ADVERTISEMENT

ಅಂಬಾರಗುಡ್ಡ: ರೈತರಿಗೆ ಉರುಳಾದ ಜೀವವೈವಿಧ್ಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 6:13 IST
Last Updated 27 ಅಕ್ಟೋಬರ್ 2025, 6:13 IST
ಅಂಬಾರಗುಡ್ಡ ಪ್ರದೇಶ
ಅಂಬಾರಗುಡ್ಡ ಪ್ರದೇಶ   

ಅಂಬಾರಗುಡ್ಡ (ತುಮರಿ): ‘ಶರಾವತಿ ಎಡದಂಡೆ ಹಿನ್ನೀರಿನ ಪ್ರದೇಶದಲ್ಲಿರುವ ಅಂಬಾರಗುಡ್ಡದ ಜನವಸತಿ ಪ್ರದೇಶಗಳ ಭೂಹಕ್ಕುಗಳು ಪರಿಸರ ಸೂಕ್ಷ್ಮ ವಲಯದ ಹೆಸರಿನಲ್ಲಿ ಅರಣ್ಯ ಇಲಾಖೆಗೆ ವರ್ಗಾವಣೆ ಆಗಿರುವುದಕ್ಕೆ ಈ ಭಾಗದ ಜನರು ಆತಂಕ ವ್ಯಕ್ತಪಡಿಸಿದ್ದು, ರೈತರು ಶಾಶ್ವತವಾಗಿ ಭೂಹಕ್ಕಿನಿಂದ ವಂಚಿತರಾಗುವುದು ಸ್ಪಷ್ಟವಾಗಿದೆ.

ಅಂಬಾರಗುಡ್ಡ ಪರ್ವತ ಶ್ರೇಣಿಯು ಶರಾವತಿ ಉಪನದಿಗಳ ಉಗಮಸ್ಥಳದ ಜೊತೆಗೆ ಹೇರಳವಾದ ಮ್ಯಾಂಗನೀಸ್ ಅದಿರನ್ನು ಹೊಂದಿರುವ ಭೂ ಪ್ರದೇಶವಾಗಿದೆ. ಎರಡು ದಶಕಗಳ ಹಿಂದೆ ಬೆಂಗಳೂರಿನ ಖಾಸಗಿ ಕಂಪನಿಯೊಂದು ಇಲ್ಲಿ ಏಕಾಏಕಿ ಗಣಿಗಾರಿಕೆ ಆರಂಭಿಸಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ‘ಅಂಬಾರಗುಡ್ಡ ಉಳಿಸಿ ಹೋರಾಟ’ಕ್ಕೆ ಚಾಲನೆ ಸಿಕ್ಕಿ, ನ್ಯಾಯಾಲಯದ ಆದೇಶದ ಮೇರೆಗೆ ಗಣಿಗಾರಿಕೆಗೆಯು ಸ್ಥಗಿತಗೊಂಡಿತ್ತು.

ಅಂಬಾರಗುಡ್ಡ ಉಳಿವಿಗೆ ಇಲ್ಲಿನ 400 ಎಕರೆ ಭೂ ಪ್ರದೇಶವನ್ನು ‘ಪರಿಸರ ಸೂಕ್ಷ್ಮ ವಲಯ’ ಎಂಬುದಾಗಿ ಘೋಷಿಸುವಂತೆ ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ಪಶ್ಚಿಮಘಟ್ಟ ಕಾರ್ಯಪಡೆಯ ಅಂದಿನ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, 400 ಎಕರೆ ಬದಲಾಗಿ ಸ್ಥಳೀಯ ಜನರ ಗಮನಕ್ಕೆ ತಾರದೇ ಜೀವವೈವಿಧ್ಯ ಅಧಿನಿಯಮ, 2002ರ ಸೆಕ್ಷನ್ 37 ಉಪವಿಧಿ– 1ರ ಪ್ರಕಾರ ಅಂಬಾರಗುಡ್ಡ ಒಳಗೊಂಡಂತೆ 3,857.17 ಎಕರೆ (1,524. 56 ಹೆಕ್ಟೇರ್) ಜನವಸತಿ ಭೂ ಪ್ರದೇಶವನ್ನು ಸರ್ಕಾರವು ‘ಪರಿಸರ ಸೂಕ್ಷ್ಮ ವಲಯ’ ಎಂದು ಅಧಿಸೂಚನೆ ಹೊರಡಿಸಿದ್ದು ತೀವ್ರ ಆತಂಕಕ್ಕೆ ಕಾರಣವಾಗಿತ್ತು.

