ADVERTISEMENT

‘21 ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 6:45 IST
Last Updated 8 ಮಾರ್ಚ್ 2018, 6:45 IST
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ  ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಮಾತನಾಡಿದರು.
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಮಾತನಾಡಿದರು.   

ಶಿವಮೊಗ್ಗ: ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ 21 ಜನ ಮತಗಟ್ಟೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಮತಗಟ್ಟೆ ಅಧಿಕಾರಿಗಳ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ವಿಧಾನಸಭಾ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ ಕೈಗೊಳ್ಳುತ್ತಿದೆ. ಮತದಾರರ ಪಟ್ಟಿಗೆ ಹೊಸ ಮತದಾರರನ್ನು ಸೇರಿಸಲು ಹಲವು ಕಾರ್ಯಕ್ರಮ ಹಾಗೂ ಮಾಹಿತಿ ಸಭೆ ಆಯೋಜಿಸಲಾಗುತ್ತಿದೆ. ಈಗಾಗಲೇ ಅಂತಿಮ ಮತದಾರರ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಆದರೂ, ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೂ 10ದಿನಗಳವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರಸ್ತುತ ವಿಧಾನಸಭಾ ಚುನಾವಣೆ ನಡೆಯುವ ಮತಕೇಂದ್ರಗಳಲ್ಲಿ ಅಗತ್ಯವಾದ ಕುಡಿಯುವ ನೀರು, ನೆರಳು, ಶೌಚಾಲಯ, ವಿದ್ಯುತ್, ಬೆಳಕು, ಅಂಕವಿಕಲರಿಗೆ ರ್ಯಾಂಕ್ ಮತ್ತಿತರ ಸೌಲಭ್ಯ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.

ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೂ ಮತದಾರರ ಪಟ್ಟಿ ತಲುಪಿಸಲಾಗಿದೆ. ಈ ಮತದಾರರ ಪಟ್ಟಿಯ ನ್ಯೂನತೆ, ಹೊಸ ಸೇರ್ಪಡೆ, ತಿದ್ದುಪಡಿ ಪರಿಶೀಲಿಸಬೇಕು. ಮತದಾರರ ಪಟ್ಟಿಯಲ್ಲಿ ಕೈಬಿಡಲಾದ ಹಾಗೂ ವರ್ಗಾವಣೆಗೊಂಡ ಮತದಾರರ ಹೆಸರು ಪರಿಶೀಲಿಸಬೇಕು ಎಂದು ಸೂಚಿಸಿದರು.

ಮತಗಟ್ಟೆಗೆ ಹತ್ತಿರದ ಮನೆಯ ದೂರವಾಣಿ ಸಂಖ್ಯೆ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರದ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಮತಗಟ್ಟೆ ಅಧಿಕಾರಿಗಳು ಸದಾ ತಮ್ಮ ಬಳಿ ಇಟ್ಟುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ರಾಕೇಶ್‌ಕುಮಾರ್, ಮಹಾನಗರಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.