ರಿಪ್ಪನ್‌ಪೇಟೆ: ‘ಇತಿಹಾಸ ಪ್ರಸಿದ್ಧ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಸೆ. 9ರಿಂದ 19ರವರೆಗೆ ಬರುವ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಜರುಗಲಿದೆ’ ಎಂದು ಜಾತ್ರಾ ಮಹೋತ್ಸವದ ತಾತ್ಕಾಲಿಕ ಸೇವಾ ಸಮಿತಿಯ ನೂತನ ಕಾರ್ಯಾಧ್ಯಕ್ಷ ಕಲಗೋಡು ರತ್ನಾಕರ ತಿಳಿಸಿದರು.
‘ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಈ ದೇವಸ್ಥಾನದ ಹಿಂದಿನ ಸೇವಾ ಸಮಿತಿಯ ಅವಧಿ ಮುಗಿದ ಹಿನ್ನೆಲೆಯಲ್ಲಿ
ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಈಚೆಗೆ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಅಧ್ಯಕ್ಷತೆಯಲ್ಲಿ ನಡೆದಿದ್ದು, ತಾತ್ಕಾಲಿಕ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಕಾರ್ಯಾಧ್ಯಕ್ಷರಾಗಿ ಕಲಗೋಡು ರತ್ನಾಕರ್ ಆಯ್ಕೆಯಾಗಿದ್ದು, ಉಳಿದಂತೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ’ ಎಂದು ಅಮ್ಮನಘಟ್ಟ ದೇವಸ್ಥಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
‘ಜಾತ್ರಾ ಮಹೋತ್ಸವ ಮುನ್ನ ಸೆ. 6ರಂದು ಹಳೇ ಅಮ್ಮನಘಟ್ಟದಲ್ಲಿ ದೇವಿಗೆ ಕಂಕಣಧಾರಣೆ, ವಿಶೇಷ ಪೂಜೆ ನಡೆಯಲಿದೆ’ ಎಂದರು.
ನವರಾತ್ರಿ ಉತ್ಸವ: ದೇವಿ ಸನ್ನಿಧಿಯಲ್ಲಿ ಸೆ. 22ರಿಂದ ಅ. 2ರವರೆಗೆ ನವರಾತ್ರಿ ಉತ್ಸವ ಹಾಗೂ ವಿಜಯ ದಶಮಿಯಂದು ಚಂಡಿಕಾ ಹೋಮ ಮತ್ತು ಪ್ರತಿನಿತ್ಯ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ’ ಎಂದು ಹೇಳಿದರು.
ಮುಖಂಡರಾದ ಬಿ.ಪಿ. ರಾಮಚಂದ್ರ, ಚಂದ್ರಮೌಳಿ, ಗೌರಮ್ಮ, ಜಯಪ್ರಕಾಶ್, ಏರಿಗೆ ಉಮೇಶ್, ಚಿದಂಬರ ಮತ್ತು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.