
ಶಿವಮೊಗ್ಗ: ಅಂಬಿಗರ ಚೌಡಯ್ಯ ನೇರ, ನಿಷ್ಠುರವಾದಿ ವಚನಕಾರ. ಅವರು ನಿಜಶರಣ ಎಂದೇ ಪ್ರಸಿದ್ಧರಾಗಿದ್ದವರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ ಹಾಗೂ ಗಂಗಾಮತ ಸಮಾಜದ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಚನಕಾರರಲ್ಲಿ ಅಂಬಿಗರ ಚೌಡಯ್ಯ ವಿಭಿನ್ನ ವ್ಯಕ್ತಿತ್ವ ಹೊಂದಿದ ಶ್ರೇಷ್ಠ ವಚನಕಾರರಾಗಿದ್ದರು. ಕಂಡದ್ದನ್ನು ಕಂಡಂತೆ ಬಿಚ್ಚು ಮನಸ್ಸಿನಿಂದ ಹೇಳುತ್ತಿದ್ದರು. ಅವರ ಕಾಯಕವು ದೋಣಿಯ ಹುಟ್ಟು ಹಾಕಿ ದಡ ಸೇರಿಸುವುದೇ ಆಗಿದ್ದರೂ ನಿಜವಾಗಿಯೂ ಅವರು ಸಂಸಾರದ ದೋಣಿಯನ್ನು ಅರಿವಿನ ಹುಟ್ಟು ಹಾಕುವ ಮೂಲಕ ಹೇಗೆ ದಾಟಿಸಬೇಕು ಎಂಬುದನ್ನು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಸ್.ಪಿ. ವಾಸುದೇವ್, ಅಂಬಿಗರ ಚೌಡಯ್ಯ ಕಟುಮಾತುಗಳ ಮೂಲಕವೇ ಸಮಾಜವನ್ನು ಎಚ್ಚರಿಸಿದ್ದವರು. ಅವರ ವಚನಗಳು ನಿಷ್ಠುರವಾಗಿದ್ದರೂ ಇಷ್ಟಪಡುವಂತೆ ಇದ್ದವು ಎಂದರು.
ಅಂಬಿಗ ಎಂದರೆ ಭರವಸೆಯ ಬೆಳಕು. ಅವರ ವಚನಗಳಲ್ಲಿ ವೈಚಾರಿಕತೆ, ಕಾಲಜ್ಞಾನ, ಆಧ್ಯಾತ್ಮ, ಬೆಡಗು, ರೂಪಕಗಳು, ನೈತಿಕಮೌಲ್ಯ, ವಿಡಂಬನೆ, ನಿಷ್ಠುರತೆ, ಟೀಕೆಗಳನ್ನು ಕಾಣಬಹುದಾಗಿದೆ. ಅಧರಕ್ಕೆ ಕಹಿಯಾದರೆ ಉದರಕ್ಕೆ ಸಿಹಿ ಎಂಬಂತೆ ವಿಚಾರಧಾರೆ ಅವರದ್ದು ಎಂದು ವಿಶ್ಲೇಷಿಸಿದರು.
ಗಂಗಾಮತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ. ಕೆಂಚಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ. ಸತೀಶ್, ಮೊಗವೀರ ಮಹಾಜನ ಸಂಘದ ಜಿಲ್ಲಾ ಘಟಕದ ಅಣ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಎಚ್.ಉಮೇಶ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಸುನೀತಾ ಅಣ್ಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.