ADVERTISEMENT

ಶಿವಮೊಗ್ಗ: ರೌಡಿಪಟ್ಟಿಯಿಂದ 353 ಜನರಿಗೆ ಬಿಡುಗಡೆ

ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶ: ಎಸ್ಪಿ ಜಿ.ಕೆ.ಮಿಥುನ್‌ಕುಮಾರ್

ವೆಂಕಟೇಶ ಜಿ.ಎಚ್.
Published 14 ಜೂನ್ 2025, 6:21 IST
Last Updated 14 ಜೂನ್ 2025, 6:21 IST
ಜಿ.ಕೆ.ಮಿಥುನ್‌ಕುಮಾರ್
ಜಿ.ಕೆ.ಮಿಥುನ್‌ಕುಮಾರ್   

ಶಿವಮೊಗ್ಗ: ಕಳೆದ 10 ವರ್ಷಗಳಿಂದ ಯಾವುದೇ ಪ್ರಕರಣ ದಾಖಲಾಗದಿರುವ ಹಾಗೂ ಉತ್ತಮ ಗುಣ ನಡತೆ ತೋರಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 353 ಜನರನ್ನು ಪೊಲೀಸ್ ಇಲಾಖೆ ಗುರುವಾರ ರೌಡಿಪಟ್ಟಿಯಿಂದ ಕೈ ಬಿಟ್ಟಿದೆ. ಇವರಲ್ಲಿ ಕೆಲವರು ವೃದ್ಧಾಪ್ಯದ ಅಂಚಿನಲ್ಲಿದ್ದರೆ, ಇನ್ನೂ ಕೆಲವರು ಮೃತಪಟ್ಟಿದ್ದಾರೆ.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 1203 ಮಂದಿ ರೌಡಿಪಟ್ಟಿಯಲ್ಲಿದ್ದರು. ಈಗ 850 ಮಂದಿ ಉಳಿದಿದ್ದಾರೆ. ಅವರಲ್ಲಿ ಈ ವರ್ಷ ಹೊಸದಾಗಿ ರೌಡಿ ಪಟ್ಟಿಗೆ ಸೇರಿರುವ 90 ಮಂದಿಯೂ ಇದ್ದಾರೆ.

ಸಾಮಾನ್ಯ ಪ್ರಕ್ರಿಯೆ: ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ರೌಡಿಪಟ್ಟಿ ತೆರೆಯುವುದು ಹಾಗೂ ಮುಕ್ತಾಯಗೊಳಿಸುವುದು ಇಲಾಖೆಯ ಸಾಮಾನ್ಯ ಪ್ರಕ್ರಿಯೆ. ಇದನ್ನು ಪ್ರತಿ ವರ್ಷ ಮಾಡುತ್ತಲೇ ಇರುತ್ತೇವೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳುತ್ತಾರೆ.

ADVERTISEMENT

ಈಗ ರೌಡಿಪಟ್ಟಿಯಿಂದ ಕೈ ಬಿಟ್ಟವರು ಇನ್ನು ಮುಂದೆ ಸಮಾಜದಲ್ಲಿ ಎಲ್ಲರಂತೆ ಒಳ್ಳೆಯ ನಾಗರಿಕರಾಗಿ ಬದುಕುವುದಕ್ಕೆ ಅವಕಾಶವಾಗಲಿದೆ. ರೌಡಿ ಪಟ್ಟಿಯಲ್ಲಿರುವವ ಮೇಲೆ ನಿರಂತರವಾಗಿ ನಿಗಾ ಇಟ್ಟಂತೆ ಇವರ ಮೇಲೆ ಇಡುವುದಿಲ್ಲ. ಹಬ್ಬ–ಹರಿದಿನ, ವಿಶೇಷ ಸಂದರ್ಭ, ಚುನಾವಣೆ ವೇಳೆ ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಹಾಗೂ ಅವರ ಮನೆಗಳ ತಪಾಸಣೆ ಕಾರ್ಯ ಇನ್ನು ಮುಂದೆ ಇರುವುದರಿಲ್ಲ. ಆದರೂ ಅವರು ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಮೇಲ್ವಿಚಾರಣೆ ಮಾಡಲಾಗುವುದು ಎಂದು ಎಸ್ಪಿ ತಿಳಿಸಿದರು.

