ADVERTISEMENT

ಅಬ್ದುಲ್ ಹತ್ಯೆ | ಮಂಗಳೂರಿನ ಕೆಟ್ಟ ವ್ಯವಸ್ಥೆಗೆ ಬಿಜೆಪಿ ಕಾರಣ: ಗುಂಡೂರಾವ್ ಕಿಡಿ

​ಪ್ರಜಾವಾಣಿ ವಾರ್ತೆ
Published 28 ಮೇ 2025, 8:57 IST
Last Updated 28 ಮೇ 2025, 8:57 IST
<div class="paragraphs"><p>ದಿನೇಶ್ ಗುಂಡೂರಾವ್</p></div>

ದಿನೇಶ್ ಗುಂಡೂರಾವ್

   

– ಪ್ರಜಾವಾಣಿ ಚಿತ್ರ

ಶಿವಮೊಗ್ಗ: ‘ಬಿಜೆಪಿ ಹಾಗೂ ಸಂಘ ಪರಿವಾರದವರಿಗೆ ಒಂದು ಶವ ಸಿಕ್ಕರೂ ಅದರ ಮೇಲೆ ರಾಜಕೀಯ ಮಾಡುತ್ತಾರೆ. ಬಿಜೆಪಿಯವರಿಗೆ ಮುಸ್ಲಿಮರ ಬಗ್ಗೆ ಕೆಟ್ಟ ಅಭಿಪ್ರಾಯ ಇದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದರು.

ADVERTISEMENT

‘ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮುಸ್ಲಿಂ ಯುವಕ ರಹೀಂ ಹತ್ಯೆಗೆ ಸಂಬಂಧಿಸಿದಂತೆ ಬುಧವಾರ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ದುಷ್ಕರ್ಮಿಗಳು ಕೊಲೆ ಮಾಡಿರುವುದು ಬಹಳ ನೋವಿನ ಸಂಗತಿ. ಮಂಗಳೂರಿನಲ್ಲಿ ಕೆಟ್ಟ ವ್ಯವಸ್ಥೆ ನಿರ್ಮಾಣ ಆಗೋಕೆ ಬಿಜೆಪಿಗರೂ ಕೂಡ ಕಾರಣ. ಅವರದು ವಿಷ, ಕೊಳಕು ತುಂಬಿದ ಮನಸ್ಸು. ತರ್ಕ, ನ್ಯಾಯ, ಮಾನವೀಯತೆ, ಮನುಷ್ಯತ್ವ ಯಾವುದು ಅವರಿಗೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಂಗಳೂರಿನಲ್ಲಿ ಸರಣಿ ಹತ್ಯೆ ಆಗುತ್ತಿರುವುದು ಜಿಲ್ಲೆ ಹಾಗೂ ರಾಜ್ಯಕ್ಕೂ ಕೂಡ ಕೆಟ್ಟ ಹೆಸರು. ರಹೀಂ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಾಯಗೊಂಡಿದ್ದಾರೆ’ ಎಂದರು.

‘ಪೊಲೀಸರಿಗೆ ಪ್ರಾಥಮಿಕ ಸುಳಿವು ಸಿಕ್ಕಿದೆ‌. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ವೈಷಮ್ಯ, ಸೇಡು ಘಟನೆಗೆ ಕಾರಣ ಎನ್ನುವುದು ಕಂಡುಬಂದಿದೆ. ಕೋಮುವಾದದ ಕೆಟ್ಟ ವಾತಾವರಣ ಅಲ್ಲಿ ನಿರ್ಮಾಣ ಆಗಿದೆ. ಅದರ ಫಲಶೃತಿಯೇ ಈ ಘಟನೆ. ಪೊಲೀಸರ ತನಿಖೆಯ ನಂತರವೇ ಎಲ್ಲವೂ ತಿಳಿಯಲಿದೆ’ ಎಂದರು.

‘ಅಮಾನವೀಯವಾಗಿ, ಬರ್ಬರವಾಗಿ ಹತ್ಯೆ ಮಾಡಿರುವುದು ಇಡೀ ಸಮಾಜಕ್ಕೆ ಕೆಟ್ಟ ಸಂದೇಶ. ಎಲ್ಲಾ ರೀತಿಯ ಕಟ್ಟೆಚರವನ್ನು ಪೊಲೀಸರು ವಹಿಸಿದ್ದಾರೆ. ಬಿಜೆಪಿ ನಾಯಕರ ಬಾಯಿಗೆ ಲಂಗು– ಲಗಾಮಿಲ್ಲ. ಈ ಸಂದರ್ಭದಲ್ಲಿ ಪ್ರಚೋಧನಾಕಾರಿಯಾಗಿ ಮಾತನಾಡುವುದಿಲ್ಲ’ ಎಂದರು.

‘ಈ ಹಿಂದಿನ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಎಲ್ಲರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲೂ ಎಲ್ಲರನ್ನು ಬಂಧಿಸುತ್ತೇವೆ. ಕಾನೂನು ಉಲ್ಲಂಘನೆ ಆದಾಗ ಕ್ರಮ ಆಗಲೇ ಬೇಕು. ಯಾರೇ ಹತ್ಯೆ ಆದ್ರೂ ಧರ್ಮ, ಜಾತಿ ಪ್ರಶ್ನೆ ಬರಲ್ಲ, ತಪ್ಪು ಮಾಡಿದ್ದರೆ ಶಿಕ್ಷೆ ಆಗುತ್ತೆ. ಸುಹಾಸ್ ಶೆಟ್ಟಿ ಕೂಡ ರೌಡಿ ಶೀಟರ್. ಆತನ ಮೇಲು ಕೇಸ್ ಇದ್ದಾವೆ. ನಮ್ಮಲ್ಲಿ ಭೇದ ಭಾವ ಇಲ್ಲ' ಎಂದರು.

ಕೋವಿಡ್ ಈಗ ಅಂತಹ ದೊಡ್ಡ ಪರಿಣಾಮ ಬಿರುವುದಿಲ್ಲ ಎಂಬ ಮಾಹಿತಿ ಇದೆ. ಆದರೂ ಸಹ ಮುನ್ನೆಚ್ಚರಿಕೆ ವಹಿಸಬೇಕು. ಅದನ್ನು ಯಾರೂ ಸಹ ನಿರ್ಲಕ್ಷಿಸಬಾರದು. ಜನ ಇರೋ ಕಡೆ ಸೇರಿದಾಗ ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ತಿಳಿಸಿದ್ದೇವೆ. ಉಸಿರಾಟದ ಸಮಸ್ಯೆ ಇದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾರಿಗೆ ಜ್ವರ–ಶೀತ ಬಂದಿದೆಯೋ ಅಂತಹ ಮಕ್ಕಳನ್ನು ಶಾಲೆಗೆ ಕಳಿಸಬೇಡಿ ಎಂದಿದ್ದೇವೆ. ಕೋವಿಡ್ ಗೆ ನಮ್ಮ ವೈದ್ಯರು ಬರೆದು ಕೊಡುವ ಔಷಧ ನಮ್ಮ ಆಸ್ಪತ್ರೆಯಲ್ಲೇ ಸಿಗುತ್ತದೆ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಎಸ್.ಸುಂದರೇಶ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಪ್ರಮುಖರಾದ ಎಚ್.ಸಿ.ಯೋಗೀಶ, ಡಾ.ಶ್ರೀನಿವಾಸ ಕರಿಯಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.