
ಪ್ರಜಾವಾಣಿ ವಾರ್ತೆ
ಶಿವಮೊಗ್ಗ: ಮಲೆನಾಡು, ಕರಾವಳಿ ಹಾಗೂ ಬಯಲು ಸೀಮೆಯ ವಾರ್ಷಿಕ ಹಬ್ಬ ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ ಇಲ್ಲಿನ ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಭರ್ಜರಿ ಆರಂಭ ದೊರೆಯಿತು.
ಮಧ್ಯಾಹ್ನ ವಿಶ್ವವಿದ್ಯಾಲಯದ ಆವರಣಕ್ಕೆ ಬಂದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಡೊಳ್ಳು ವಾದನದ ಮೂಲಕ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಮೊದಲಿಗೆ ಹೂವು ಕೃಷಿಯ ತಾಕುಗಳಿಗೆ ಭೇಟಿ ನೀಡಿದ ಸಚಿವರನ್ನು ಕುಲಪತಿ ಪ್ರೊ.ಆರ್.ಸಿ. ಜಗದೀಶ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಕಾಂಗ್ರೆಸ್ ಮುಖಂಡ ಎಚ್.ಸಿ. ಯೋಗೀಶ್ ನೇತೃತ್ವದಲ್ಲಿ ಮೇಳದ ಪರಿಸರಕ್ಕೆ ಕರೆದೊಯ್ದು ಬೇರೆ ಬೇರೆ ವಿಭಾಗಗಳ ಮಾಹಿತಿ ಕೊಡಿಸಲಾಯಿತು. ಸಚಿವರನ್ನು ಸ್ವಾಗತಿಸಲು ಅಮೃತ್‌ಮಹಲ್ ತಳಿಯ ರಾಸೊಂದನ್ನು ಸಿಂಗರಿಸಿ ತಂದಿದ್ದು ವಿಶೇಷವಾಗಿತ್ತು.
ಮೇಳದ ಬೇರೆ ಬೇರೆ ಸ್ಟಾಲ್‌ಗಳಿಗೆ ಭೇಟಿ ನೀಡಿದ ಸಚಿವರು, ಮಾಹಿತಿ ಪಡೆದರು. ಅಡಿಕೆ, ಗೋಡಂಬಿ ಹಾಗೂ ಭತ್ತದ ಪೈರಿನ ಬಗ್ಗೆ ವಿಶೇಷವಾಗಿ ಅಲಂಕರಿಸಿದ್ದ ಸ್ಟಾಲ್‌ಗಳಿಗೆ ತೆರಳಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಮುಖ್ಯ ವೇದಿಕೆಗೆ ತೆರಳಿದರು.
ರೈತರ ಭರ್ಜರಿ ಸ್ಪಂದನೆ: ಮೇಳದ ಮೊದಲ ದಿನವೇ ಏಳು ಜಿಲ್ಲೆಗಳ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ವಿವಿಧ ಯೋಜನೆಗಳಡಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿ ರೈತರನ್ನು ಮೇಳದ ವೀಕ್ಷಣೆಗೆ ಕರೆತರಲಾಗಿತ್ತು. ಬಹಳಷ್ಟು ರೈತರು ಸ್ವಂತ ಖರ್ಚಿನಲ್ಲಿ ಮೇಳದ ವೀಕ್ಷಣೆಗೆ ಬಂದಿದ್ದರು. ಅವರಲ್ಲಿ ರೈತ ಮಹಿಳೆಯರು ಇದ್ದದ್ದೂ ವಿಶೇಷವಾಗಿತ್ತು.
ಮೊದಲ ದಿನ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಮೇಳದ ವೀಕ್ಷಣೆಗೆ ಬಂದ ರೈತರು ತಜ್ಞರಿಂದ ಕೃಷಿಯಲ್ಲಿನ ಹೊಸ ಹೊಸ ಆವಿಷ್ಕಾರಗಳು, ಸಂಶೋಧನೆ ಹಾಗೂ ತಾಂತ್ರಿಕತೆಗಳ ಬಗ್ಗೆ ಮಾಹಿತಿ ಪಡೆದರು. ಮೇಳದ ಪಡಸಾಲೆಯಲ್ಲಿ ಆಹಾರ, ತಿಂಡಿ ಮಳಿಗೆಗಳು ಇದ್ದು, ಧಾರವಾಡ ಪೇಡೆ, ಬೆಳಗಾವಿಯ ಕುಂದಾ, ಮೇಲುಕೋಟೆಯ ಪುಳಿಯೊಗರೆ, ಮಲೆನಾಡಿನ ಸಿಹಿ ಖಾದ್ಯ ತೊಡದೇವು, ಕೋಳಿ ಗಸಿ, ಅಕ್ಕಿ ಕಡುಬು, ಚಿಕನ್ ಬಿರಿಯಾನಿಯ ಘಮಲು ಹರಡಿತ್ತು.
