ADVERTISEMENT

ಆನವಟ್ಟಿ | ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ: 4 ವರ್ಷ ಕಳೆದರೂ ಮುಗಿಯದ ಕಾಮಗಾರಿ

ಆನವಟ್ಟಿ: ಕೆಎಸ್‌ಆರ್‌ಟಿಸಿಯ ನೂತನ ಬಸ್‌ ನಿಲ್ದಾಣದ ಉದ್ಘಾಟನೆ ಯಾವಾಗ?; ನನಸಾಗದ ಜನರ ಕನಸು!

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 8:07 IST
Last Updated 24 ಫೆಬ್ರುವರಿ 2026, 8:07 IST
ಆನವಟ್ಟಿಯಲ್ಲಿನ ನೂತನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ
ಆನವಟ್ಟಿಯಲ್ಲಿನ ನೂತನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ   

ಆನವಟ್ಟಿ: ಈ ಭಾಗದ ಜನರ ಬಹು ವರ್ಷಗಳ ಬೇಡಿಕೆಯಾದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಕನಸು ಇದುವರೆಗೂ ನನಸಾಗುತ್ತಿಲ್ಲ.

4 ವರ್ಷಗಳ ಹಿಂದೆ ಕೋಟೆ ಜಾಗದಲ್ಲಿ ಆರಂಭವಾಗಿದ್ದ ನೂತನ ಬಸ್‌ ನಿಲ್ದಾಣ ಕಟ್ಟಡ ಕಾಮಗಾರಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ. ‘ಕಾಮಗಾರಿ ಮುಗಿದು ಉದ್ಘಾಟನೆ ಯಾವಾಗ ಅಗಲಿದೆ?’ ಎಂಬ ಪ್ರಶ್ನೆ ಕಾಡುತ್ತಿದೆ.

ಕಾಮಗಾರಿಗೆ ಪೂರ್ಣ ಪ್ರಮಾಣದ ಅನುದಾನ ದೊರೆತಿಲ್ಲ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಆರಂಭಿಸಿದ್ದ ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷಗಳು ಕಳೆದಿವೆ. ಬಸ್‌ ನಿಲ್ದಾಣ ಆರಂಭಗೊಂಡರೆ, ಹುಬ್ಬಳ್ಳಿ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ. ಆನವಟ್ಟಿ ಭಾಗದ ಗ್ರಾಮಾಂತರ ಪ್ರದೇಶಗಳ ಪ್ರಯಾಣಿಕರಿಗೂ ಚಳಿ, ಮಳೆ, ಬಿಸಿಲಿನಿಂದ ರಕ್ಷಣೆ ದೊರೆಯಲಿದೆ.

ADVERTISEMENT

‘ಪ್ರಯಾಣಿಕರಿಗೆ ಸೇವೆ ಒದಗಿಸಬೇಕಾಗಿದ್ದ ಬಸ್‌ ನಿಲ್ದಾಣದ ಕಟ್ಟಡವು ಕಾಮಗಾರಿ ಮುಗಿಯುವ ಮೊದಲೇ ಪಾಳು ಬಿದ್ದು ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣ ಕೈಗೆತ್ತಿಗೊಳ್ಳುವ ಕಾಮಗಾರಿಗಳನ್ನು ಅರ್ಧಂಬರ್ಧ ಮಾಡದೇ, ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳ್ಳಲು ತಗುಲುವ ಸಂಪೂರ್ಣ ಅನುದಾನವನ್ನು ಸರ್ಕಾರ ಒದಗಿಸಬೇಕು’ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

