ADVERTISEMENT

ಭದ್ರಾವತಿ: ಸ್ಥಳೀಯರಿಗೂ ಆಸ್ಪತ್ರೆ, ಶಾಲೆ, ಕ್ರೀಡಾಂಗಣದ ಸೌಲಭ್ಯ

ಆರ್‌ಎಫ್‌ಎ ಘಟಕಕ್ಕೆ ಶಂಕುಸ್ಥಾಪನೆಗೆ ನೆರವೇರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 15:15 IST
Last Updated 16 ಜನವರಿ 2021, 15:15 IST
ಭದ್ರಾವತಿಯಲ್ಲಿ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರ್‌ಎಎಫ್‌ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ದಾರೆ.
ಭದ್ರಾವತಿಯಲ್ಲಿ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರ್‌ಎಎಫ್‌ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ದಾರೆ.   

ಶಿವಮೊಗ್ಗ: ಕ್ಷಿಪ್ರ ಕಾರ್ಯಪಡೆಯ 97ನೇ ಬೆಟಾಲಿಯನ್ ಘಟಕದಲ್ಲಿ ನಿರ್ಮಾಣವಾಗುವ ಕೇಂದ್ರೀಯ ವಿದ್ಯಾಲಯ, ಆಸ್ಪತ್ರೆ, ಕ್ರೀಡಾ ಸಮುಚ್ಚಯಗಳ ಪ್ರಯೋಜನ ಭದ್ರಾವತಿಯ ನಾಗರಿಕರಿಗೂ ದೊರೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದರು.

ಭದ್ರಾವತಿಯ ಮೀಸಲು ಪೊಲೀಸ್‌ ಪಡೆ ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ಕ್ಷಿಪ್ರ ಕಾರ್ಯಪಡೆಯ 97ನೇ ಬೆಟಾಲಿಯನ್ ಘಟಕಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಆರ್‌ಎಫ್‌ಎ ಘಟಕದ ಆವರಣದಲ್ಲಿ ₹ 230 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ, ಆಧುನಿಕ ಕ್ರೀಡಾಂಗಣ, ಕೇಂದ್ರೀಯ ವಿದ್ಯಾಲಯಗಳ ಕಟ್ಟಡ ನಿರ್ಮಿಸಲಾಗುವುದು. ಸ್ಥಳೀಯರು ಇವುಗಳ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.

ADVERTISEMENT

ಮೋದಿ ಅವರು ಪ್ರಧಾನಿಯಾದ ನಂತರ ಕಾನೂನು ಸುವ್ಯವಸ್ಥೆಗೆ ಒತ್ತು ನೀಡಿದ್ದಾರೆ. ಒಂದೂವರೆ ಲಕ್ಷ ಸಿಬ್ಬಂದಿ ಆರ್‌ಎಎಫ್‌ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಘಟಕ ಆರಂಭಿಸಿದ ಕೀರ್ತಿ ದೇಶದ ಮೊದಲ ಗೃಹ ಸಚಿವ ವಲಭಬಾಯಿ ಪಟೇಲ್‌ ಅವರಿಗೆ ಸಲ್ಲುತ್ತದೆ. ಗಲಭೆ ನಿಯಂತ್ರಣ, ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಅವರು ಅತಿವೃಷ್ಟಿ, ಅನಾವೃಷ್ಟಿ ಮತ್ತಿತರ ಪ್ರಕೃತಿ ವಿಕೋಪದ ಸಮಯದಲ್ಲಿ ಮಾನವೀಯ ಕಾರ್ಯಗಳ ಮೂಲಕ ಜನಮನ ಗೆದ್ದಿದ್ದಾರೆ ಎಂದು ಶ್ಲಾಘಿಸಿದರು.

ಪೊಲೀಸರ ಮೇಲಿನ ಕಾರ್ಯಭಾರ ಅಧಿಕವಾಗಿದೆ. ಅವರ ಕೆಲಸದ ಹೊರೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹುತಾತ್ಮರಾದ ಪೊಲೀಸರ ಕುಟುಂಬಗಳಿಗೆ ಹೆಚ್ಚುವರಿ ನೆರವು, ಸೌಲಭ್ಯ ಕಲ್ಪಿಸಲಾಗುತ್ತಿದೆ. ದೆಹಲಿಯಲ್ಲಿ ಪೊಲೀಸ್ ಸ್ಮಾರಕ ನಿರ್ಮಿಸಲಾಗಿದೆ. ಯಾರಾದರೂ‌ ದೆಹಲಿಗೆ‌ ಬಂದರೆ ಭೇಟಿ ನೀಡಬೇಕು ಎಂದು ಕೋರಿದರು.

ಕೊರೊನಾ ಸಮಯದಲ್ಲಿ ಜನರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಕೊರೊನಾವನ್ನು ವ್ಯವಸ್ಥಿತವಾಗಿ ಎದುರಿಸಿದ ದೇಶ ಭಾರತ. ಎರಡು ಸಾವಿರಕ್ಕೂ ಹೆಚ್ಚು ಪ್ರಯೋಗಾಲಯ ಆರಂಭಿಸಲಾಗಿದೆ. ಲಸಿಕೆ ಹಂಚಿಕೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರ್ನಾಟಕವೂ ಸೇರಿದಂತೆ ಎಲ್ಲೆಡೆ ಲಿಸಿಕೆ ಹಾಕುವ ಕಾರ್ಯ ಆರಂಭವಾಗಿದೆ. ಪ್ರತಿಯೊಬ್ಬರಿಗೂ ಲಿಸಿಕೆ ದೊರೆಯಲಿದೆ ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರ ಜಾಗ ನೀಡಿದೆ. ಗಲಭೆಗಳ ಸಮಯದಲ್ಲಿ ಬೇರೆ ರಾಜ್ಯಗಳಿಂದ ಇಲ್ಲಿಗೆ ಆರ್‌ಎಎಫ್‌ ತುಕಡಿಗಳು ಬರುತ್ತಿದ್ದವು. ಮುಂದೆ ದಕ್ಷಿಣ ಭಾರತದ ರಾಜ್ಯಗಳಿಗೆ ಇಲ್ಲಿಂದಲೇ ಕಳುಹಿಸಬಹುದು. ರಾಜ್ಯದ ಕಾನೂನು, ಸುವ್ಯವಸ್ಥೆಗೂ ಬಲ ಬರುತ್ತದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ, ವಿಐಎಸ್‌ಎಲ್‌, ಎಂಪಿಎಂ ಇಲ್ಲಿನ ಜನರ ಎರಡು ಕಣ್ಣುಗಳು. ಈಗ ಎರಡೂ ಕಾರ್ಖಾನೆಗಳು ರೋಗಗ್ರಸ್ಥವಾಗಿವೆ. ಅವುಗಳ ಪುನಃಶ್ಚೇತನಕ್ಕೆ ಕೇಂದ್ರ ಸರ್ಕಾರ ಅಗತ್ಯ ಅನುದಾನ ನೀಡಬೇಕು. ಸ್ಥಳೀಯರಿಗೆ ನೆರವಾಗಬೇಕು ಎಂದು ಅಮಿತ್‌ ಶಾ ಅವರನ್ನು ಕೋರಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವತ್ಥ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ, ಶಾಸಕರಾದ ಸಂಗಮೇಶ್ವರ, ಕೇಂದ್ರ ಮೀಸಲು ಪೊಲೀಸ್‌ ಪಡೆಯ ಮುಖ್ಯಸ್ಥ ಎ.ಬಿ.ಮಹೇಶ್ವರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.