ಸಾಗರ: ‘ನನ್ನ ತಂದೆಯ ಆಸೆಯಂತೆ ಕೃಷಿ ವಿಶ್ವವಿದ್ಯಾಲಯದ ಪದವಿ ಪಡೆಯಬೇಕು ಎಂಬ ಹಂಬಲ ನಾಲ್ಕು ಚಿನ್ನದ ಪದಕಗಳೊಂದಿಗೆ ಈಡೇರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ’ ಎಂದು ಹೇಳುವಾಗ ಶಿವಮೊಗ್ಗದ ಸಂಜಿತಾ ಎನ್.ಎಸ್. ಅವರ ಕಣ್ಣುಗಳಲ್ಲಿ ಮಿಂಚಿನ ಹೊಳೆ ಹರಿದಿತ್ತು.
ಶಿವಮೊಗ್ಗದ ರವೀಂದ್ರ ನಗರದಲ್ಲಿ ಅಡುಗೆ ಭಟ್ಟರಾಗಿರುವ ಸುರೇಶ್, ಗೃಹಿಣಿ ಸುಧಾ ಅವರ ಪುತ್ರಿ ಸಂಜಿತಾ ಎಂಎಸ್ಸಿಯಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.
‘ಆರ್ಥಿಕವಾಗಿ ನಮ್ಮ ಕುಟುಂಬ ಸಬಲವಾಗಿಲ್ಲ. ಹೀಗಾಗಿ ಶಿಕ್ಷಣವೇ ನಮಗೆ ಆಧಾರಸ್ತಂಭ ಎಂಬ ತಿಳಿವಳಿಕೆಯಿಂದ ಶ್ರಮ ವಹಿಸಿ ಓದಿದ ಪರಿಣಾಮವಾಗಿ ಒಳ್ಳೆಯ ಫಲಿತಾಂಶ ಸಿಕ್ಕಿದೆ. ಮುಂದೆ ಸಂಶೋಧನೆ ಕೈಗೊಂಡು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಗುರಿ ಇದೆ’ ಎಂದು ಸಂಜಿತಾ ಹೇಳಿದರು.
ಕೇರಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಹಿರಿಯೂರಿನ ತೋಟಗಾರಿಕೆ ಕಾಲೇಜಿನಲ್ಲಿ ಅಧ್ಯಯನ ನಡೆಸಿ ನಾಲ್ಕು ಚಿನ್ನದ ಪದಕಗಳನ್ನು ಪಡೆದಿರುವ ಕೆ.ಬಿ. ದೇವಿಕಾ, ‘ ನನ್ನ ಅಜ್ಜಿಯ ಇಚ್ಛೆಯಂತೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ತೋಟಗಾರಿಕೆ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಬೇಕು ಎಂಬುದು ಮುಂದಿನ ಗುರಿಯಾಗಿದೆ’ ಎಂದು ಸಂತಸ ಹಂಚಿಕೊಂಡರು.
ಹುಟ್ಟಿನಿಂದಲೇ ಎರಡೂ ಕಾಲಗಳ ಸ್ವಾಧೀನವನ್ನು ಕಳೆದುಕೊಂಡು ಊರುಗೋಲಿನ ಸಹಾಯದಿಂದಲೇ ನಡೆಯುವ ಚನ್ನಗಿರಿಯ ನವೀನ್ ಎ.ಡಿ. ಎಂಎಸ್ಸಿ ಪದವಿ ಪಡೆದ ಸಂಭ್ರಮವನ್ನು ಹಂಚಿಕೊಂಡರು.
‘ಅಂಗವೈಕಲ್ಯ ಎಂಬುದು ನನಗೆ ಯಾವತ್ತೂ ಸಮಸ್ಯೆಯಾಗಿಲ್ಲ. ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲೆ ಮುಂದುವರಿಯಬೇಕು ಎಂಬುದು ನನ್ನ ಮಹದಾಸೆ. ಅದಕ್ಕೆ ಪೂರಕವಾಗಿ ಕೃಷಿ ವಿಸ್ತರಣೆ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ’ ಎಂದು ಹೇಳುವಾಗ ನವೀನ್ ಮುಖದಲ್ಲಿ ಸಾರ್ಥಕತೆಯ ಭಾವ ಎದ್ದು ಕಾಣುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.