ADVERTISEMENT

ಆನಂದಪುರ: ತೋಟಗಾರಿಕೆಯತ್ತ ಒಲವು.. ಮಿಶ್ರ ಬೆಳೆಗಳಿಂದ ಗೆಲುವು...

ಹೆಬ್ಬೊಡಿಯ ರೈತ ಷಣ್ಮುಖಪ್ಪನವರ ಪ್ರಯೋಗ

ಎಂ.ಮಲ್ಲಿಕಾರ್ಜುನ
Published 28 ಡಿಸೆಂಬರ್ 2022, 4:15 IST
Last Updated 28 ಡಿಸೆಂಬರ್ 2022, 4:15 IST
ಬಾಳೆ ಹಾಗೂ ಅಡಿಕೆ ತೋಟದಲ್ಲಿ ಶಣ್ಮುಖಪ್ಪ ಅವರ ಮಗ ರಘು.
ಬಾಳೆ ಹಾಗೂ ಅಡಿಕೆ ತೋಟದಲ್ಲಿ ಶಣ್ಮುಖಪ್ಪ ಅವರ ಮಗ ರಘು.   

ಆನಂದಪುರ: ಆಸಕ್ತಿ ಮತ್ತು ಶ್ರಮದೊಂದಿಗೆ ಕೃಷಿಯಲ್ಲಿ ತೊಡಗಿದಲ್ಲಿ ನೆಮ್ಮದಿಯ ಜೀವನ ಸಾಧ್ಯ ಎಂಬುದಕ್ಕೆ ಹೆಬ್ಬೊಡಿಯ ಷಣ್ಮುಖಪ್ಪ ಹಾಗೂ ಅವರ ಕುಟುಂಬ ಮಾದರಿಯಾಗಿದೆ.

1 ಎಕರೆ ಪಿತ್ರಾರ್ಜಿತ ಆಸ್ತಿ ಹೊಂದಿದ್ದ ಇವರು, ಬಡತನದ ಜೀವನ ಸಾಗಿಸುತ್ತಲೇ 40 ವರ್ಷಗಳಿಂದ ಹಾಲು ವ್ಯಾಪಾರ ಮಾಡುತ್ತಿದ್ದಾರೆ. ಕೃಷಿಯಲ್ಲಿ ದೊರೆತ ಆದಾಯದ ಸಹಾಯದಿಂದಲೇ ಇದೀಗ 15 ಎಕರೆ ಜಮೀನು ಹೊಂದಿದ್ದಾರೆ. ಕೃಷಿಯಿಂದ ಉತ್ತಮ ಆದಾಯ ಬರುತ್ತಿರುವ ನಡುವೆಯೂ ಹಾಲು ವ್ಯಾಪಾರ ಮುಂದುವರಿಸಿದ್ದಾರೆ.

ಆರಂಭದಲ್ಲಿ ಹತ್ತಿ, ಜೋಳ ಬೆಳೆಯುತ್ತಿದ್ದ ಇವರು, 15 ವರ್ಷಗಳಿಂದ ತೋಟಗಾರಿಕೆ ಬೆಳೆಗಳಿಗೆ ಒತ್ತು ನೀಡಿ ಯಶಸ್ಸು ಕಂಡಿದ್ದಾರೆ. ಇವರ ಕೃಷಿ ಚಟುವಟಿಕೆಗೆ ಇಬ್ಬರು ಗಂಡುಮಕ್ಕಳು ಹಾಗೂ ಸೊಸೆಯಂದಿರು ನೆರವಾಗಿದ್ದಾರೆ.

ADVERTISEMENT

ಮಿಶ್ರ ಬೆಳೆ ತಂದ ಆದಾಯ: ಒಂದೇ ಬೆಳೆಗೆ ಜೋತು ಬಿದ್ದು ಸಮಯ ವ್ಯರ್ಥ ಮಾಡಿಕೊಂಡು, ನಷ್ಟ ಅನುಭವಿಸುವುದಕ್ಕಿಂತ ಮಿಶ್ರ ಬೆಳೆ ಬೆಳೆದರೆ ಆದಾಯ ದ್ವಿಗುಣ ಮಾಡಕೊಳ್ಳಬಹುದು ಎಂದೇ ಅಡಿಕೆಯ ಮಧ್ಯ ಬಾಳೆ ಹಾಕಿದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಮಾರುಕಟ್ಟೆ ಸಮಸ್ಯೆ ಇಲ್ಲ: ಸ್ಥಳೀಯರೇ ಬಂದು ಬೆಳೆ ಕಟಾವು ಮಾಡಿಕೊಂಡು ಉಡುಪಿ, ಮಂಗಳೂರಿಗೆ ತೆಗೆದುಕೊಂಡು ಹೋಗುವುದರಿಂದ ಇಲ್ಲಿಯವರೆಗೆ ಮಾರುಕಟ್ಟೆ ಸಮಸ್ಯೆ ಕಂಡುಬಂದಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದಾಗ ಹೆಚ್ಚಿನ ಬೆಲೆ ಕೊಟ್ಟು ತೆಗೆದುಕೊಂಡು ಹೋಗುವುದರಿಂದ ಸ್ಥಳೀಯ ಮಧ್ಯವರ್ತಿಗೆ ಬಾಳೆಯನ್ನು ನೀಡುತ್ತಿದ್ದೇವೆ ಎಂದು ಷಣ್ಮುಖಪ್ಪ ತಿಳಿಸುತ್ತಾರೆ.

