ADVERTISEMENT

ಐತಿಹಾಸಿಕ ರೇಣುಕಾಂಬಾ ಜಾತ್ರೆ ನಾಳೆಯಿಂದ

ಟಿ.ರಾಘವೇಂದ್ರ
Published 22 ಫೆಬ್ರುವರಿ 2018, 6:55 IST
Last Updated 22 ಫೆಬ್ರುವರಿ 2018, 6:55 IST
ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನ
ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನ   

ಸೊರಬ: ತಾಲ್ಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬೆ ಜಾತ್ರಾ ಮಹೋತ್ಸವದ ವಿಧಿ–ವಿಧಾನಗಳು ಆರಂಭಗೊಂಡಿದ್ದು, ಫೆ.23ರಿಂದ 25ರವರೆಗೆ ನಡೆಯುವ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈಗಾಗಲೇ ಪದ್ಧತಿಯಂತೆ ಕ್ಷೇತ್ರದಲ್ಲಿ ಒಂದು ವಾರದಿಂದ ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ದೊರೆತಿದೆ. 23ರಂದು ಹೂವಿನ ತೇರು, 24ರಂದು ಬ್ರಹ್ಮ ರಥೋತ್ಸವ   25ರಂದು ದೇವಿಗೆ ಓಕುಳಿ ನಡೆಯಲಿದೆ.   ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ  ಕಾರಣ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಪೂಜಾ ವಿಧಿ–ವಿಧಾನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ತೊಟ್ಟಿಲು ಬಾವಿ ಸಮೀಪ ದೇವರಿಗೆ ನೈವೇದ್ಯ ಹಾಗೂ ಹಣ್ಣು ಕಾಯಿ ಪೂಜೆಗೆ ಅವಕಾಶವಿದೆ. ತೊಟ್ಟಿಲು ಬಾವಿಯಲ್ಲಿ ನೀರು ತುಂಬುವುದನ್ನು ಹಾಗೂ ಬೆತ್ತಲೆ ಸೇವೆ ಮಾಡುವುದನ್ನು ಜಿಲ್ಲಾಧಿಕಾರಿ ಈಗಾಗಲೇ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ. ಜಾತ್ರಾ ಅಂಗವಾಗಿ ರೇಣುಕಾಂಬಾ ದೇವಸ್ಥಾನ ಮತ್ತು ಗ್ರಾಮದಲ್ಲಿನ ದೇವಸ್ಥಾನಗಳನ್ನು ಸಿಂಗಾರಗೊಳಿಸಿದ್ದು, ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ.

ADVERTISEMENT

ಸಮಸ್ಯೆಗಳ ಆಗರ: ಗ್ರಾಮದಲ್ಲಿ ಜೀವನದಿ ವರದಾ ಹರಿದರೂ ಕುಡಿಯುವ ನೀರಿಗೆ ಅನೇಕ ವರ್ಷಗಳಿಂದ ಬರವಿದೆ. ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭ ಗೊಂಡು   ಹಲವು ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಬವಣೆ ತಪ್ಪಿಲ್ಲ. ಹೊರಭಾಗದಿಂದ ಬರುವ ಭಕ್ತರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ. ಯಾತ್ರಿ ನಿವಾಸ ಕಾಮಗಾರಿ ಅಪೂರ್ಣಗೊಂಡಿದೆ. ಭಕ್ತರಿಂದ ಸಂಗ್ರಹವಾಗಿ ಕಾಣಿಕೆಯಿಂದ ದೇವಸ್ಥಾನಕ್ಕೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವರಮಾನವಿದ್ದರೂ ಸರ್ಕಾರ ಮತ್ತು ಇಲಾಖೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದೆ ಎನ್ನುವ ಮಾತು ಭಕ್ತರಿಂದ ಕೇಳಿ ಬರುತ್ತಿದೆ.

