹೊರಗಿನ ವ್ಯಕ್ತಿಗಳನ್ನು ಗೆಲ್ಲಿಸುವ ಮೂಲಕ ಅವರಿಗೆ ತಮ್ಮ ಪ್ರಾತಿನಿಧ್ಯ ಎಂಬುದನ್ನು ಸಾಬೀತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.