ಶಿವಮೊಗ್ಗ: ‘ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ಹಾಗೂ ಸಮುದಾಯದ ನೆರವು ಪಡೆಯಲು ಆರಂಭಿಸಿದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆಗೆ ರಾಜ್ಯದಲ್ಲಿ ಅತ್ಯುತ್ತಮ ಸ್ಪಂದನೆ ದೊರೆತಿದೆ. ಯೋಜನೆ ಆರಂಭಗೊಂಡ ಕೆಲವೇ ತಿಂಗಳಲ್ಲಿ ₹200 ಕೋಟಿಗೂ ಹೆಚ್ಚು ನೆರವು ಹರಿದು ಬಂದಿದೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹರ್ಷ ವ್ಯಕ್ತಪಡಿಸಿದರು.
ತಾಲ್ಲೂಕಿನ ರಾಮೇನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಅಮೃತ್ ನೋನಿ ಸಂಸ್ಥೆ ₹24 ಲಕ್ಷ ವೆಚ್ಚದಲ್ಲಿ ಕಟ್ಟಿಸಿಕೊಟ್ಟಿರುವ ಮೂರು ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಎಲ್ಲರನ್ನೂ ತೊಡಗಿಸಿಕೊಳ್ಳಲು ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡ ವಾಟ್ಸ್‌ಆ್ಯಪ್ ಗುಂಪುಗಳನ್ನು ಕಡ್ಡಾಯವಾಗಿ ರಚಿಸುವಂತೆ ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ಸಲಹೆ ನೀಡಿದರು.
‘ಸರ್ಕಾರಿ ಶಾಲೆಗಳಿಗೆ ಹೆಚ್ಚಾಗಿ ಬಡವರು, ಕೂಲಿ ಕಾರ್ಮಿಕರ ಮಕ್ಕಳು ಬರುತ್ತಾರೆ. ಅವರಿಗೆ ನೆರವಾಗಲು ಮಧ್ಯಾಹ್ನದ ಬಿಸಿಯೂಟ, ಸಕ್ಕರೆ ಭರಿತ ಹಾಲು, ರಾಗಿಮಾಲ್ಟ್, ವಾರಕ್ಕೆ ಆರು ದಿನ ಮೊಟ್ಟೆ, ಸಮವಸ್ತ್ರ, ಶೂ ಕೊಡಲಾಗುತ್ತಿದೆ. ಜೊತೆಗೆ ಅಲ್ಲಿ ಕೊಡುವ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೂ ಬದ್ಧವಾಗಿದ್ದು, ಶೀಘ್ರ 18,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು. ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವುದು ಮುಖ್ಯವಲ್ಲ. ನಿತ್ಯ ಶಾಲೆಗೆ ಕಳುಹಿಸುವುದು ಮುಖ್ಯ’ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಬಿಸಿಯೂಟಕ್ಕೆ ಬಂಗಾರಪ್ಪ ಬುನಾದಿ: ‘ಶಿಕ್ಷಣ ಪಡೆಯಲು ಸರ್ಕಾರಿ ಶಾಲೆಗೆ ಬರುವ ಬಡ ವಿದ್ಯಾರ್ಥಿಗಳಿಗೆ ದಿನಕ್ಕೆ ₹1 ಪ್ರೋತ್ಸಾಹಧನ (ಸ್ಟೈಫಂಡ್) ಕೊಡುವ ಕಾರ್ಯಕ್ರಮ ಮುಖ್ಯಮಂತ್ರಿ ಆಗಿದ್ದಾಗ ಮೊದಲ ಬಾರಿಗೆ ಎಸ್.ಬಂಗಾರಪ್ಪ ಆರಂಭಿಸಿದರು. ನಂತರ ಅದನ್ನು ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವಾಗಿ ಬದಲಾಯಿಸಲಾಯಿತು’ ಎಂದು ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಶಾಸಕಿ ಶಾರದಾ ಪೂರ್ಯನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಬಿಇಒ ರಮೇಶ್ ನಾಯಕ್, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಬಿಜೆಪಿ ರಾಜ್ಯ ಪ್ರಕೋಷ್ಠಗಳ ಅಧ್ಯಕ್ಷ ಎಸ್.ದತ್ತಾತ್ರಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕಡಿದಾಳ್ ಗೋಪಾಲ್, ಮುಖಂಡರಾದ ಡಾ.ಶ್ರೀನಿವಾಸ್ ಕರಿಯಣ್ಣ, ಕಲಿಂ ಪಾಷಾ, ಕಲಗೋಡು ರತ್ನಾಕರ, ಜಿ.ಡಿ.ಮಂಜುನಾಥ್, ಅಂಬುಜಾಕ್ಷಿ ಶ್ರೀನಿವಾಸ್ ಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಮೂರ್ತಿ, ಗಾಯತ್ರಿ, ಆರಿಫ್ ಉನ್ನಿಸಾ, ಸೋಮಶೇಖರ್ ಮತ್ತಿತರರಿದ್ದರು.
