ತೀರ್ಥಹಳ್ಳಿ: ಹೊಸದನ್ನು ಅನ್ವೇಷಿಸುವ ಆಸೆ, ಹಂಬಲ, ಭಯಕೆ ಇದ್ದರೆ ಕಲಿಕೆ ಸುಲಭ. ಕಲಿಕೆಗೆ ವಯೋಮಿತಿ ಇಲ್ಲ ಎಂಬುದಕ್ಕೆ ಇಲ್ಲಿನ ಕೆ.ಸಿ. ರಸ್ತೆ ನಿವಾಸಿ 86ರ ಇಳಿ ವಯಸ್ಸಿನ ಲಲಿತಮ್ಮ ಸಾಕ್ಷಿ.
ತಮ್ಮ 80 ವರ್ಷಗಳ ಜೀವನದಲ್ಲಿ ಹತ್ತಿ ಬಳಸಿ ದೇವರ ಮೂರ್ತಿ ಮಾಡಬಹುದು ಎಂಬ ಬಗ್ಗೆ ಒಂದಿನಿತು ಕಲ್ಪನೆಯೇ ಇಲ್ಲದ ಅವರು ಇದ್ದಕ್ಕಿಂದಂತೆ ಒಮ್ಮೆಲೇ ಹತ್ತಿಯಿಂದ ಕಲಾಕೃತಿ ರಚಿಸಲು ಆರಂಭಿಸಿರುವುದು ವಿಶೇಷ. ವಯೋಸಹಜವಾಗಿ ಬೆನ್ನು ಬಾಗಿ, ಕಣ್ಣು, ಕಿವಿ ಮಂದವಾಗುತ್ತಿದ್ದರೂ ಛಲ ಬಿಡದ ಅವರು ಇನ್ನಷ್ಟು ಕಲಾಕೃತಿ ತಯಾರಿಸುವ ಆಸೆ ಹೊಂದಿದ್ದಾರೆ.
ವೀಣೆ ನುಡಿಸುವ ಸರಸ್ವತಿ, ಶಾರದಾಂಬೆ, ಇಲಿ, ಕಾರ್ತಿಕೇಯ, ಶಿವ– ಪಾರ್ವತಿ, ರಾಮ– ಕೌಸಲ್ಯ, ಕೃಷ್ಣ, ವೆಂಕಟರಮಣ, ಲಕ್ಷ್ಮೀ, ಸರಸ್ವತಿ, ರಾಮ, ಹಂಸ, ತೊಟ್ಟಿಲಿನಲ್ಲಿ ಮಲಗಿರುವ ಕೃಷ್ಣ, ಬೆಣ್ಣೆ ಕೃಷ್ಣ, ಕಡೆಗೋಲು ಕೃಷ್ಣ, ಗೆಜ್ಜೆವಸ್ತ್ರ ಅಲ್ಲದೇ ಗಣಪತಿಯ ವಿವಿಧ ಭಂಗಿಯ ಕಲಾಕೃತಿಗಳನ್ನು ಕೇವಲ ಹತ್ತಿಯನ್ನೇ ಬಳಸಿ ತಯಾರಿಸಿದ್ದಾರೆ.
ಮೂರ್ತಿಗಳಿಗೆ ಅನುಗುಣವಾಗಿ ಬಣ್ಣಗಳನ್ನು ಬಳಕೆ ಮಾಡಿದ್ದಾರೆ. ರಂಗೋಲಿಗೆ ಬಳಸುವ ಬಣ್ಣಗಳನ್ನು ನೀರಿನಲ್ಲಿ ಕದಡಿ ನಂತರ ಹತ್ತಿಯನ್ನು ನೀರಿನಲ್ಲಿ ಮುಳುಗಿಸುತ್ತಾರೆ. ಕೆಲ ಗಂಟೆಗಳ ಕಾಲ ನೀರಿನಲ್ಲಿ ಅದ್ದಿರುವ ಹತ್ತಿಯನ್ನು ಹೊರತೆಗೆದು ಅದನ್ನು ಬಿಸಿಲಿನಲ್ಲಿ ಚನ್ನಾಗಿ ಒಣಗಿಸುತ್ತಾರೆ. ಹತ್ತಿ ಹಾಳಾಗದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಬಣ್ಣ ಹಾಕುತ್ತಾರೆ.
ಅವರು ಹತ್ತಿಯ ಕಲಾಕೃತಿ ರಚಿಸಲು ತರಬೇತಿ ಕೂಡ ಪಡೆದಿಲ್ಲ. ಮನಸ್ಸಿಗೆ ಹೊಳೆದಂತೆ ಕಲಾಕೃತಿ ರಚಿಸುವ ಕಾಯಕ ಮಾಡುತ್ತಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮತ್ತಾವರ ಗ್ರಾಮದವರು. ಎಲ್‌ಎಸ್ ಪದವಿ ಹೊಂದಿದ್ದ ಅವರು ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಮದುವೆಯ ನಂತರ ಸಂಸಾರದ ಕಷ್ಟಗಳಿಗೆ ಹೆಗಲೊಡ್ಡಿ ಪತಿ ಮಂಜುನಾಥ ಭಟ್ ಅವರಿಗೆ ನೆರವಾಗಿದ್ದರು.
60ನೇ ವರ್ಷಕ್ಕೆ ಸಂಗೀತ ಕಲಿಕೆ:
ತಮ್ಮನ್ನು ‘ಮುದುಕಿ’ ಎಂದು ಕರೆದುಕೊಳ್ಳುವ ಅವರ ಮನಸ್ಸಿನೊಳಗೆ ಅಗಾಧವಾದ ಚೈತನ್ಯ ಇದೆ. 7 ವರ್ಷಗಳ ಹಿಂದೆ ಪತಿ ತೀರಿಕೊಂಡಿದ್ದರಿಂದ ಏಕಾಂಗಿ ಜೀವನ ನಡೆಸುತ್ತಿದ್ದಾರೆ. ಗೋವುಗಳ ಮೇಲೆ ಅತಿಯಾದ ಪ್ರೀತಿ ಇದ್ದು, ಇಂದಿಗೂ ಜಾನುವಾರು ಸಾಕುತ್ತಿದ್ದಾರೆ. ತಮ್ಮ 60ನೇ ವರ್ಷದಲ್ಲಿ ಸಂಗೀತ ಕಲಿಯುವ ಆಸೆಯಿಂದ ಕರ್ನಾಟಕ ಸಂಗೀತ ಜೂನಿಯರ್ ಪರೀಕ್ಷೆ ಬರೆದಿದ್ದಾರೆ. ಸಂಗೀತ ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಆಗಿರುವುದು ವಿಶೇಷ. 6 ಅಂಕಗಳಿಂದ ಪ್ರಥಮ ಶ್ರೇಣಿ ಪಡೆಯುವ ಅವಕಾಶ ತಪ್ಪಿಸಿಕೊಂಡಿದ್ದರು. ಅವರು ‘ಮಲೆನಾಡ ಅಡುಗೆ’ ಪುಸ್ತಕ ಬರೆದಿದ್ದಾರೆ. ಅವರ ಎಲ್ಲ ಕೆಲಸಗಳಿಗೆ ಪುತ್ರಿ ಚಂಪಕಮಾಲ ನೆರವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.