‘ಆನವಟ್ಟಿಯಲ್ಲಿ ಸರ್ಕಾರಿ ಬಸ್‌ ನಿಲ್ದಾಣ ಇಲ್ಲದಿರುವುದರಿಂದ, ಬಹುತೇಕ ಬಸ್‌ಗಳು ಖಾಸಗಿ ನಿಲ್ದಾಣದ ಒಳಗೆ ಹೋಗದೆ, ದೂರದಲ್ಲೇ ನಿಲ್ಲುತ್ತವೆ. ಬಸ್‌ನಲ್ಲಿ ಸೀಟು ಹಿಡಿಯುವುದಕ್ಕಾಗಿ ಪ್ರಯಾಣಿಕರು ಓಡಿ ಹೋಗಿ ಬಸ್‌ ಹತ್ತಬೇಕು. ಕೆಲವು ಬಾರಿ ಬಸ್‌ ನಿಲ್ಲಿಸುವುದಿಲ್ಲ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಮೊದಲು ಸರ್ಕಾರಿ ಬಸ್‌ ನಿಲ್ದಾಣವನ್ನು ಆರಂಭಿಸಬೇಕು’ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆ- ಕಾಲೇಜುಗಳಿಗೆ ಆಟೊ ಹಾಗೂ ಇನ್ನಿತರ ವಾಹನಗಳಲ್ಲಿ ತೆರಳಬೇಕಿದೆ. ಕೂಡಲೇ ಬಸ್ ನಿಲ್ದಾಣ ಕಾಮಗಾರಿಯನ್ನು ಪೂರ್ಣಗೊಳಿಸಿ, ಉದ್ಘಾಟಿಸಬೇಕು. ಗ್ರಾಮೀಣ ಪ್ರದೇಶಗಳಿಗೆ, ಬೆಳಿಗ್ಗೆ, ಸಂಜೆ ಬಸ್ ಸಂಪರ್ಕ ಕಲ್ಪಿಸಬೇಕು’ ಎಂದು ಕೃಷಿಕ ಸುರೇಶ್‌ ಸಮನವಳ್ಳಿ ಒತ್ತಾಯಿಸಿದ್ದಾರೆ.

‘ಅಕ್ಕಪಕ್ಕದಲ್ಲೇ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲು ಮುಂದಾಗಿರುವುದರಿಂದ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಕೂಡಲೇ ಈ ಸೌಲಭ್ಯ ಸಿಗುವಂತಾಗಲಿ’ ಎಂದು ಗ್ರಾಮಸ್ಥ ಸುರೇಶ್‌ ಮಾಸಾಲ್ತಿ ಆಶಿಸಿದ್ದಾರೆ.

ನಿಲ್ದಾಣದ ಒಳನೋಟ

ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಅನುದಾನ ಒದಗಿಸದೇ ಯೋಜನೆಯನ್ನು ಘೋಷಿಸಿತ್ತು. ಕಾಂಗ್ರೆಸ್‌ ನೇತೃತ್ವದ ವಸರ್ಕಾರದಿಂದ ಅನುದಾನ ಒದಗಿಸಿದ್ದು ಮಳೆಗಾಲಕ್ಕೂ ಮುನ್ನ ಬಸ್ ನಿಲ್ದಾಣ ಉದ್ಘಾಟನೆಯಾಗಲಿದೆ

–ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವ

‘ಉದ್ಘಾಟನೆ ದಿನವೇ ಭೂಮಿ ಪೂಜೆ’

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂದುವರಿದ ಕಾಮಗಾರಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರದಿಂದ ₹ 2.49 ಕೋಟಿ ಹೆಚ್ಚುವರಿ ಅನುದಾನ ಮಂಜೂರು ಮಾಡಿಸಿದ್ದಾರೆ. ಬಸ್‌ ನಿಲ್ದಾಣದ ಸುತ್ತ ಕಾಂಕ್ರೀಟ್‌ ಕಾಮಗಾರಿ ನಡೆಯಲಿದೆ. ಸರ್ಕಾರಿ ಬಸ್‌ ನಿಲ್ದಾಣದ ಉದ್ಘಾಟನೆಯ ದಿನವೇ ಪಕ್ಕದ ಜಾಗದಲ್ಲಿ ಖಾಸಗಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾಗಿ  ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಅನೀಶ್‌ ಪಾಟೀಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.