ಬಟ್ಟೆ, ಗೃಹೋಪಯೋಗಿ ವಸ್ತುಗಳು, ಆಟಿಕೆಗಳನ್ನು ಖರೀದಿಸಿದರು. ಕರುಂಗಲಿ ಮಾಲೆಯ ಮಾರಾಟದ ಮಳಿಗೆಯೂ ಕಾಣಸಿಕ್ಕಿತು. ಮೊದಲ ದಿನವೇ ನರ್ಸರಿಗಳಲ್ಲಿ ಮುಗಿಬಿದ್ದಿದ್ದ ರೈತರು ಹಣ್ಣು, ತರಕಾರಿ, ಹೂವಿನ ಗಿಡಗಳು, ಅರಣ್ಯ ಕೃಷಿಗೆ ಸಸಿಗಳನ್ನು ಖರೀದಿಸಿ ಕೊಂಡೊಯ್ದರು.
ಮೇಳದ ಮೊದಲ ದಿನ 45,000 ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ.ಮಲ್ಲಿಕಾರ್ಜುನ ಮಾಹಿತಿ ನೀಡಿದರು. ಮಧ್ಯಾಹ್ನ ಊಟದ ಅವಧಿಯ ನಂತರ ಶುರುವಾದ ತಾಂತ್ರಿಕ ಮೇಳದಲ್ಲೂ ಹೆಚ್ಚಿನ ರೈತರು ಇದ್ದು, ಚರ್ಚೆಯಲ್ಲಿ ಪಾಲ್ಗೊಂಡರು.
ಕಳೆದ ವರ್ಷ ಕೃಷಿ ಮೇಳ ಭಾರೀ ಮಳೆಗೆ ಸಿಲುಕಿ ಅಸ್ತವ್ಯಸ್ತವಾಗಿತ್ತು. ಆದರೆ, ಈ ಬಾರಿ ಮಳೆರಾಯ ಕೃಪೆ ತೋರಿದ್ದು, ಮಳಿಗೆಗೆ ಬರುವವರು ಹಾಗೂ ಪ್ರದರ್ಶಕರ ಸಂಖ್ಯೆಯೂ ಹೆಚ್ಚಳಗೊಂಡಿರುವುದು ಕಂಡುಬಂದಿತು.
ಸಹ್ಯಾದ್ರಿ ಸಿಂಧೂರ ಕೆಎಚ್‌ಪಿ 11: ಸಚಿವರ ಮೆಚ್ಚುಗೆ
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ 2025–26ನೇ ಸಾಲಿನಲ್ಲಿ ಬಿಡುಗಡೆ ಮಾಡಿರುವ ಸಹ್ಯಾದ್ರಿ ಸಿಂಧೂರ ಹೆಸರಿನ ಭತ್ತದ ತಳಿಯ ಬಗ್ಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾಷಣದಲ್ಲಿ ಅದನ್ನು ಪ್ರಸ್ತಾಪಿಸಿದರು. ‘ಸಹ್ಯಾದ್ರಿ ಸಿಂಧೂರ ದಕ್ಷಿಣ ಭಾರತದಲ್ಲಿಯೇ ಮೊದಲ ಸಣ್ಣ ಕೆಂಪಕ್ಕಿ ಭತ್ತದ ತಳಿ ಡಾ.ಬಿ.ಎಂ.ದುಷ್ಯಂತಕುಮಾರ್ ನೇತೃತ್ವದಲ್ಲಿ ಇದನ್ನು ಅಭಿವೃದ್ಧಿಪಡಿಸಿದ್ದು ಅರೆಮಲೆನಾಡು ಪ್ರದೇಶಕ್ಕೆ ಇದನ್ನು ಶಿಫಾರಸು ಮಾಡಲಾಗಿದೆ. ಈ ತಳಿ ಬೆಂಕಿ ರೋಗಕ್ಕೂ ಮಧ್ಯಮ ಪ್ರತಿರೋಧಕತೆ ಹೊಂದಿದೆ’ ಎಂದು ಸಂಘಟಕರು ಸಚಿವರಿಗೆ ಮಾಹಿತಿ ನೀಡಿದರು. ‘ಬೆಂಕಿರೋಗಕ್ಕೆ ಪಶ್ಚಿಮಘಟ್ಟದ ಪ್ರಮುಖ ಕೀಟಗಳ ಬಾಧೆಗೆ ನಿರೋಧಕತೆ ಹೊಂದಿರುವ ದೀರ್ಘಾವಧಿ ಭತ್ತದ ತಳಿ ಕೆಎಚ್‌ಪಿ 11 ಬಿಡುಗಡೆ ಮಾಡಲಾಗಿದ್ದು ಅದನ್ನು ಗುಡ್ಡಗಾಡು ವಲಯಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಸಚಿವರಿಗೆ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.