ಮಧು ಬಂಗಾರಪ್ಪ
ಶಿವಮೊಗ್ಗ: ‘ಮಂಗಳೂರಿನ ಬಂಟ್ವಾಳ ತಾಲ್ಲೂಕಿನ ಇರಾ ಕೋಡಿಯ ಅಬ್ದುಲ್ ರಹೀಂ ಹತ್ಯೆ ಪ್ರಕರಣವನ್ನು ಪ್ರತೀಕಾರದ ಕೊಲೆ ಎಂದು ಏಕಾಏಕಿ ಬಿಂಬಿಸುವುದು ಸರಿಯಲ್ಲ. ಮೊದಲು ಕೂಲಂಕುಷವಾಗಿ ಪರಿಶೀಲಿಸಬೇಕು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಸಿದ ಅವರು, ಏಕಾಏಕಿ ಮಾಧ್ಯಮಗಳಲ್ಲಿ ಪ್ರತೀಕಾರದ ಕೊಲೆ ಎಂದು ಬಿಂಬಿಸಿದರೆ ಏನಾಗಲಿದೆ ಎಂಬುದನ್ನು ಯಾರಾದರೂ ಗಮನಿಸಿದ್ದಾರಾ ಎಂದು ಪ್ರಶ್ನಿಸಿದರು.
ಕನ್ನಡ ತಮಿಳಿನಿಂದ ಹುಟ್ಟಿರುವುದು ಎಂದು ನಟ ಕಮಲ್ ಹಾಸನ್ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಬೇರೆಯವರಿಂದ ಕನ್ನಡದ ಬಗ್ಗೆ ಕಲಿಯಬೇಕಿಲ್ಲ. ಕಮಲ್ ಹಾಸನ್ ಯಾವ ನೆಲೆಯಲ್ಲಿ ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿದ್ದಾರೆ ಎಂಬುದನ್ನು ನೋಡಬೇಕು ಎಂದರು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವನಾಗಿ ಎರಡು ವರ್ಷ ಪೂರ್ಣಗೊಳಿಸಿದ್ದು, ಮೇ 29 ರಂದು ಬೆಂಗಳೂರಿನಲ್ಲಿ ‘ಎರಡು ವರ್ಷ; ಶಿಕ್ಷಣದಲ್ಲಿ ಹರುಷ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ ಎಂದರು.
ಕೋವಿಡ್ ಬಗ್ಗೆ ಪ್ರತಿಕ್ರಿಯಿಸಿ,‘ಕೇಂದ್ರ ನೀಡುವ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಲಿದೆ. ಮಕ್ಕಳಿಗೆ ಯಾವುದೇ ಮಾರ್ಗಸೂಚಿ ಸದ್ಯಕ್ಕೆ ಇಲ್ಲ. ಆದರೆ, ಎಚ್ಚರಿಕೆಯಿಂದ ಇರಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.