ಶಿವಮೊಗ್ಗ: ದೇಶದ ಪೊಲೀಸ್ ಸೇವೆಗೆ ಹೆಚ್ಚಿನ ಜೀವ ತುಂಬುವುದು ಸರ್ಕಾರದ ಕೆಲಸ ಎಂದು ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ.ಅರುಣಾದೇವಿ ಅಭಿಪ್ರಾಯಪಟ್ಟರು.
ನಗರದ ಕುವೆಂಪು ರಂಗಮಂದಿರ ದಲ್ಲಿ ಭಾನುವಾರ ತುಂಗಾ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಶಿವಮೊಗ್ಗ ಹಾಗೂ ಸಮಯ ನ್ಯೂಸ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ‘ಸಲ್ಯೂಟ್’ ಹಾಗೂ 10 ಜನ ಪೊಲೀಸರಿಗೆ ಸನ್ಮಾನ ಹಾಗೂ 5ಜನ ಪೊಲೀಸರಿಗೆ ಮರಣೋತ್ತರ ಗೌರವಾರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೊಲೀಸರ ಕಾರ್ಯ ಮಹತ್ತರವಾದದ್ದು. ಅವರ ಮತ್ತು ನಾಗರಿಕರ ರಕ್ಷಣೆಗಾಗಿ ನೂತನ ಆಯುಧಗಳನ್ನು ನೀಡುವ ಕೆಲಸ ಸರ್ಕಾರದಿಂದ ಮೊದಲಾಗಬೇಕು ಎಂದರು. ವಿದೇಶದಲ್ಲಿರುವ ಪೊಲೀಸ್ ವ್ಯವಸ್ಥೆಯ ರೀತಿಯಲ್ಲಿ ದೇಶದ ಪೊಲೀಸ್ ಪಡೆಯನ್ನು ಪರಿಣಾಮಕಾರಿಯಾಗಿ ರೂಪಿಸ ಬೇಕಾದ ಅಗತ್ಯ ಹೆಚ್ಚಿದೆ. ಅಂತಹ ಕಾರ್ಯಕ್ಕೆ ಮುಂದಾಗಬೇಕು. ಪೊಲೀಸರ ಆತ್ಮಸ್ಥೈರ್ಯ ವೃದ್ಧಿಗೊಳಿಸುವ ಜವಾಬ್ದಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳದ್ದು ಎಂದು ಹೇಳಿದರು.
ನಂತರ ಗುಲ್ಬರ್ಗದ ಮಲ್ಲಿಕಾರ್ಜುನ ಬಂಡೆ ಅವರ ಪತ್ನಿ ಮಲ್ಲಮ್ಮ ಮಲ್ಲಿಕಾರ್ಜುನ ಬಂಡೆ ಅವರನ್ನು ಸನ್ಮಾನಿಸಲಾಯಿತು.
ತುಂಗಾ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಬಳ್ಳೆಕೆರೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಯಾಳ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ತರಬೇತು ದಾರ ಫಣಿ ಭೂಷಣ್, ತೇಜಸ್ವಿನಿ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ತುಂಗಾ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಜನಾರ್ದನ್ ಪೈ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.