ADVERTISEMENT

‘ಜಾತಿ ವಿಷ ಬೀಜ ಬಿತ್ತುತ್ತಿರುವ ಸಿದ್ದರಾಮಯ್ಯ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 7:02 IST
Last Updated 31 ಜನವರಿ 2018, 7:02 IST

ಶಿಕಾರಿಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಜಾತಿ ವಿಷ ಬೀಜವನ್ನು ಬಿತ್ತುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಡಿದ ಸೈಕಲ್‌ ವಿತರಣೆ ಒಳಗೊಂಡಂತೆ ವಿವಿಧ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದ ಅವರು, ‘ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂಬ ಭೇದವಿಲ್ಲದೇ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಭಾಗ್ಯಲಕ್ಷ್ಮಿ ಯೋಜನೆಯ ಲಾಭವನ್ನು ಮುಸ್ಲಿಂ ಮಹಿಳೆಯರು ಪಡೆದುಕೊಂಡಿದ್ದಾರೆ’ ಎಂದರು.

ಪ್ರಬಲ ವಿರೋಧ ಪಕ್ಷವಾಗಿ ಕೂಡ ದೇಶದಲ್ಲಿ ಕಾಂಗ್ರೆಸ್‌ ಉಳಿದಿಲ್ಲ. ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ. ರಾಜ್ಯದಲ್ಲೂ ಪ್ರಸ್ತುತ ಚುನಾವಣೆ ನಡೆದರೆ 125ರಿಂದ 135 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಮೂಲಕ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆಗೆ ಪ್ರಧಾನಿ ಮೋದಿ ನೀಡುವ ಹಣದ ಕುರಿತು ಮನೆ ಮನೆಗೆ ಹೋಗಿ ಕಾರ್ಯಕರ್ತರು ತಿಳಿಸಿ ಬಿಜೆಪಿ ಸಂಘಟಿಸಬೇಕು ಎಂದು ಕರೆ ನೀಡಿದರು. ಬಿಜೆಪಿ ಮಹಿಳಾ ಮೊರ್ಚಾ ರಾಜ್ಯ ಘಟಕ ಅಧ್ಯಕ್ಷೆ ಭಾರತಿ ಶೆಟ್ಟಿ, ಶಾಸಕ ಬಿ.ವೈ.ರಾಘವೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.