ADVERTISEMENT

‘ಕಾಲಮಿತಿಯಲ್ಲಿ ಮಾಹಿತಿ ನೀಡಿ ದಂಡ ತಪ್ಪಿಸಿಕೊಳ್ಳಿ’

ಮಾಹಿತಿ ಹಕ್ಕು ಅನುಷ್ಠಾನಾಧಿಕಾರಿಗಳಿಗೆ ಆಯುಕ್ತರ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 6:30 IST
Last Updated 8 ಜನವರಿ 2014, 6:30 IST

ಶಿವಮೊಗ್ಗ:  ಮಾಹಿತಿದಾರರಿಗೆ ಕಾಲಮಿತಿಯಲ್ಲಿ ಮಾಹಿತಿ ಒದಗಿಸಲು ಅನುಕೂಲವಾಗುವಂತೆ ಸರ್ಕಾರಿ ಕಚೇರಿಯ ಮಾಹಿತಿ ಅಧಿಕಾರಿಗಳು ಕನಿಷ್ಠ ವಾರಕ್ಕೊಮ್ಮೆ ಪರಿಶೀಲನೆ ಮಾಡುವುದು ಅಗತ್ಯ ಎಂದು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಡಿ. ತಂಗರಾಜು ಸೂಚಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಸಹಾಯಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಅನುಷ್ಠಾನ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಚೇರಿ ಕಡತಗಳ ಕ್ರಮಬದ್ಧ ನಿರ್ವಹಣೆ ಇಲ್ಲವಾದರೆ ಕಾಲಮಿತಿಯಲ್ಲಿ ಮಾಹಿತಿ ಒದಗಿಸುವುದು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಕಷ್ಟವಾಗಬಹುದು. ಆದ್ದರಿಂದ ಆಯಾ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ವಾರಕ್ಕೊಮ್ಮೆ ಕಚೇರಿ ಪರಿಶೀಲನೆ ಮಾಡುವುದರಿಂದ ಕಡತಗಳ ವಿಲೇವಾರಿ ಮತ್ತಿತರ ನಿರ್ವಹಣೆ ವಿಷಯಗಳು ಕ್ರಮಬದ್ಧವಾಗುತ್ತವೆ. ಇದರಿಂದ ಕಾಲಮಿತಿಯಲ್ಲಿ ಮಾಹಿತಿ ಒದಗಿಸಿ, ದಂಡನೆಯಿಂದ ಪಾರಾಗಬಹುದು ಎಂದು ಅವರು ತಿಳಿಸಿದರು.

ಮಾಹಿತಿದಾರರು ಕೇಳುವ ಯಾವುದೇ ಮಾಹಿತಿಯನ್ನು 30ದಿನದ ಒಳಗಾಗಿ ಒದಗಿಸುವುದು ನಿಯಮ. ಆದ್ದರಿಂದ ಕಚೇರಿಗೆ ಸಂಬಂಧಿಸಿದ ಸೆಕ್ಷನ್ 4(1)ಎ ಮತ್ತು 4(1)ಬಿ ಮಾಹಿತಿಯನ್ನು ತಯಾರಿಸಿರಬೇಕು. ಅಲ್ಲದೆ, ಮಾಹಿತಿ ಕೋರಿಬಂದ ಅರ್ಜಿಗಳನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಮಾಹಿತಿ ನೀಡಲು ಸಾಧ್ಯವಿಲ್ಲವಾದರೆ ಈ ಬಗ್ಗೆ ಅರ್ಜಿಯನ್ನು ತಿರಸ್ಕರಿಸುವ ಮುನ್ನ ನಿಮ್ಮ ಪ್ರಯತ್ನ ಏನೆಂಬುದನ್ನು ಅಥವಾ ಅಧಿನಿಯಮದ ವ್ಯಾಪ್ತಿಗೆ ಬರದಿರಲು ಕಾರಣವೇನೆಂಬುದನ್ನು ಅರ್ಜಿದಾರರಿಗೆ ಕಾಲಮಿತಿಯಲ್ಲಿ ತಿಳಿಸಬೇಕು. ಅರ್ಜಿದಾರರಿಗೆ ಉತ್ತರಿಸದೆ ವಿಳಂಬ ಮಾಡುವುದು ದಂಡನೆಗೆ ಕಾರಣವಾಗಲಿದೆ ಎಂದರು.

ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾಹಿತಿ ನೀಡುವ ಅಧಿಕಾರವನ್ನು ಅಧಿನಿಯಮದಲ್ಲಿ ಸ್ಪಷ್ಟವಾಗಿ ನೀಡಿರುವುದರಿಂದ ಈ ಬಗ್ಗೆ ಮೇಲಧಿಕಾರಿಗಳ ಮಾರ್ಗದರ್ಶನ ಪಡೆಯುವ ಸಲುವಾಗಿ ಕಾಲಹರಣ ಮಾಡಬಾರದು ಎಂದು ತಂಗರಾಜ್ ತಿಳಿಸಿದರು. ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಉಪಸ್ಥಿತರಿದ್ದರು.

ರೂ.91 ಲಕ್ಷ ದಂಡ
ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ 15 ಸಾವಿರ ಮೇಲ್ಮನವಿ ಅರ್ಜಿಗಳು ಬಂದಿವೆ. ಕಾಲಮಿತಿಯಲ್ಲಿ ಮಾಹಿತಿ ನೀಡಲು ವಿಫಲರಾದ ರಾಜ್ಯದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕಳೆದ ವರ್ಷ ಸುಮಾರು ರೂ.91 ಲಕ್ಷ ದಂಡ ವಿಧಿಸಲಾಗಿದೆ. ಒಬ್ಬರಿಗೆ ಗರಿಷ್ಠ ರೂ.25 ಸಾವಿರದವರೆಗೂ ದಂಡ ವಿಧಿಸಲು ಅವಕಾಶವಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಬಿಪಿಎಲ್‌ ಚೀಟಿದಾರರಿಗೆ ಉಚಿತ ಮಾಹಿತಿ
ಬಿಪಿಎಲ್ ಕಾರ್ಡ್‌ದಾರರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದಾಗ ಅವರಿಗೆ 100 ಪುಟಗಳ ಮಾಹಿತಿಯವರೆಗೆ ಶುಲ್ಕ ವಿನಾಯ್ತಿ ನೀಡಲಾಗಿದೆ. 100 ಪುಟಗಳ ನಂತರ ಪ್ರತಿ ಪುಟಕ್ಕೆ ತಲಾ ರೂ.2 ನಂತೆ ಶುಲ್ಕ ವಿಧಿಸಬಹುದು ಎಂದರು.

ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿರುವ ಹಾಗೂ ತನಿಖೆಯ ಹಂತದಲ್ಲಿರುವ ಪ್ರಕರಣಗಳ ಕುರಿತಂತೆ ಯಾರಾದರೂ ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ಮಾಹಿತಿ ಕೊಡುವ ಅಗತ್ಯವಿಲ್ಲ. ಹಾಗೆಯೇ ಸಂಪುಟದ ಒಪ್ಪಿಗೆ ಪಡೆಯದ ವಿಷಯದ ಕುರಿತಂತೆಯೂ ಅಧಿಕಾರಿಗಳು ಮಾಹಿತಿ ನೀಡಬಾರದು. ಸಹಕಾರ ಸಂಘಗಳನ್ನು ಮಾಹಿತಿ ಹಕ್ಕು ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಹೇಳಿದರು.

