ಶಿವಮೊಗ್ಗ: ‘ನಿಗಮದಲ್ಲಿ ಶಿಸ್ತು ಹಾಗೂ ಪಾರದರ್ಶಕತೆ ತಂದ ಕಾರಣಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ. ಶೀಘ್ರ ಬೆಂಗಳೂರಿಗೆ ತೆರಳಿ ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ’ ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪಕ್ಷಕ್ಕೆ ಮುಜುಗರ ಆಗುವುದನ್ನು ತಡೆಯಲು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೂಡಲು ವೈಯಕ್ತಿಕವಾಗಿ ನಾನೂ ನಿರ್ಧರಿಸಿದ್ದೇನೆ' ಎಂದರು.
‘ವಿಡಿಯೊದಲ್ಲಿ ತೋರಿಸಿದಂತೆ ನಾನು ಯಾರ ಬಳಿಯೂ ಹಣ ಪಡೆದಿಲ್ಲ. ಯಾರಿಗೂ ಕೊಟ್ಟಿಲ್ಲ. ಕಮಿಷನ್ ವಿಚಾರವನ್ನೂ ಮಾತನಾಡಿಲ್ಲ. ಕೃತಕ ಬುದ್ಧಿಮತ್ತೆ (ಎಐ) ತಾಂತ್ರಿಕತೆ ಬಳಸಿ ವಿಡಿಯೊದಲ್ಲಿನ ಸಂಭಾಷಣೆ ತಿರುಚಲಾಗಿದೆ. ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿದರೆ ವಾಸ್ತವ ಸಂಗತಿ ಗೊತ್ತಾಗಲಿದೆ’ ಎಂದರು.
‘ನಿಗಮದ ಕಚೇರಿಯಲ್ಲಿಯೇ ಆ ರೀತಿ ವಿಡಿಯೊ ಚಿತ್ರೀಕರಿಸಿ ತಿರುಚಲಾಗಿದೆ. ಅದರಲ್ಲಿ ನಿಗಮದ ಅಧಿಕಾರಿಗಳ ಪಾತ್ರವೂ ಇರಬಹುದು. ರಾಜಕೀಯ ವಿರೋಧಿಗಳ ಜೊತೆ ಕೈಜೋಡಿಸಿ ಈ ರೀತಿ ಷಡ್ಯಂತ್ರ ಹೆಣೆಯಲಾಗಿದೆ. ಈ ಬಗ್ಗೆ ಗುರುವಾರ ಸಿಎಂ ಹಾಗೂ ಡಿಸಿಎಂ ಭೇಟಿಯಾಗಿ ಮನವರಿಕೆ ಮಾಡಿಕೊಟ್ಟು ಇಡೀ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಲಿದ್ದೇನೆ’ ಎಂದರು.
‘ಭೋವಿ ಸಮುದಾಯ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೂ ಧಕ್ಕೆಯಾಗಿದೆ. ಹೀಗಾಗಿ ಸರ್ಕಾರ ಗಂಭೀರ ತನಿಖೆ ಮಾಡಬೇಕು’ ಎಂದು ಒತ್ತಾಯಿಸಿದರು.
'ನಿಗಮದಲ್ಲಿ ಈ ಹಿಂದೆ ದೊಡ್ಡ ಹಗರಣ ನಡೆದಿರುವುದರಿಂದ ನಾನು ಅದನ್ನು ಮುಳ್ಳಿನ ಕುರ್ಚಿ ಎಂದೇ ಭಾವಿಸಿ ಎಚ್ಚರಿಕೆಯಿಂದ ಕೆಲಸ ಮಾಡಿದ್ದೇನೆ. ಭ್ರಷ್ಟಾಚಾರ ತಡೆಗೆ ಬಿಗಿ ಕ್ರಮ ಕೈಗೊಂಡಿದ್ದೆ. ಅದನ್ನು ಸಹಿಸಲಾರದೇ ವಿಡಿಯೊ ತಿರುಚಲಾಗಿದೆ' ಎಂದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸೇರಿದಂತೆ ಯಾರಿಗೂ ಕಮಿಷನ್ ಕೊಟ್ಟಿಲ್ಲ. ಎಲ್ಲವೂ ಷಡ್ಯಂತ್ರ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.