ADVERTISEMENT

‘ಸಮಾಜದ ತಿದ್ದುಪಡಿ ಹಾಗೂ ಸರ್ವೋತೋಮುಖ ಅಭಿವೃದ್ಧಿಗೆ ಮಹಾನ್ ಪುರುಷರ ಮಾರ್ಗದರ್ಶನ ಅಗತ್ಯ’–ಹರತಾಳು ಹಾಲಪ್ಪ.

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 7:09 IST
Last Updated 1 ಫೆಬ್ರುವರಿ 2018, 7:09 IST
ಆನಂದಪುರದ ಲಕ್ಷ್ಮೀರಂಗನಾಥ ಕಲ್ಯಾಣಮಂದಿರದಲ್ಲಿ ಬುಧವಾರ ನಡೆದ ಅಂಬಿಗರ ಚೌಡಯ್ಯರವರ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿದರು.
ಆನಂದಪುರದ ಲಕ್ಷ್ಮೀರಂಗನಾಥ ಕಲ್ಯಾಣಮಂದಿರದಲ್ಲಿ ಬುಧವಾರ ನಡೆದ ಅಂಬಿಗರ ಚೌಡಯ್ಯರವರ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿದರು.   

ಆನಂದಪುರ: ಅಭಿವೃದ್ಧಿಪರ ಚಿಂತನೆಗಳನ್ನ ಮೈಗೂಡಿಸಿಕೊಂಡ ಸಂಘಟಿತವಾದ ಸಂಘಗಳಿಂದ ಸಮಾಜಮುಖಿ ಕೆಲಸಗಳು ಆಗಬೇಕಾಗಿದ್ದು, ಸಮಾಜದ ಎಲ್ಲಾ ವರ್ಗದ ಜನರು ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸುವ ಮೂಲಕ ಪ್ರತಿಯೊಬ್ಬರು ಉತ್ತಮ ಹಾಗೂ ಸಂತೋಷಮಯ ಜೀವನ ನಡೆಸಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.

ಅವರು ಸಮೀಪದ ಲಕ್ಷ್ಮೀರಂಗನಾಥ ಕಲ್ಯಾಣ ಮಂದಿರದಲ್ಲಿ ಬುಧವಾರ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಹಾಗೂ ಗಂಗಾಮತ ಯುವ ವೇದಿಕೆಯನ್ನ ಉದ್ಘಾಟಸಿ ಮಾತನಾಡಿದರು.

ಅಂಬಿಗರ ಚೌಡಯ್ಯ ತಮ್ಮ ವಚನ ಹಾಗೂ ಕಾಯಕದ ಮೂಲಕ ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದು, ಅವರ ಆದರ್ಶಗಳು ಎಂದಿಗೂ ಪ್ರಸ್ತುತವಾದವುಗಳು. ಗಂಗಾಮತಸ್ಥ ಸಮಾಜದವರು ಸಂಘಟಿತರಾಗಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕ ಹಾಗೂ ಬೌದ್ಧಿಕವಾಗಿ ಬೆಳವಣಿಗೆ ಹೊಂದಿ ಇತರರೊಂದಿಗೆ ಸಮಾನವಾದ ಪಾಲನ್ನ ಪಡೆಯುವಂತಾಗಬೇಕು. ಈ ಕಾರಣದಿಂದ ತಮ್ಮ ಸಮಾಜದ ಗುರುಗಳನ್ನ ಗ್ರಾಮಕ್ಕೆ ಕರೆತಂದು ಮಾರ್ಗದರ್ಶನ ಪಡೆಯಬೇಕು. ಗುರುಗಳ ಮಾರ್ಗದರ್ಶನ ಪ್ರತಿಯೊಂದು ಸಮಾಜದ ಏಳಿಗೆಯಲ್ಲಿ ಅವಶ್ಯಕತೆ ಇದೆ ಎಂದು ಕಿವಿಮಾತು ಹೇಳಿದರು.

ADVERTISEMENT

ಸಾಗರ ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಮಹಾದೇವಪ್ಪ ರಂಗಣ್ಣನವರ್ ಮಾತನಾಡಿ, ಗಂಗಾಮತಸ್ಥ ಸಮಾಜದವರು ಒಗ್ಗಟ್ಟಿನ ಕೊರತೆಯಿಂದಾಗಿ ಈ ಸಮಾಜ ಹಿಂದುಳಿದ್ದು, ಇನ್ನಾದರೂ ಸಂಘಟಿತರಾಗಿ ಏಳಿಗೆ ಹೊಂದುವ ಅವಶ್ಯಕತೆಯಿದೆ. ಒಂದು ಉತ್ತಮ ಸಂಘಟನೆ ಇದ್ದರೆ ಸ್ಪೂರ್ತಿ ಹಾಗೂ ಶಕ್ತಿ ಬರುವ ಮೂಲಕ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವಲ್ಲಿ ಸಹಕಾರಿ ಆಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾರು ಒಗ್ಗೂಡಿ ಹೋರಾಟ ಮಾಡೋಣ ಎಂದು ಕರೆ ನೀಡಿದರು.

ಗಂಗಾಮತಸ್ಥ ಸಮಾಜವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕು. ಈ ಸಮಾಜಕ್ಕೆ ಒಂದು ಪುರಾತನ ಇತಿಹಾಸವಿದ್ದು ವಿದೇಶಿ ಅಲೆಗ್ಸಾಂಡರ್ ನಡುಗಿಸಿದ ಅಂಬಿರಾಜ ಇದೇ ವಂಶದವನಾಗಿದ್ದಾನೆ. ಅಂಬಿಗರು ಮಹಾಭಾರತ ರಾಮಾಯಣ ಕಾಲದಿಂದಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಚಾಲುಕ್ಯರ ಅರಸ ಮಂಗಳೇಶನು ಈ ಸಮುದಾಯಕ್ಕೆ ದೇವಸ್ಥಾನವನ್ನ ಕಟ್ಟಿಸಿದ್ದನು. ಕನ್ನಡ ಸಂಸ್ಕೃತಿಯ ಬೆಳವಣಿಗೆಯಲ್ಲೂ ಇವರ ಕೊಡುಗೆ ಅಪಾರವಾದುದು. ನಮ್ಮ ಸಮಾಜ ಉಳಿಯುವಲ್ಲಿ ಅಂಬಿಗರ ಕೊಡುಗೆ ಸ್ಮರಣಿಯವಾದದ್ದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಗರದ ಜೋಷಿ ಪೌಂಡೇಷನ್ ಸಂಸ್ಥಾಪಕ ದಿನೇಶ್ ಜೋಷಿ, ಗಂಗಾಮತ ಯುವ ವೇದಿಕೆ ಅಧ್ಯಕ್ಷ ಬಿ.ಡಿ ರವಿಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಆನಂದಿ ಲಿಂಗರಾಜ್, ಸಾಗರ ನಗರಸಭಾ ಸದಸ್ಯ ರವಿ, ಹೊಸನಗರ ಮೊಗವೀರ ಸಮಾಜ ಅಧ್ಯಕ್ಷ ತ.ಮ ನರಸಿಂಹ, ಯಡೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್, ತ್ಯಾಗರ್ತಿ ಗ್ರಾಮ ಪಂಚಾಯಿತಿ ಸದಸ್ಯರಾದ ಗೀತಾ ಪರಶುರಾಮ, ಗಣಪತಿ ಕಳ್ಳಿಮಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.