ADVERTISEMENT

ವರ್ಷದ ಹಿಂದೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 3,857.17 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಯ (ಅಂಬಾರಗುಡ್ಡ ಜೀವ ವೈವಿಧ್ಯ) ಹೆಸರಿಗೆ ಹಕ್ಕು ವರ್ಗಾವಣೆ ಮಾಡಿರುವುದು ಸ್ಥಳೀಯರ ಸಮಸ್ಯೆಗಳನ್ನು ಇನ್ನಷ್ಟು ಕಗ್ಗಂಟಾಗಿಸಿದೆ. ಇದರಿಂದ ದಿಕ್ಕು ತೋಚದಾಗಿದೆ ಎಂದು ಕುಣಬಿ ಜನಾಂಗದ ಪಾಯು ಎಂಬವರು ‘ಪ್ರಜಾವಾಣಿ’ ಎದುರು ನೋವು ತೋಡಿಕೊಂಡರು.

‘ಈ ಅಧಿಸೂಚನೆ ಹೊರಡಿಸುವ ಮುನ್ನ, ಅಂದಿನ ಪಶ್ಚಿಮಘಟ್ಟ ಕಾರ್ಯಪಡೆಯು ಜನಾಭಿಪ್ರಾಯ ಪಡೆದಿಲ್ಲ ಎಂಬ ಗಂಭೀರ ಆರೋಪ ಇಲ್ಲಿನ ರೈತರಿಂದ ಕೇಳಿಬಂದಿದೆ. ಹಲವು ದಶಕಗಳಿಂದ ಬದುಕು ಕಟ್ಟಿಕೊಂಡ ಮೂಲ ನಿವಾಸಿಗಳ ಜನವಸತಿ ಪ್ರದೇಶಗಳನ್ನು ಸೇರಿಸಿ, ತಪ್ಪು ಅಂಕಿ–ಅಂಶಗಳನ್ನು ಸರ್ಕಾರಕ್ಕೆ ನೀಡಿ, ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸುವ ಹುನ್ನಾರ ನಡೆಸಲಾಗುತ್ತಿದೆ’ ಎನ್ನುವುದು ಇಲ್ಲಿನ ನಿವಾಸಿಗಳ ದೂರು.

ಈ ವ್ಯಾಪ್ತಿಯ ಕೊಡನವಳ್ಳಿ, ಆಡಗಳಲೆ, ಮರಾಠಿ, ಸಂಕಣ್ಣ ಶ್ಯಾನುಭೋಗ್ ಸೇರಿದಂತೆ ನಾಲ್ಕು ಕಂದಾಯ ಗ್ರಾಮಗಳಲ್ಲಿ 300ಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಈ ಗ್ರಾಮಗಳ ಸರ್ವೇ ನಂಬರ್‌ಗಳಲ್ಲಿ ಬಗರ್ ಹುಕುಂ ನಮೂನೆ– 50, 53, 57, ಅಕ್ರಮ ಸಕ್ರಮ ಹಾಗೂ ನಮೂನೆ– 94 ಸಿಸಿ ಅಡಿಯಲ್ಲಿ 230 ರೈತರು ಭೂಮಿ ಹಕ್ಕಿಗಾಗಿ ಸಲ್ಲಿಸಿದ್ದ ಅರ್ಜಿಗಳು ಮಂಜೂರಾತಿ ಪಡೆಯುವುದು ಸಾಧ್ಯವಿಲ್ಲದಂತಾಗಿದೆ. ಇದೇ ಭೂ ಪ್ರದೇಶದಲ್ಲಿ ಮಂಜೂರಾತಿ ಪಡೆಯದ ಸರ್ಕಾರಿ ಕಚೇರಿ, ಬಸ್ ನಿಲ್ದಾಣ, ಅಂಗನವಾಡಿ, ಸರ್ಕಾರಿ ವಸತಿ ಗೃಹ, ಸರ್ಕಾರಿ ಶಾಲೆ, ದೇವಸ್ಥಾನಕ್ಕೆ ಸೇರಿದ ಭೂಮಿಯೂ ಇದ್ದು, ಈ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಗಮನಕ್ಕೆ ತಾರದೇ ತಮ್ಮನ್ನು ವಂಚಿಸಿ ಅವೈಜ್ಞಾನಿಕ ಮಾದರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಗ್ರಾಮದ ಮಹಿಳೆಯರು ಜನಪ್ರತಿನಿಧಿಗಳ ವಿರುದ್ಧ ಹರಿಹಾಯುತ್ತಿದ್ದಾರೆ.

