ಆನವಟ್ಟಿ: ಆಧುನಿಕ ತಂತ್ರಜ್ಞಾನ ಆಧಾರಿತ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿರುವುರಿಂದ ಪ್ರತಿವರ್ಷ ಉತ್ತಮ ಫಲಿತಾಂಶ ಪಡೆಯುತ್ತಿರುವ ಆನವಟ್ಟಿಯ ಸರ್ಕಾರಿ ಕೆಪಿಎಸ್ ಪ್ರೌಢ ಶಾಲೆ ವಜ್ರಮಹೋತ್ಸವದ ಹೊಸ್ತಿಲಲ್ಲಿದೆ.
1951ರಲ್ಲಿ ಪ್ರಾರಂಭವಾಗಿ, ಈಗ 75 ವರ್ಷಗಳನ್ನು ಪೂರೈಸುತ್ತಿರುವ ಶಾಲೆಯಲ್ಲಿ ಪ್ರಸಕ್ತ ವರ್ಷ 8ರಿಂದ 10 ನೇ ತರಗತಿವರೆಗೆ 1,211 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶೇ 100, ಕನ್ನಡ ಮಾಧ್ಯಮದಲ್ಲಿ ಶೇ 92 ಫಲಿತಾಂಶ ಪಡೆದಿದ್ದು, ಸಂಜಯ್ ಎಂಬ ವಿದ್ಯಾರ್ಥಿ 621 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಪ್ರತಿ ವರ್ಷ ಶಾಲೆ ಪಡೆಯುವ ಉತ್ತಮ ಫಲಿತಾಂಶದಿಂದಾಗಿ ಪಕ್ಕದ ಜಿಲ್ಲೆಗಳಾದ ಶಿರಸಿ, ಹಾವೇರಿಯಿಂದಲೂ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿದ್ದು ದಾಖಲಾತಿ ಹೆಚ್ಚುತ್ತಿದೆ.
ಶಾಲೆಯಲ್ಲಿ ಕಾಯಂ ಸರ್ಕಾರಿ ಶಿಕ್ಷಕರು 32, ಅತಿಥಿ ಶಿಕ್ಷಕರು 10, ಎಸ್‌ಡಿಎಂಸಿ ಸಮಿತಿಯಿಂದ ಮೂವರು ಅತಿಥಿ ಶಿಕ್ಷಕರು, 8 ಜನ ಅಡುಗೆ ಸಿಬ್ಬಂದಿ, 24 ಯೂನಿಟ್ ಶೌಚಾಲಗಳು, 34 ಕೊಠಡಿ, 8ರಿಂದ 10ನೇ ತರಗತಿವರೆಗೂ ‘ಎ’ಯಿಂದ ‘ಐ’ವರೆಗೂ 27 ವಿಭಾಗಗಳು, 2 ಪ್ರಯೋಗಾಲಯಗಳು, ಗ್ರಂಥಾಲಯ, 3 ಸ್ಮಾರ್ಟ್ ಕ್ಲಾಸ್, ಎರಡು ಕೊಠಡಿಯಲ್ಲಿ 29 ಕಂಪ್ಯೂಟರ್, ಎನ್‌ಎಸ್‌ಕ್ಯೂಎಫ್ ಮೂಲಕ ಎಲೆಕ್ಟ್ರಾನಿಕ್ ಮತ್ತು ಹಾರ್ಡ್‌ವೇರ್, ಬ್ಯೂಟಿ ಮತ್ತು ವೆಲ್‌ನೆಸ್ ಎರಡು ಕೌಶಲ ಅಭಿವೃದ್ಧಿ ತರಗತಿಗಳು ಇವೆ.
