ADVERTISEMENT

ಹಾಲು ಉತ್ಪಾದಕರಿಗೆ ₹1 ಹೆಚ್ಚಳ ಶೀಘ್ರ: ಶಿಮೂಲ್ ಅಧ್ಯಕ್ಷ ಎಚ್.ಎನ್. ವಿದ್ಯಾಧರ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2018, 11:05 IST
Last Updated 10 ಅಕ್ಟೋಬರ್ 2018, 11:05 IST
ಆನಂದಪುರ ಸಮೀಪದ ಯಡೇಹಳ್ಳಿಯಲ್ಲಿರುವ ಹಾಲಿನ ಶಿಥಿಲೀಕರಣ ಘಟಕಕ್ಕೆ ಮಂಗಳವಾರ ಶಿಮೂಲ್ ಅಧ್ಯಕ್ಷ ಎಚ್.ಎನ್. ವಿದ್ಯಾಧರ್ ಭೇಟಿ ನೀಡಿದರು
ಆನಂದಪುರ ಸಮೀಪದ ಯಡೇಹಳ್ಳಿಯಲ್ಲಿರುವ ಹಾಲಿನ ಶಿಥಿಲೀಕರಣ ಘಟಕಕ್ಕೆ ಮಂಗಳವಾರ ಶಿಮೂಲ್ ಅಧ್ಯಕ್ಷ ಎಚ್.ಎನ್. ವಿದ್ಯಾಧರ್ ಭೇಟಿ ನೀಡಿದರು   

ಆನಂದಪುರ: ಶಿಮೂಲ್ ಸಂಸ್ಥೆಯ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ಉತ್ತಮ ಲಾಭವನ್ನು ಗಳಿಸುತ್ತಿದೆ. ಶೀಘ್ರದಲ್ಲಿ ಹಾಲು ಉತ್ಪಾದಕರಿಗೆ ಲೀಟರಿಗೆ ₹ 1 ಹೆಚ್ಚಿಸುವ ಮೂಲಕ ಸಂಸ್ಥೆಯ ಲಾಭಂಶವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ಶೀಮುಲ್ ಅಧ್ಯಕ್ಷ ಎಚ್.ಎನ್. ವಿದ್ಯಾಧರ್ ತಿಳಿಸಿದರು.

ಸಮೀಪದ ಯಡೇಹಳ್ಳಿಯಲ್ಲಿರುವ ಹಾಲು ಶಿಥಿಲೀಕರಣ ಘಟಕ ಹಾಗೂ ಘನ ತ್ಯಾಜ್ಯ ವಿಲೇವಾರಿ ಕಟ್ಟಡದ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದರು.

ಶಿಮೂಲ್ ಉತ್ತಮ ಗುಣಮಟ್ಟದಲ್ಲಿ ಹಾಲು ಉತ್ಪಾದಿಸುವ ಮೂಲಕ ಜನರ ವಿಶ್ವಾಸದ ಸಂಸ್ಥೆಯಾಗಿದೆ. ರಾಜ್ಯದಲ್ಲಿರುವ ಎಲ್ಲಾ ಉತ್ಪಾದನಾ ಸಂಸ್ಥೆಗಳಿಂದ ದಿನನಿತ್ಯ 45 ಲಕ್ಷ ಲೀಟರ್ ಹಾಲು ತಯಾರಾಗುತ್ತಿದೆ. ಶಿಮೂಲ್‌ ಸಂಸ್ಥೆಯಲ್ಲಿ 5.47 ಲಕ್ಷ ಲೀಟರ್ ಹಾಲಿನಲ್ಲಿ 2 ಲಕ್ಷ ಲೀಟರ್ ದಿನನಿತ್ಯದ ಮಾರುಕಟ್ಟೆಗೆ ಉಪಯೋಗಿಸಿ ಉಳಿದ ಹಾಲನ್ನು ಪೌಡರ್ ಉತ್ಪಾದನೆ ಕಳುಹಿಸಲಾಗುವುದು. ಉಳಿದ 12 ಹಾಲು ಉತ್ಪದನಾ ಸಂಸ್ಥೆಗಳಿಗೆ ಹೋಲಿಸಿದರೆ ಶಿಮೂಲ್ ರೈತರಿಗೆ ₹ 2 ರಿಂದ ₹ 3 ಹೆಚ್ಚಿನ ಪ್ರೋತ್ಸಾಹ ಧನ ನೀಡುತ್ತಿದೆ ಎಂದು ತಿಳಿಸಿದರು.

ADVERTISEMENT

ಶೀಘ್ರ ಶಿವಮೊಗ್ಗದಲ್ಲಿ ಪ್ಲೆಕ್ಸಿ ಪ್ಯಾಕ್ ಘಟಕ:

ಹಾಲಿನ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಹಾಗೆ ಹಾಲಿನ ಮಾರುಕಟ್ಟೆಗೂ ಹೆಚ್ಚಿನ ಆಧ್ಯತೆ ನೀಡುವ ಸಲುವಾಗಿ ಶಿವಮೊಗ್ಗದಲ್ಲಿ ಪ್ಲೆಕ್ಸಿ ಪ್ಯಾಕ್ ಘಟಕವನ್ನು ₹ 2 ಕೋಟಿ ವೆಚ್ಚದಲ್ಲಿ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಈಗ ಫ್ಲೆಕ್ಸಿ ಪ್ಯಾಕ್ ತಯಾರಿಸಲು ಹಾಲನ್ನು ಮಂಗಳೂರಿಗೆ ಕಳುಹಿಸಿ ಅಲ್ಲಿಂದ ಹಾಲಿನ ಪ್ಯಾಕೆಟ್ ಆಗಿ ಬರುತ್ತಿತ್ತು. ಈಗ ಶಿವಮೊಗ್ಗದಲ್ಲಿಯೇ ಹಾಲು ಕೆಡದಂತೆ ಹೆಚ್ಚಿನ ದಿನ ಇಡುವ ಉದ್ದೇಶದಿಂದ ಫ್ಲೆಕ್ಸಿ ಪ್ಯಾಕ್ ಘಟಕ ತಯಾರಿಸಲಾಗುವುದು ಎಂದು ತಿಳಿಸಿದರು.

40 ಲಕ್ಷದಲ್ಲಿ ನಿರ್ಮಾಣ ಆಗುತ್ತಿರುವ ಘನ ತ್ಯಾಜ್ಯ ವಿಲೇವಾರಿ ಕಟ್ಟಡ ಶೀಘ್ರ ಕಾರ್ಯನಿರ್ವಹಿಸಲಿದೆ. ಆನಂದಪುರ ಸಮೀಪದ ಗೌತಮಪುರದಲ್ಲಿ ಹಾಲು ಉತ್ಪಾದಕ ಸಂಘ ಸ್ಥಾಪಿಸಲು ಅರ್ಜಿ ಬಂದರೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಯಡೇಹಳ್ಳಿ ಹಾಲಿನ ಶಿಥಿಲೀಕರಣ ಘಟಕದ ವ್ಯವಸ್ಥಾಪಕ ಅನಿಲ್, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.