ಕಾಡು ಪ್ರಾಣಿಗಳ ಸಂಖ್ಯೆ ಎಷ್ಟು?
ಅರಣ್ಯ ಇಲಾಖೆಗೆ ಅಧಿಕಾರಿಯೊಬ್ಬರು, ‘ತಮಗೆ ಸಾರ್ವಜನಿಕರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿರುವ ಅರಣ್ಯದ ವಿಸ್ತೀರ್ಣವೆಷ್ಟು? ಕಾಡಿನಲ್ಲಿರುವ ಪ್ರಾಣಿಗಳು ವಿಧಗಳೆಷ್ಟು, ಯಾವ್ಯಾವ ಪ್ರಾಣಿಗಳು

ಎಷ್ಟು ಸಂಖ್ಯೆಯಲ್ಲಿವೆ, ಮರಗಳು ಯಾವ್ಯಾವ ಜಾತಿ ಇದ್ದಾವೆ. ಅವುಗಳ ಸಂಖ್ಯೆಯೆಷ್ಟು ಎಂದು ಕೇಳುವುದರ ಜೊತೆಗೆ ಪ್ರಾಣಿಗಳ ವೀಡಿಯೊ ಚಿತ್ರೀಕರಣದ ಮಾಹಿತಿ ನೀಡಿ ಎಂದು ಕೇಳಿದ್ದಾರೆ’.

‘ಅರಣ್ಯ ವಿಸ್ತೀರ್ಣದ ಬಗ್ಗೆ ತಮ್ಮ ಬಳಿ ಮಾಹಿತಿಯಿದೆ. ಆದರೆ ಕಾಡಿನಲ್ಲಿ ಯಾವ್ಯಾವ ಪ್ರಾಣಿಗಳು ಎಷ್ಟು ಸಂಖ್ಯೆಯಲ್ಲಿವೆ ಹಾಗೂ ಮರಗಳು ಎಷ್ಟಿವೆ ಎಂಬುವುದರ ವಿವರ ಇಲ್ಲವಾಗಿದೆ. ಈ ಅರ್ಜಿಗೆ ಯಾವ ರೀತಿ ಉತ್ತರಿಸಬೇಕು' ಎಂದು ಆಯುಕ್ತರ ಮುಂದೆ  ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಡಿ.ತಂಗರಾಜ್‌ ‘ಹುಲಿ ಗಣತಿಯ ಮಾಹಿತಿ ನಿಮ್ಮ ಬಳಿಯಿರುತ್ತದೆ. ಆ ಮಾಹಿತಿ ನೀಡಬಹುದು. ಉಳಿದಂತೆ ಯಾವ್ಯಾವ ಪ್ರಾಣಿಗಳ ಗಣತಿ ನಡೆಸಿದ್ದೀರೋ ಆ ಕುರಿತಂತೆ ಮಾಹಿತಿ ನೀಡಿ; ಉಳಿದಂತೆ ಮಾಹಿತಿ ನೀಡುವ ಅಗತ್ಯವಿಲ್ಲ’ ಎಂದು ತಿಳಿಸಿದರು.

ಇಲಾಖೆಯೊಂದರ ಅಧಿಕಾರಿಯೊಬ್ಬರು ‘ಕೆಲವೊಬ್ಬರು ಬ್ಲಾಕ್‌ಮೇಲ್‌ ಮಾಡಲು ಮಾಹಿತಿ ಹಕ್ಕಿನಡಿ ಮಾಹಿತಿ ಕೇಳುತ್ತಿದ್ದಾರೆ. ಅಂಥಹವರಿಗೆ ಮಾಹಿತಿ ನೀಡಬಹುದೆ?’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ‘ಅರ್ಜಿದಾರರು ಬ್ಲಾಕ್‌ಮೇಲ್‌ ಮಾಡಲು ಮಾಹಿತಿ ಕೇಳುತ್ತಿದ್ದಾರೆ ಎಂಬುದು ನಿಮಗೇಗೆ ಗೊತ್ತು? ಸಾರ್ವಜನಿಕರು ಕಾಯ್ದೆಯಡಿ ಮಾಹಿತಿ ಕೇಳಿದಾಗ ನೀಡಲೇಬೇಕು’ ಎಂದು ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.