ADVERTISEMENT

ಸಿಗಂದೂರು ದೇವಸ್ಥಾನಕ್ಕೆ ಸಲಹಾ ಸಮಿತಿ: ಪುನರ್ ಪರಿಶೀಲನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 13:00 IST
Last Updated 28 ಅಕ್ಟೋಬರ್ 2020, 13:00 IST
ಸಾಗರದಲ್ಲಿ ಹಿಂದುಳಿದ ವರ್ಗಗಳ ವಕೀಲರ ಒಕ್ಕೂಟದ ಪ್ರಮುಖರು ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸಲಹಾ ಸಮಿತಿ ರಚಿಸಿರುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಬುಧವಾರ ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು
ಸಾಗರದಲ್ಲಿ ಹಿಂದುಳಿದ ವರ್ಗಗಳ ವಕೀಲರ ಒಕ್ಕೂಟದ ಪ್ರಮುಖರು ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸಲಹಾ ಸಮಿತಿ ರಚಿಸಿರುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಬುಧವಾರ ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು   

ಸಾಗರ: ತಾಲ್ಲೂಕಿನ ಕರೂರು ಹೋಬಳಿಯ ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತ ನಿರ್ವಹಣೆಗೆ ಜಿಲ್ಲಾಧಿಕಾರಿ ಮೇಲ್ವಿಚಾರಣೆಹಾಗೂ ಸಲಹಾ ಸಮಿತಿ ರಚಿಸಿರುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಹಿಂದುಳಿದ ವರ್ಗಗಳ ಒಕ್ಕೂಟದ ವಕೀಲರು ಬುಧವಾರ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಸಿಗಂದೂರು ಚೌಡೇಶ್ವರಿ ದೇವಿ ಧರ್ಮದರ್ಶಿ ರಾಮಪ್ಪ ಅವರ ಮನೆತನದ ದೇವರು. ಹಿರೇಭಾಸ್ಕರ ಹಾಗೂ ಲಿಂಗನಮಕ್ಕಿ ಡ್ಯಾಂ ಹಿನ್ನೀರಿನಲ್ಲಿ ಮುಳುಗಡೆಯಾದ ನಂತರ ದೇವರ ಮೂರ್ತಿಯನ್ನು ಈಗಿರುವ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ರಾಮಪ್ಪನವರ ಕುಟುಂಬದವರೇ ಪೂಜಾ ವಿಧಿವಿಧಾನ, ಹೋಮ ಹವನಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹೀಗಿರುವಾಗ ದೇವಸ್ಥಾನದ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಮನವಿಯಲ್ಲಿ ಒತ್ತಾಯಿಸಿದರು.

ಸಿಗಂದೂರು ಕ್ಷೇತ್ರದಲ್ಲಿ ಭಕ್ತರಿಗೆ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಉಚಿತವಾಗಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಕಡಿಮೆ ಮೊತ್ತದ ಶುಲ್ಕದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯಿಂದ ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ ಹಲವು ಕ್ಷೇತ್ರಗಳ ಸಾಧಕರಿಗೆ ನೆರವು ನೀಡಲಾಗುತ್ತಿದೆ. ಹೀಗಿರುವಾಗ ಮೇಲ್ವಿಚಾರಣಾ ಅಥವಾ ಸಲಹಾ ಸಮಿತಿ ರಚನೆಯ ಅಗತ್ಯ ಇಲ್ಲ ಎಂದು ಹೇಳಿದರು.

ADVERTISEMENT

ಈಚೆಗೆ ದೇವಸ್ಥಾನದ ಪೂಜಾವಿಧಿವಿಧಾನಗಳ ಕುರಿತು ಕೆಲವರು ಸಾಗರದ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದು, ನ್ಯಾಯಾಧೀಶರು ಧರ್ಮದರ್ಶಿ ರಾಮಪ್ಪ ಹಾಗೂ ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರನ್ನು ನ್ಯಾಯಾಲಯಕ್ಕೆ ಕರೆಯಿಸಿ ಮಾತುಕತೆ ನಡೆಸಿದ್ದಾರೆ. ರಾಜಿ ಸಂಧಾನದ ಮೂಲಕ ವಿವಾದವನ್ನು ಬಗೆಹರಿಸಿರುತ್ತಾರೆ. ಈ ಕಾರಣದಿಂದಲೂ ದೇವಸ್ಥಾನಕ್ಕೆ ಸಲಹಾ ಸಮಿತಿ ರಚನೆ ಅಗತ್ಯ ಇಲ್ಲ ಎಂದು ಒತ್ತಾಯಿಸಿದರು.

ಯಾವುದೇ ಮುನ್ಸೂಚನೆ ನೀಡದೆ, ಲಿಖಿತ ತಿಳಿವಳಿಕೆ ನೀಡದೆ ಜಿಲ್ಲಾಧಿಕಾರಿ ದೇವಸ್ಥಾನಕ್ಕೆ ಸಲಹಾ ಸಮಿತಿ ರಚಿಸಿರುವ ಕ್ರಮ ಕಾನೂನಿನ ನಿಯಮಗಳಿಗೆ ವಿರುದ್ಧ. ಜಿಲ್ಲಾಧಿಕಾರಿ ತಮ್ಮ ಅಧಿಕಾರವ್ಯಾಪ್ತಿಯನ್ನು ಮೀರಿ ವರ್ತಿಸಿರುವುದರಿಂದ ಅವರು ತಮ್ಮ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಪ್ರಮುಖರಾದ ಎಚ್.ಎನ್. ದಿವಾಕರ್, ಪಿ. ತ್ಯಾಗಮೂರ್ತಿ, ಎಂ. ಜಯಪ್ಪ, ಟಿ.ಜಿ. ಸೋಮಶೇಖರ್, ಕೆ. ಮುದ್ದು, ಮಹಾಬಲೇಶ್ವರ ಕೆ.ಬಿ., ರಮೇಶ ಮರ್ತೂರು, ರಮೇಶ್ ಶಿರವಾಳ, ಸಿ. ಪರಮೇಶ್ವರ, ಕೃಷ್ಣಮೂರ್ತಿ ಕುಗ್ವೆ, ಮಂಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.