ಶಿವಮೊಗ್ಗ: ದೇಶದ ರಕ್ಷಣೆಗೆ ಹೋರಾಡುವ ಸೈನಿಕರ ಸೇವೆ ಬಗ್ಗೆ ಕೇವಲ ಮಾತಿನಲ್ಲಿ ಹೊಗಳಲಾಗುತ್ತದೆ. ಆದರೆ, ವ್ಯವಸ್ಥೆಯಲ್ಲಿ ನಿವೃತ್ತ ಸೈನಿಕರನ್ನು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ನಿಜಕ್ಕೂ ಖೇದ ಉಂಟಾಗುತ್ತದೆ ಎಂದು ಮಲೆನಾಡು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ವಿ.ಕಷ್ಣರೆಡ್ಡಿ ವಿಷಾದಿಸಿದರು.
ನಗರದ ಮಥುರಾ ಹೋಟೆಲ್‌ನಲ್ಲಿ ಭಾನುವಾರ ಮಲೆನಾಡು ಮಾಜಿ ಸೈನಿಕರ ಸಂಘ ಹಮ್ಮಿಕೊಂಡಿದ್ದ ಸರ್ವಸದಸ್ಯರ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಉತ್ತರಾಖಂಡ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಾವಿರಾರು ಜನರನ್ನು ಸೈನಿಕರು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ಈ ಹಿಂದೆ ನಡೆದ ಯುದ್ದಗಳಲ್ಲೂ ದೇಶಕ್ಕಾಗಿ ಹೋರಾಡಿದ್ದಾರೆ. ಸೈನಿಕರಿಗೆ ಮಾತುಗಳಲ್ಲಿ ಹೊಗಳುವ ಸರ್ಕಾರ, ಸಮಾಜ ಅವರಿಗೆ ನೀಡಬೇಕಾದ ಸೌಲಭ್ಯ, ಗೌರವಗಳನ್ನು ನೀಡುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.
ದೇಶದ ರಕ್ಷಣೆಗೆ ತಮ್ಮ ಜೀವವನ್ನೆ ಮುಡುಪಾಗಿಟ್ಟ ನಿವೃತ್ತ ಸೈನಿಕರ ಬಗ್ಗೆ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ವಹಿಸಿದೆ. ಕಾನೂನುಬದ್ಧವಾಗಿ ನೀಡಬೇಕಾದ ಸೌಲಭ್ಯ ಕಲ್ಪಿಸದೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ನಗರದಲ್ಲಿ ನಿವೃತ್ತ ಸೈನಿಕರ ಸಂಘದ ಕಚೇರಿ ತೆರೆಯಲು ನಿವೇಶನ ನೀಡುವಂತೆ ಈ ಹಿಂದೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಇದುವರೆಗೂ ಜಿಲ್ಲಾಡಳಿತ ನಿವೇಶನ ನೀಡಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಅಲೆದಲೆದು ಸಾಕಾಗಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಸುಮಾರು 3,500 ನಿವೃತ್ತ ಸೈನಿಕರಿದ್ದಾರೆ. ನಿವೃತ್ತ ಸೈನಿಕರಿಗೆ 5 ಎಕರೆ ಜಮೀನು ನೀಡುವುದಾಗಿ ಕೇಂದ್ರಸರ್ಕಾರ ಹೇಳುತ್ತದೆ. ಆದರೆ ಇದುವರಗೂ ನಿವೃತ್ತ ಸೈನಿಕರಿಗೆ ಜಮೀನು ಸಿಕ್ಕಿಲ್ಲ. ಜಮೀನು ನೀಡಲು ಕೂಡಲೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸಮಾರಂಭದಲ್ಲಿ ಕರ್ನಲ್ ಡಾ.ಎ.ಎಸ್.ರಘುನಾಥ್, ಕೆ.ಎ.ರಾಮಚಂದ್ರ, ಸಂಘದ ಕಾರ್ಯದರ್ಶಿ ಎಂ.ರವೀಂದ್ರನ್, ಖಜಾಂಚಿ ಮಹೇಶ್ವರಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.