‘ಅಂಬಾರಗುಡ್ಡ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸಾಕಷ್ಟು ಕುಟುಂಬಗಳಿಗೆ ಭೂ ಒಡೆತನ ಇಲ್ಲ. ಈಗಿರುವ ಬೆರಳೆಣಿಕೆಯಷ್ಟು ಕುಟುಂಬಗಳು ಹಕ್ಕುಪತ್ರ ಹೊಂದಿವೆ. ಕೆಲವರು ಕಟ್ಟಿಕೊಂಡ ಮನೆಗಳಿಗೂ ಹಕ್ಕುಪತ್ರ ಇಲ್ಲದಂತಾಗಿದೆ. ಯಾವುದೇ ಸರ್ಕಾರಿ ಯೋಜನೆ ಅನುಷ್ಠಾನಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಿದೆ. ಖಾತೆ, ಪೋಡಿ, ದುರಸ್ತಿ, ಹದ್ದುಬಸ್ತು, ಕೃಷಿ ಅಭಿವೃದ್ಧಿ, ಜಾನುವಾರುಗಳನ್ನು ಮೇಯಲು ಬಿಡಲೂ ಅರಣ್ಯ ಇಲಾಖೆ ತಕರಾರು ತೆಗೆಯುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯ ಆಡಗಳಲೆ ಸಂಕಷ್ಟ ವಿವರಿಸಿದರು. 

ಖಾಸಗಿಯವರು ಅಂಬಾರಗುಡ್ಡ ಸೀಳಲು ಬಂದಾಗ ಅಂದು ‘ಅಂಬಾರಗುಡ್ಡ ರಕ್ಷಿಸಿ’ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದೆವು. ಈಗ ಸರ್ಕಾರವೇ ಗುಡ್ಡದ ರಕ್ಷಣೆ ಹೆಸರಿನಲ್ಲಿ ನಮ್ಮನ್ನು ಒಕ್ಕಲೆಬ್ಬಿಸಲು ಹೊರಟಿದೆ
ಕಮಲಾಕ್ಷಿ ಮುರಳ್ಳಿ, ಗ್ರಾಮಸ್ಥೆ

‘ಇಲ್ಲಿ ಪ್ರತಿಬಾರಿ ಬೆಂಕಿ ಬಿದ್ದಾಗ, ಅಮೂಲ್ಯ ವನಸಂಪತ್ತನ್ನು ತಲೆತಲಾಂತರದಿಂದ ರಕ್ಷಿಸಿದ್ದೇವೆ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿಯೇ, ಈ ವರ್ಷ ಬೆಂಕಿಯಿಂದ ಅಂಬಾರಗುಡ್ಡದ 8 ಎಕರೆ ಸಸ್ಯ ಸಂಪತ್ತು ನಾಶವಾಗಿದೆ. ಇದು ಅರಣ್ಯ ಇಲಾಖೆಯು ಕಾಡನ್ನು ರಕ್ಷಿಸುವ ಪರಿಯೇ?’ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ತಕ್ಷಣವೇ ಜಿಲ್ಲಾಧಿಕಾರಿ ಮರಾಠಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿ, ಸ್ಥಳ ಪರಿಶೀಲಿಸಬೇಕು. ಅಂದಿನ ಜೀವವೈವಿಧ್ಯ ಸಮಿತಿಯ ಜನವಿರೋಧಿ ಕ್ರಮವನ್ನು ಕೈಬಿಡಬೇಕು. ಜನವಸತಿ ಪ್ರದೇಶವನ್ನು ಹೊರತುಪಡಿಸಿ ಜೀವ ವೈವಿಧ್ಯತೆಯ ಗಡಿ ಗುರುತಿಸಲು ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. 