ಈಗ ರೌಡಿ ಪಟ್ಟಿಯಿಂದ ಕೈ ಬಿಟ್ಟವರಲ್ಲಿ 35 ರಿಂದದ 60 ವರ್ಷ ವಯಸ್ಸಿನವರೂ ಇದ್ದಾರೆ. ಕೆಲವರು 2006–07ರಿಂದಲೂ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿ ಆಗಿಲ್ಲ. ಅಂತಹವರನ್ನು ಪಟ್ಟಿಯಿಂದ ತೆಗೆದಿದ್ದೇವೆ ಎನ್ನುತ್ತಾರೆ.

ರೌಡಿ ಪಟ್ಟಿಯಲ್ಲಿರುವವ ಸಂಖ್ಯೆ ಕಡಿಮೆ ಆದಷ್ಟು ಪೊಲೀಸರ ಕಾರ್ಯಚಟುವಟಿಕೆಗೆ ಅನುಕೂಲ ಆಗಲಿದೆ. ರೌಡಿ ಚಟುವಟಿಕೆಯಿಂದ ದೂರವಾಗಿ ನಿಷ್ಕ್ರಿಯರಾಗಿದ್ದವರನ್ನು ಪಟ್ಟಿಯಲ್ಲಿ ಇಟ್ಟುಕೊಂಡು ನಿಗಾ ಇಟ್ಟರೆ ಏನೂ ಉಪಯೋಗವಿಲ್ಲ. ಅದರ ಬದಲಿಗೆ ರೌಡಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವವರು, ಹೊಸದಾಗಿ ಪಟ್ಟಿಗೆ ಸೇರಿದವರ ಮೇಲೆ ನಿರಂತರವಾಗಿ ನಿಗಾ ಇಡಲು ಸಂಖ್ಯೆ ಕಡಿಮೆ ಆದರೆ ಅನುಕೂಲ ಆಗಲಿದೆ. ಇದರಿಂದ ‍ಪೊಲೀಸರ ಸಮಯವೂ ಉಳಿತಾಯವಾಗಲಿದೆ ಎಂದು ಮಿಥುನ್‌ಕುಮಾರ್ ಹೇಳುತ್ತಾರೆ.

ರೌಡಿ ಪಟ್ಟಿಯಿಂದ ಕೈಬಿಟ್ಟವರು ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಅಂತಹವರ ವಿರುದ್ಧ ಪುನಃ ರೌಡಿ ಪಟ್ಟಿ ತೆರೆಯಲಾಗುವುದು. ಅದು ಜೀವನ ಪರ್ಯಂತ ಚಾಲ್ತಿಯಲ್ಲಿರಲಿದೆ.
ಜಿ.ಕೆ.ಮಿಥುನ್‌ಕುಮಾರ್, ಶಿವಮೊಗ್ಗ ಎಸ್ಪಿ

ಎಸ್‌ಎಎಫ್‌ಗೆ ಫ್ರೀಡಂ ಪಾರ್ಕ್‌ನಲ್ಲಿ ನೆಲೆ..

ಕೋಮು ಪ್ರಚೋದಿತ ಗಲಭೆ ತಡೆಯಲು ದಕ್ಷಿಣ ಕನ್ನಡ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡಂತೆ ರಚಿಸಿರುವ ವಿಶೇಷ ಕಾರ್ಯಪಡೆಯ 80 ಜನರ ಕಂಪೆನಿ ಶಿವಮೊಗ್ಗಕ್ಕೆ ಬರಲಿದೆ. ಅವರಿಗೆ ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿರುವ (ಫ್ರೀಡಂ ಪಾರ್ಕ್‌) ಹಳೆಯ ಜೈಲು ಕಟ್ಟಡದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು. ಶೀಘ್ರ ಕಚೇರಿ ಕೂಡ ತೆರೆಯಲಾಗುವುದು ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದರು. ಎಸ್‌ಎಎಫ್‌ ಇಂಟಲಿಜೆನ್ಸ್ ಗ್ಯಾದರಿಂಗ್. ಕಮ್ಯುನಲ್ ಎಲಿಮೆಂಟ್ಸ್ ಮಾನಿಟರ್ ಜೊತೆಗೆ ಸ್ಥಳೀಯ ಪೊಲೀಸರಿಗೂ ನೆರವಾಗಲಿದೆ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.