‘ನನ್ನ ಶಾಲೆ, ನನ್ನ ಕೂಡುಗೆ’ ಕಾರ್ಯಕ್ರಮದಡಿ ಹಳೆ ವಿದ್ಯಾರ್ಥಿಗಳು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇದೇ ಶಾಲೆಯಲ್ಲಿ ಓದಿರುವ ಕೆ.ಪಿ. ಶಿವಪ್ರಕಾಶ್ ಅವರು ₹ 15 ಲಕ್ಷ ವೆಚ್ಚದಲ್ಲಿ ಪಿಯು ಮತ್ತು ಪ್ರೌಢಶಾಲೆಯ 3,500 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 7,000 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದಾರೆ. ₹ 5 ಲಕ್ಷ ವೆಚ್ಚದಲ್ಲಿ ಐದು ಸ್ಮಾರ್ಟ್ ಅನ್‌ರೈಡ್ ಬೋರ್ಡ್‌ಗಳನ್ನು ಹಾಕಿಸಿಕೊಟ್ಟಿದ್ದಾರೆ.
ಅಮೆರಿಕ ಫೌಡೇಶನ್ ಸಂಸ್ಥೆ ₹8 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಬೋರ್ಡ್, ಗ್ರಂಥಾಲಯಕ್ಕೆ ಪುಸ್ತಕಗಳು, ಪ್ರಯೋಗಾಲಯಕ್ಕೆ ಸಾಮಗ್ರಿಗಳನ್ನು ಒದಗಿಸಿದ್ದಾರೆ. ಯುವ ಬೆಂಗಳೂರು ಸಂಸ್ಥೆಯವರು ₹1.5 ಲಕ್ಷ ಮೌಲ್ಯದ ಒಂದು ಸ್ಮಾರ್ಟ್ ಬೋರ್ಡ್ ನೀಡಿದ್ದಾರೆ.
ಸಾಹಿತಿ ಹಾಗೂ ಲೇಖಕರಾಗಿರುವ ಕೆಪಿಎಸ್ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಎಂ. ಮಹಾದೇವಪ್ಪ ಅವರು ತಮ್ಮ ರಚನೆಯ ‘ಕವಿದಿರುವ ಕತ್ತಲೆ’ ಮತ್ತು ‘ಟ್ರಿನ್ ಟ್ರಿನ್ ಟ್ರಿನ್’ ನಾಟಕಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ, ಸ್ಪರ್ಧೆಗಳಲ್ಲಿ ನಾಟಕ ಪ್ರದರ್ಶನ ಮಾಡಿಸಿದ್ದಾರೆ. ನಾಟಕ ಪ್ರದರ್ಶನಕ್ಕೆ ವಿಭಾಗಮಟ್ಟದ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳು ಸಂದಿವೆ. ಈ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಸಿಡಿಸಿ ಸಮಿತಿ ಸರ್ವ ಸದಸ್ಯರು ಸೇರಿ ಎರಡು ಪ್ಯಾಡ್ ಬರ್ನಿಂಗ್ ಯಂತ್ರಗಳು ಹಾಗೂ ಅಡುಗೆ ತಯಾರಿಕೆಗೆ ಗ್ರೈಂಡರ್ ಯಂತ್ರ ಸೇರಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಿಇಒ ಡಿಡಿಪಿಐ ಬಿಇಒ ಸಿಡಿಸಿ ಸಮಿತಿ ಸದಸ್ಯರು ಶಿಕ್ಷಕರು ಹಾಗೂ ಸಿಬ್ಬಂದಿ ಹಾಗೂ ಅಡುಗೆ ಸಿಬ್ಬಂದಿ ಸಹಕಾರದಿಂದ ಶಾಲೆ ಅತ್ಯುತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆಎಂ. ಮಹಾದೇವಪ್ಪ ಉಪಪ್ರಾಂಶುಪಾಲ
₹ 50 ಲಕ್ಷ ಅಂದಾಜು ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಲು ಸಚಿವ ಎಸ್.ಮಧು ಬಂಗಾರಪ್ಪ ಅವರು ಈಗಾಗಲೇ ಯೋಜನೆ ಸಿದ್ಧ ಮಾಡಿ ಟೆಂಡರ್‌ಗೆ ಕಳುಹಿಸಿದ್ದಾರೆ. ಮಾದರಿ ಕ್ರೀಡಾಂಗಣ ನಿರ್ಮಾಣ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆನಾಗರಾಜ ಶುಂಠಿ ಸಿಡಿಸಿ ಸಮಿತಿಯ ಕಾರ್ಯಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.