ADVERTISEMENT

ಅಂಬೇಡ್ಕರ್ ಬಿಜೆಪಿ ಕಣ್ಣಿಗೆ ನಂಜು: ಸುಂದರೇಶ್ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 5:26 IST
Last Updated 7 ಡಿಸೆಂಬರ್ 2022, 5:26 IST

ಶಿವಮೊಗ್ಗ: ಅಂಬೇಡ್ಕರ್ ಬಿಜೆಪಿ ಕಣ್ಣಿಗೆ ನಂಜು ಆಗಿ ಕಾಣುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ವ್ಯಂಗ್ಯವಾಡಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಅಂಬೇಡ್ಕರ್ ಈ ದೇಶದ ಮಹಾನ್ ಮಾನವತಾವಾದಿ, ಅವರು ಕೇವಲ ಒಂದು ವರ್ಗಕ್ಕೆ ಸೀಮಿತವಾದವರಲ್ಲ, ಇಡೀ ದೇಶ ಇಂದು ನೆಮ್ಮದಿಯಾಗಿ ಜೀವಿಸುತ್ತಿದೆ ಎಂದರೆ ಅದಕ್ಕೆ ಅಂಬೇಡ್ಕರ್ ಕೊಟ್ಟ ಸಂವಿಧಾನವೇ ಕಾರಣ ಎಂದರು.

ADVERTISEMENT

ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಟ ಇವೆಲ್ಲವೂ ಇಂದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಸಂವಿಧಾನ ಇಂದು ದುರುಪಯೋಗವಾಗುತ್ತಿದೆ. ಬಿಜೆಪಿ ನಾಯಕರು ಏನು ತಪ್ಪು ಮಾಡಿದರೂ ಪ್ರಶ್ನೆ ಮಾಡದಷ್ಟು ಚುನಾವಣಾ ಆಯೋಗ ದುರ್ಬಲವಾಗಿದೆ ಎಂದರು.

ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ಮಾತನಾಡಿ, ‘ಅಂಬೇಡ್ಕರ್ ಅವರು ಮಹಿಳೆಯರ ಹಕ್ಕುಗಳು, ಸಮಾನತೆ ಹಾಗೂ ಶೋಷಿತ ವರ್ಗಗಳ ಹಕ್ಕಿಗಾಗಿ ಹೋರಾಡಿದ ಮಹಾನ್ ಸಾಧಕರು. ಅವರ ತತ್ವಗಳನ್ನು ಎಲ್ಲಾ ಪಕ್ಷಗಳು ಒಪ್ಪಿಕೊಳ್ಳಬೇಕು. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು’ ಎಂದರು.

ಪ್ರಮುಖರಾದ ಎಚ್.ಎಂ. ಬಲದೇವಕೃಷ್ಣ, ಚಂದ್ರಶೇಖರಪ್ಪ, ಕೃಷ್ಣಪ್ಪ, ಎಚ್.ಸಿ. ಯೋಗೀಶ್, ಇಕ್ಬಾಲ್ ನೇತಾಜಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಸಿ.ಎಸ್. ಚಂದ್ರಭೂಪಾಲ್, ಮಂಜುನಾಥ ಬಾಬು, ಯು. ಶಿವಾನಂದ್, ಚಂದ್ರಶೇಖರ್, ಇಕ್ಕೇರಿ ರಮೇಶ್, ವಿನಾಯಕ ಮೂರ್ತಿ, ಡಿ. ಉತ್ತೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.