ಬಾಳೆಯಿಂದ ಉತ್ತಮ ಆದಾಯ ಸಿಗುತ್ತದೆ. ಮಿಶ್ರ ಬೆಳೆಯಾಗಿಯೂ ಅದನ್ನು ಬೆಳೆಯಬಹುದು. ಆದರೆ, ಆಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಠಿ ಸಂದರ್ಭ ಸರ್ಕಾರ ರೈತರ ನೆರವಿಗೆ ಧಾವಿಸಿದರೆ ಒಳಿತು. ಈ ಹಿಂದೆ ಬಿರುಗಾಳಿಗೆ ಸಿಲುಕಿ ಇಡೀ ಬಾಳೆತೋಟವೇ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಷವಾಗಿತ್ತು ಎಂದೂ ಅವರು ಹೇಳುತ್ತಾರೆ.

ನಿಶ್ಚಿತ ಬೆಳೆಯಾಗಿ ತೇಗ: ‘ಕೇವಲ ಆಹಾರಧಾನ್ಯ ಹಾಗೂ ವಾಣಿಜ್ಯ ಬೆಳೆಗಳತ್ತ ಗಮನ ನೀಡದೇ ನಿಶ್ಚಿತ ಆದಾಯ ನೀಡುವ ಬೆಳೆ ಬೆಳೆಯಲು ಮುಂದಾಗಬೇಕು. ಅಡಿಕೆ, ಶುಂಠಿ, ಜೋಳ, ಕಾಳುಮೆಣಸು ಮುಂತಾದ ಬೆಳೆಗಳು ನಷ್ಟವಾದಾಗ ಅಥವಾ ದರ ಕುಸಿತವಾದಾಗ ದೀರ್ಘಾವಧಿ ಬೆಳೆಗಳು ಸಹಾಯಕ್ಕೆ ಬರುತ್ತವೆ. ಇದಕ್ಕಾಗಿ ಬೇರೆ ಜಮೀನಿನ ಅವಶ್ಯಕತೆ ಇಲ್ಲ. ನಾವು ಬೆಳೆದ ಬೆಳೆಗಳ ಸುತ್ತಲೂ ಪರ್ಯಾಯ ಬೆಳೆಯಾಗಿ ಬೆಳೆಯಬಹುದು. ಇದರಿಂದ ಜಾಗದ ಉಳಿತಾಯದ ಜೊತೆಗೆ ನಿಶ್ಚಿತ ಆದಾಯವೂ ಸಿಗುತ್ತದೆ’ ಎಂದು ಸಲಹೆ ನೀಡಿದರು.

ಇವರ ಹಳೆಯ ತೋಟದ ಅಡಿಕೆ ಮರಗಳಿಗೆ ಕಾಳು ಮೆಣಸು ಬಳ್ಳಿಗಳನ್ನು ಹಬ್ಬಿಸಿದ್ದು, ಉತ್ತಮ ಆದಾಯ ಪಡೆಯುತ್ತಿದ್ದಾರೆ. ಇದಲ್ಲದೇ ಮನೆ ಬಳಕೆಗೆ ಬೇಕಾದ ತೆಂಗು, ಏಲಕ್ಕಿ ಲಿಂಬು, ಕಿತ್ತಳೆ, ಕಾಫಿ, ಭತ್ತ ಮತ್ತಿತರ ಬೆಳೆಗಳನ್ನೂ ಬೆಳೆಯುತ್ತಿದ್ದಾರೆ.

ಜೊತೆಗೆ ವಾಣಿಜ್ಯ ಬೆಳೆಯಾಗಿ 2 ಎಕರೆಯಲ್ಲಿ ರಬ್ಬರ್ ಮತ್ತು ಕಬ್ಬನ್ನೂ ಬೆಳೆದಿದ್ದು, ಉತ್ತಮ ಆದಾಯವೇ ಸಿಗುತ್ತಿದೆ.

****

ಕಷ್ಷಪಟ್ಟು ದುಡಿದ ಪರಿಣಾಮ ಇಂದು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ. 1 ಎಕರೆಯಿಂದ ಆರಂಭಿಸಿ 15 ಎಕರೆ ಜಮೀನು ಖರೀದಿಸಿದ್ದೇವೆ.

-ಷಣ್ಮುಖಪ್ಪ, ರೈತ, ಹೆಬ್ಬೊಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.