ADVERTISEMENT

ಮೂರೂವರೆ ತಾಸಿನಲ್ಲಿ 18 ಸಾವಿರ ಕ್ಯುಸೆಕ್ ಒಳಹರಿವು ಹೆಚ್ಚಳ

ಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಹರಿದು ಬಂದ ನೀರು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 7:05 IST
Last Updated 7 ಆಗಸ್ಟ್ 2022, 7:05 IST
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಸಮೀಪ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಸಮೀಪ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ   

ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಿಂದಾಗಿ ಭದ್ರಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿದೆ. ಹೀಗಾಗಿ ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಒಳಹರಿವು ಕೇವಲ ಮೂರೂವರೆ ತಾಸಿನಲ್ಲಿ 18 ಸಾವಿರ ಕ್ಯುಸೆಕ್‌ನಷ್ಟು ಏರಿಕೆಯಾಗಿದೆ.

ಜಲಾಶಯಕ್ಕೆ ಶನಿವಾರ ಬೆಳಿಗ್ಗೆ 7ಕ್ಕೆ 30 ಸಾವಿರ ಕ್ಯುಸೆಕ್ ಇದ್ದ ಒಳಹರಿವು, ಬೆಳಿಗ್ಗೆ 10.30ರ ವೇಳೆಗೆ 48 ಸಾವಿರ ಕ್ಯುಸೆಕ್‌ಗೆ ಹೆಚ್ಚಳಗೊಂಡಿತ್ತು.

ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಈಗ 184.2 ಅಡಿ ಸಂಗ್ರಹವಿದೆ. ಅಣೆಕಟ್ಟೆಯ ಸುರಕ್ಷತೆಯ ಕಾರಣ ಒಳಹರಿವಿನಷ್ಟೇ ಪ್ರಮಾಣದ ನೀರನ್ನು ಭದ್ರಾ ನದಿಗೆ ಹರಿಸಲಾಗುತ್ತಿದೆ.

ADVERTISEMENT

‘ಜಲಾಶಯದಿಂದಹೆಚ್ಚಿನ ಪ್ರಮಾಣದ ನೀರು ಹೊರ ಬಿಡುತ್ತಿರುವ ಕಾರಣ ಜಿಲ್ಲೆಯಲ್ಲಿ ಭದ್ರಾ ನದಿ ಪಾತ್ರದ ಭದ್ರಾವತಿ, ಹೊಳೆಹೊನ್ನೂರು ಸೇರಿ ಪ್ರಮುಖ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಕಟ್ಟೆಚ್ಚರ ವಹಿಸುವಂತೆ ಆಯಾ ತಾಲ್ಲೂಕು ಆಡಳಿತಕ್ಕೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ತಿಳಿಸಿದರು.

ದೊಡ್ಡ ಮಳೆ ಕಾರಣ: ‘ಮೊದಲೆಲ್ಲಾ ಮಳೆ ಬೀಳುವ ಪ್ರಮಾಣ ಎಲ್ಲ ಕಡೆಯೂ ಸಮಾನವಾಗಿ ಹಂಚಿಕೆಯಾಗುತ್ತಿತ್ತು. ಆದರೆ, ಈಗ ಎರಡು ವರ್ಷಗಳಿಂದ ಗಮನಿಸುತ್ತಿದ್ದೇವೆ. ಎಲ್ಲೋ ಒಂದು ಕಡೆ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಮಳೆ (180ರಿಂದ 200 ಮಿ.ಮೀನಷ್ಟು) ಸುರಿಯುತ್ತದೆ. ಅದು ಅನಾಹುತಗಳಿಗೆ ಕಾರಣವಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ಭದ್ರಾ ಜಲಾನಯನ ಪ್ರದೇಶದ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಕೆರೆಕಟ್ಟೆ–28.2 ಸೆಂ.ಮೀ., ಹೊಸಕೆರೆ– 21.3 ಸೆಂ.ಮೀ, ಕೊಟ್ಟಿಗೆಹಾರ– 20.8 ಸೆಂ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.