ಭಕ್ತರಿಗೆ  ಮೂಲಸೌಕರ್ಯಗಳನ್ನು ಒದಗಿಸಲು ಗ್ರಾಮ ಪಂಚಾಯ್ತಿ ಆಡಳಿತ ಅಗತ್ಯ ಕುಡಿಯುವ ನೀರಿಗಾಗಿ ಎರಡು ಟ್ಯಾಂಕರ್ ವ್ಯವಸ್ಥೆ ಮಾಡಿಕೊಂಡಿದೆ.  ಗ್ರಾಮದ ಮುಖ್ಯ ರಸ್ತೆಯಲ್ಲಿ ಕೊಳವೆ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದ್ದು, ಸುಲಭ ಶೌಚಾಲಯ ನಿರ್ಮಿಸಲಾಗಿದೆ. ದೂರದ ಊರುಗಳಿಂದ ಬರುವ ಭಕ್ತರಿಗೆ ಬಟ್ಟೆ ಬದಲಿಸಲು  ವ್ಯವಸ್ಥೆ ಮಾಡಲಾಗಿದೆ.

ಸೊರಬ, ಶಿರಸಿ, ಸಿದ್ದಾಪುರ ಮಾರ್ಗವಾಗಿ ಬರುವ ವಾಹನಗಳ ದಟ್ಟಣೆ ತಪ್ಪಿಸಲು ಗ್ರಾಮ ಪಂಚಾಯ್ತಿ‌ಯಿಂದ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿದೆ.
ಪ್ರತಿ ವರ್ಷ ನಡೆಯುವ ಜಾತ್ರೆಗೆ ಹಾವೇರಿ, ರಾಯಚೂರು, ಕೊಪ್ಪಳ, ದಾವಣಗೆರೆ, ಧಾರವಾಡ ಜಿಲ್ಲೆಗಳಿಂದ ಸಾವಿರಾರು ಭಕ್ತರು ವಾರದ ಹಿಂದೆ  ವಾಹನಗಳಲ್ಲಿ ಜಾತ್ರೆಗೆ ಬಂದಿಳಿದಿದ್ದು, ಜಾಗವನ್ನು ಕಾಯ್ದಿರಿಸಿ ಅಂಗಡಿ ತೆರೆದಿದ್ದಾರೆ.

ಬ್ರಹ್ಮ ರಥೋತ್ಸವದಂದು ಉಪಾಧ್ಯವಂತರು ಮತ್ತು ತಾಂತ್ರಿಕ ಅರ್ಚಕರ ಸಮ್ಮುಖದಲ್ಲಿ ಪರಿಹಾರ ದೇವತೆಗಳಿಗೆ ಅನ್ನ ಮತ್ತು ಸೊಪ್ಪಿನಿಂದ ಮಿಶ್ರಣ ಮಾಡಿದ ಆಹಾರವನ್ನು ಬಲಿ ಕೊಡುವುದರ ಮೂಲಕ ದೇವಿಯ ಪುರ ಮೆರವಣೆಗೆ ನಡೆಸಲಾಗುವುದು ಎಂದು ಪ್ರಧಾನ ಅರ್ಚಕ ಅರವಿಂದ್ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.

ಚಂದ್ರಗುತ್ತಿ ದಸರಾ ಉತ್ಸವ ಸಮಿತಿಯಿಂದ ಜಾತ್ರಾ ಅಂಗವಾಗಿ ಯಕ್ಷಗಾನ, ಗೀಗಿಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರೇಣುಕಾಂಬಾ ಗ್ರಾಮೀಣ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ತಿಳಿಸಿದರು.

ಹೆಚ್ಚುವರಿ ಬಸ್ ವ್ಯವಸ್ಥೆ

ಪ್ರತಿ ವರ್ಷದಂತೆ ಉತ್ತರ ಕರ್ನಾಟಕದ ಭಾಗದಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಸಾರಿಗೆ ಸಂಸ್ಥೆಯಿಂದ ಜಡೆ, ಆನವಟ್ಟಿ, ಶಿರಾಳಕೊಪ್ಪ ಮಾರ್ಗವಾಗಿ ಹೆಚ್ಚುವರಿ ಬಸ್ ಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.