ಸರ್ಕಾರಿ ಶಾಲೆಗಳಿಗೆ ನೆರವು ಅಬಾಧಿತ:
ಡಾ.ಶ್ರೀನಿವಾಸಮೂರ್ತಿ ‘ಅಮೃತ್ ನೋನಿ ತನ್ನ ಉತ್ಪನ್ನಗಳ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಹಾಗೂ ಲಕ್ಷಾಂತರ ಜನರ ಆರೋಗ್ಯ ಸುಧಾರಣೆಗೆ ನೆರವಾಗಿದೆ’ ಎಂದು ಅಮೃತ್ ನೋನಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀನಿವಾಸ್‌ಮೂರ್ತಿ ಹೇಳಿದರು. ‘ಈಗ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೂ ಒತ್ತು ನೀಡಿ ಸಮಾಜದ ಋಣ ತೀರಿಸುವ ಉದ್ದೇಶದಿಂದ ನಮ್ಮ ಕಾರ್ಖಾನೆ ಇರುವ ರಾಮಿನಕೊಪ್ಪದಲ್ಲಿ ಶಾಲಾ ಕೊಠಡಿಗಳನ್ನು ಸುಸಜ್ಜಿತವಾಗಿ ಕಟ್ಟಿಕೊಟ್ಟಿದ್ದೇವೆ. ಸರ್ಕಾರಿ ಶಾಲೆಗಳಿಗೆ ನೆರವು ಕೊಡುವ ನಮ್ಮ ಕಾರ್ಯ ಮುಂದುವರಿಯಲಿದೆ. ಜೊತೆಗೆ ಸಂಸ್ಥೆ ಬಡ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ’ ಎಂದರು.
ಅಮೃತ್ ನೋನಿಗೆ ಧನ್ಯವಾದ: ಮಧು ಬಂಗಾರಪ್ಪ
‘ಸರ್ಕಾರಿ ಶಾಲೆ ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ಕಡಿಮೆ ಮಾಡಲು ಅಜೀಂ ಪ್ರೇಮ್‌ಜಿ ಫೌಂಡೇಷನ್ ವಾರಕ್ಕೆ ಆರು ದಿನ ಮೊಟ್ಟೆ ವಿತರಣೆಗೆ ಮುಂದಿನ ಮೂರು ವರ್ಷಕ್ಕೆ ₹1591 ಕೋಟಿ ಕೊಟ್ಟಿದೆ. ಇಡೀ ದೇಶದಲ್ಲಿಯೇ ಎಲ್ಲಿಯೂ ಇಲ್ಲದ ಮಾದರಿ ಕಾರ್ಯಕ್ರಮ ಇದು. ಅದೇ ರೀತಿ ರಾಮೇನಕೊಪ್ಪದ ಶಾಲೆಯ ಅಭಿವೃದ್ಧಿಗೆ ನೆರವಾದ ಅಮೃತ್ ನೋನಿ ಸಂಸ್ಥೆಗೂ ಶಿಕ್ಷಣ ಸಚಿವನಾಗಿ ಧನ್ಯವಾದ ಹೇಳುವೆ’ ಎಂದು ಮಧು ಬಂಗಾರಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.