ADVERTISEMENT

ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ 4ಜಿ ಸೇವೆ

ಮಲೆನಾಡಿಗರ ನೆಟ್‌ವರ್ಕ್‌ ಸಮಸ್ಯೆ ಶೀಘ್ರ ದೂರವಾಗಲಿದೆ: ಬಿ.ವೈ.ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 7:31 IST
Last Updated 7 ನವೆಂಬರ್ 2022, 7:31 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿವಮೊಗ್ಗ: ಜಿಲ್ಲೆಯ ನೆಟ್‍ವರ್ಕ್ ಸಂಪರ್ಕವಿಲ್ಲದ ಗ್ರಾಮೀಣ ಪ್ರದೇಶಗಳಿಗೆ 4ಜಿ ಸೇವೆಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ದೂರಸಂಪರ್ಕ ವ್ಯವಸ್ಥೆಯಿಂದ ವಂಚಿತರಾದ 96 ಕುಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಿಗೆ ತುರ್ತಾಗಿ ದೂರಸಂಪರ್ಕ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸಚಿವರು ಈ ಮನವಿಗೆ ಸ್ಪಂದಿಸಿದ್ದಾರೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಆತ್ಮನಿರ್ಭರ ಭಾರತದ 4ಜಿ ಟೆಕ್ನಾಲಜಿ ಯೋಜನೆಯಡಿ ದೇಶದಾದ್ಯಂತ ನೆಟ್‍ವರ್ಕ್ ಇಲ್ಲದ ಕುಗ್ರಾಮಗಳಿಗೆ ಅತ್ಯಾಧುನಿಕ ದೂರಸಂಪರ್ಕ ನೀಡಲು ₹26,136 ಕೋಟಿ ವೆಚ್ಚದ 4ಜಿ ಮೊಬೈಲ್ ಸರ್ವಿಸ್ ಯೋಜನೆ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ ದೇಶದ ಸುಮಾರು 24,680 ಕುಗ್ರಾಮ ಗಳಿಗೆ ದೂರಸಂಪರ್ಕ ವ್ಯವಸ್ಥೆ ನೀಡಲಾಗುವುದು. ಆತ್ಮನಿರ್ಭರ ಭಾರತ ಯೋಜನೆಯ ಯೂನಿವರ್ಸಲ್ ಸರ್ವಿಸ್ ಆಬ್ಲಿಗೇಷನ್ ಫಂಡ್ (ಯುಎಸ್‍ಒಎಫ್) ನಿಂದ ಬಿಎಸ್‍ಎನ್‍ಎಲ್ ಮೂಲಕ ಈ ಯೋಜನೆಯನ್ನು ಜಾರಿಗೊಳಿಸ ಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಮೊದಲ ಹಂತದಲ್ಲಿ ದೇಶದ ನಾಲ್ಕು ರಾಜ್ಯಗಳ ಒಂದೊಂದು ಬ್ಲಾಕ್‌ಗಳ ಗ್ರಾಮಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಕರ್ನಾಟಕದ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿಯ ಹಳ್ಳಿಗಳು, ಹರಿಯಾಣ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳ ತಾಲ್ಲೂಕುಗಳನ್ನು ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಶಿವಮೊಗ್ಗ ವ್ಯಾಪ್ತಿಯಲ್ಲಿ 54 ‘4ಜಿ’ ಟವರ್‌ಗಳನ್ನು ಮಂಜೂರು ಮಾಡಲಾಗಿದೆ. ಹೊಸನಗರ– 24, ಸಾಗರ– 12, ಶಿವಮೊಗ್ಗ– 3, ತೀರ್ಥಹಳ್ಳಿ– 11 ಮತ್ತು ಬೈಂದೂರು– 4 ಟವರ್‌ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

‘ಭಾರತ್‍ನೆಟ್ ಉದ್ಯಮಿ (ಬಿಎನ್‍ಯು) ಯೋಜನೆ ಅಡಿಯಲ್ಲಿ ದೇಶದ ನಾಲ್ಕು ಬ್ಲಾಕ್‍ಗಳಲ್ಲಿ ಪೈಲಟ್ ಯೋಜನೆಯಾಗಿ ಹೈಸ್ಪೀಡ್ ಇಂಟರ್‌ನೆಟ್ ಸಂಪರ್ಕವನ್ನು ಬಿಎಸ್‍ಎನ್‍ಎಲ್ ವತಿಯಿಂದ ಕಾರ್ಯ ಗತಗೊಳಿಸಲು ತೀರ್ಮಾನಿಸಿದ್ದು, ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಬ್ಲಾಕ್‍ ಅನ್ನು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.

‘ಇನ್ನುಳಿದ ಗ್ರಾಮಗಳನ್ನು ಅತೀ ಶೀಘ್ರದಲ್ಲಿ ಈ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರದ ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ ಬ್ಯಾಟರಿ ಬ್ಯಾಕ್‍ಅಪ್ ಇಲ್ಲದೇ ಆಗಾಗ ದೂರ ಸಂಪರ್ಕ ವ್ಯವಸ್ಥೆಯಲ್ಲಿ ಆಗುತ್ತಿರುವ ಅಡಚಣೆ ಕುರಿತು ಸಚಿವರ ಗಮನಕ್ಕೆ ತರಲಾಗಿತ್ತು. ಇದಕ್ಕಾಗಿ ಅವರು 22 ಬ್ಯಾಟರಿ ಸೆಟ್‍ಗಳ ಮಂಜೂರಾತಿ ನೀಡಿದ್ದಾರೆ. ಉಳಿದಂತೆ ಜಿಲ್ಲೆಯಾದ್ಯಂತ ದೂರಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ 104 ಬ್ಯಾಟರಿ ಸೆಟ್‍ಗಳ ಮಂಜೂರಾತಿಗಾಗಿ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜನರಲ್ ಮ್ಯಾನೇಜರ್ ಧನಂಜಯಕುಮಾರ್ ತ್ರಿಪಾಠಿ, ಡೆಪ್ಯುಟಿ ಜನರಲ್ ಮ್ಯಾನೇಜರ್‌ಗಳಾದ ಕೃಷ್ಣ ಮೊಗೇರ್, ಎಚ್.ಎಸ್.ವೆಂಕಟೇಶ್, ಶೇಷಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.