ಭೂ ಮಂಜೂರಾತಿ ಅರ್ಜಿಗಳಿಗೆ ಆದ್ಯತೆ ಕೊಡಿ

‘ಅಂಬಾರಗುಡ್ಡ ಭೂ ಪ್ರದೇಶ ಸಂರಕ್ಷಣೆ ಹೆಸರಿನಲ್ಲಿ ಜನವಸತಿ ಪ್ರದೇಶವನ್ನೂ ಸೇರಿಸಿ ಅಧಿಸೂಚನೆ ಹೊರಡಿಸಿರುವುದು ಜನವಿರೋಧಿ ನಿಲುವಾಗಿದೆ. ಸರ್ಕಾರವು ಜಂಟಿ ಸರ್ವೇ ನಡೆಸದಿರುವುದು ಸಮಸ್ಯೆಯ ಮೂಲ’ ಎಂದು ಕೆಡಿಪಿ ಸದಸ್ಯ ಜಿ.ಟಿ. ಸತ್ಯನಾರಾಯಣ ಹೇಳಿದರು. ಹಿಂದಿನ ಅಧಿಸೂಚನೆ ರದ್ದುಮಾಡಬೇಕು. ಸಂರಕ್ಷಿತ ಅರಣ್ಯದ ವ್ಯಾಪ್ತಿ ಸೀಮಿತಗೊಳಿಸಿ ಜನವಸತಿ ಪ್ರದೇಶವನ್ನು ಅದರಿಂದ ಮುಕ್ತಗೊಳಿಸಬೇಕಿದೆ. ವಿಲೇವಾರಿಗೆ ಬಾರಿ ಇರುವ ಭೂ ಮಂಜೂರಾತಿ ಅರ್ಜಿಗಳಿಗೆ ಆದ್ಯತೆ ನೀಡಿ ಕ್ರಮ ವಹಿಸಬೇಕಿದೆ ಎಂದು ಅವರು ಒತ್ತಾಯಿಸಿದರು.

ಜನಪ್ರತಿನಿಗಳಿಂದ ಈಡೇರದ ಭರವಸೆ

ವಿಧಾನಸಭಾ ಚುನಾವಣೆಯ ವೇಳೆ ಮರಾಠಿ ಮುರಳ್ಳಿ ಆಡಗಳಲೆ ಭಾಗದಲ್ಲಿ ಮತದಾನ ಬಹಿಷ್ಕಾರದ ಕೂಗು ಎದ್ದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಗೋಪಾಲಕೃಷ್ಣ ಬೇಳೂರು ಅವರು ರೈತರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆಸಿ ಬದಲಿ ಕ್ರಮದ ಬಗ್ಗೆ ಸರ್ಕಾರವನ್ನು ಆಗ್ರಹಿಸಿದ್ದಷ್ಟೇ ಅವರ ಸಾಧನೆ. ಇದರ ಹೊರತು ಯಾವುದೇ ರಚನಾತ್ಮಕ ಕ್ರಮ ತೆಗೆದುಕೊಂಡಿಲ್ಲ. ಸಂಸದ ಬಿ.ವೈ. ರಾಘವೇಂದ್ರ ಅವರು ಭೇಟಿ ನೀಡಿದ ವೇಳೆ ಅಧಿಸೂಚನೆಯಲ್ಲಿ ಆಗಿರುವ ನ್ಯೂನತೆಗಳ ಬಗ್ಗೆ ಸ್ಥಳಿಯರು ಗಮನಕ್ಕೆ ತಂದಿದ್ದರು. ಆದರೆ ಈವರೆಗೆ ಕೇಂದ್ರದ ಅರಣ್ಯ ಸಚಿವರ ಬಳಿ ಈ ಬಗ್ಗೆ ಚರ್ಚೆ ನಡೆಸಿಲ್ಲ. ನ್ಯಾಯದ ಭರವಸೆ ಹುಸಿಯಾಗಿದೆ ಎಂದು ಮರಾಠಿ ಆಡಗಳಲೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಅಂಕಿ ಅಂಶ:

ಒಟ್ಟು ಪ್ರದೇಶ;3857.17 ಎಕರೆ

ಒಟ್ಟು ಬಾಧಿತ ಕುಟುಂಬಗಳು;300

ಬಾಧಿತ ಜನಸಂಖ್ಯೆ;1200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.