ADVERTISEMENT

ಅಂಗನವಾಡಿ ಕಾರ್ಯಕರ್ತೆಯರು ವಾತ್ಸಲ್ಯ ನೀಡುವ ತಾಯಿ ಸ್ವರೂಪರು: ನ್ಯಾಯಾಧೀಶ ಸಂತೋಷ್

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 5:08 IST
Last Updated 20 ಅಕ್ಟೋಬರ್ 2025, 5:08 IST
ಎಂ.ಎಸ್.ಸಂತೋಷ್
ಎಂ.ಎಸ್.ಸಂತೋಷ್   


ಶಿವಮೊಗ್ಗ: ಅಂಗನವಾಡಿ ಕಾರ್ಯಕರ್ತರು ತಾಯಿ ಸ್ವರೂಪರಾಗಿದ್ದಾರೆ. ಅಂಗನವಾಡಿಯಲ್ಲಿ ಮಗುವಿನ ಪಾಲನೆ ಮತ್ತು ಪೋಷಣೆ ಮಾಡುವ ಮೂಲಕ ಮಾತೃ ವಾತ್ಸಲ್ಯ ನೀಡುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ್ ಹೇಳಿದರು.

ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಡಿಎಆರ್‌ ಸಭಾ ಭವನದಲ್ಲಿ ಆಯೋಜಿಸಿದ್ದ ‘ಜಿಲ್ಲಾ ಮಟ್ಟದ ಪೋಷಣ್ ಮಾಸಾಚರಣೆ’ ಮತ್ತು ‘ಬೇಟಿ ಬಚಾವೋ ಬೇಟಿ ಪಡಾವೋ’ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಶಾಂತಿ ಮತ್ತು ಅಭಿವೃದ್ಧಿ ಕಾಪಾಡಲು ಈ ಇಲಾಖೆ ಬಹಳಷ್ಟು ಶ್ರಮಿಸುತ್ತಿದ್ದು, ಇದ್ದಕ್ಕಾಗಿ ಅಂಗನವಾಡಿ ಕಾರ್ಯಕರ್ತರು ಸೈನಿಕರಂತೆ ಸೇವೆ ಮಾಡುತ್ತಿದ್ದಾರೆ. ಜಿಲ್ಲೆಯನ್ನು ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಇನ್ನಷ್ಟು ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.

ADVERTISEMENT

ಮಗುವಿಗೆ ಶೋಷಣೆ ಆಗಬಾರದು ಹಾಗೂ ಪಾಲನೆಯಲ್ಲಿ ಯಾವುದೇ ಕೊರತೆ ಉಂಟಾಗಬಾರದೆಂಬ ಉದ್ದೇಶದಿಂದ ಈ ಇಲಾಖೆ ಸ್ಥಾಪನೆ ಮಾಡಲಾಗಿದೆ. ಪ್ರತಿದಿನವೂ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಈ ಮೂಲಕ ಮಗುವಿನ ಲಾಲನೆ, ಪಾಲನೆ ಮಾಡುತ್ತಾ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತರು ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣ ತಡೆಗಟ್ಟುವಲ್ಲಿ, ಆ ಬಗ್ಗೆ ಜಾಗೃತಿ ಮೂಡಿಸಲು ಕೂಡ ಬಹುಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದರು.

ದೇಶದಲ್ಲಿ ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಎಂಬ ಅನಿಷ್ಟ ಪದ್ಧತಿಗಳು ಒಳಗೊಂಡಿದ್ದವು. ಆದರೆ ಸಂವಿಧಾನ ಇವೆಲ್ಲವನ್ನು ಅಪರಾಧ ಪ್ರಕರಣಗಳೆಂದು ಪರಿಗಣಿಸಿ ಅದನ್ನು ಅನುಸರಿಸುವವರಿಗೆ ಶಿಕ್ಷೆ ನೀಡಲು ಕಾಯ್ದೆ ತಂದಿದೆ. ಇದರ ಜೊತೆಗೆ ಹೆಣ್ಣಿಗೂ ಆಸ್ತಿಯಲ್ಲಿ ಹಕ್ಕಿದೆ ಎಂಬ ಕಾನೂನು ಜಾರಿ ಮಾಡಿದೆ ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಓ.ಮಲ್ಲಪ್ಪ ಮಾತನಾಡಿ, ಇದು ಸರ್ಕಾರದ ಮಹಾತ್ವಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಅದರ ಬೆನ್ನೆಲುಬು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಾಗಿದ್ದಾರೆ ಎಂದರು.

ಜಿಲ್ಲೆಯಾಗುವ ತಾಯಿ ಹಾಗೂ ಮಕ್ಕಳ ಮರಣವನ್ನು ತಡೆಗಟ್ಟುವಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಕೆಲಸ ಮಾಡಬೇಕು. ರಾಜ್ಯದಲ್ಲಿ 59 ತಾಯಂದಿರ ಮರಣ ಪ್ರಕರಣ ದಾಖಲಾಗಿದ್ದು, ಇದನ್ನು ತಡೆಗಟ್ಟುವ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ. ಆ ನಿಟ್ಟಿನಲ್ಲೇ ವೈದ್ಯಕೀಯ ತುರ್ತು ಸೇವೆ, ಚಿಕಿತ್ಸೆ ಸಲಕರಣಗಳನ್ನು ಈ ಯೋಜನೆಯಿಂದ ಒದಗಿಸಲಾಗುತ್ತಿದೆ. ಅದರಂತೆ ಆಸ್ಪತ್ರೆಯಲ್ಲಿ ಹೆರಿಗೆ ಆಗಬೇಕು. ಪ್ರಸವದಿಂದ ಹೆಚ್ಚು ರಕ್ತಸ್ರಾವ ಉಂಟಾಗುತ್ತಿದ್ದರೆ ಅದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್ ಪ್ರಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಮನೋರೋಗ ತಜ್ಞೆ ಡಾ.ಪವಿತ್ರ ಕೆ.ಎಸ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಿ.ಗಂಗಾ ಬಾಯಿ ಹಾಜರಿದ್ದರು.

ಆಂತರಿಕ ದೂರು ಸಮಿತಿ ರಚನೆಗೆ ಸೂಚನೆ

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ತಡೆಗಟ್ಟಲು ಆಂತರಿಕ ದೂರು ಸಮಿತಿಯನ್ನು ರಚಿಸಲು ಸೂಚಿಸಲಾಗಿದೆ. ಯಾವ ಸಂಸ್ಥೆಯಲ್ಲಿ 10 ಮಹಿಳೆಯರು ಕೆಲಸ ಮಾಡುತ್ತಾರೊ ಅಂತಹ ಸಂಸ್ಥೆಗಳು ಈ ಸಮಿತಿ ರಚನೆ ಮಾಡಬೇಕು. ಇದುವರೆಗೂ ಜಿಲ್ಲೆಯಲ್ಲಿ ಯಾವ ಸಂಸ್ಥೆಗಳು ಆಂತರಿಕ ದೂರು ಸಮಿತಿಯನ್ನು ರಚಿಸಿಲ್ಲವೋ ಕೂಡಲೇ ರಚಿಸಿ ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಗಟ್ಟಲು ಸಹಕಾರಿಯಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಹೇಳಿದರು.

ಅಂಗನವಾಡಿಯು ಶುಚಿತ್ವವಾಗಿ ಇರಬೇಕು. ಅದರ ಸುತ್ತಮುತ್ತಲಿನ ವಾತಾವರಣದಲ್ಲಿ ಶುಚಿತ್ವ ಕಾಪಾಡಬೇಕು. ಅದಕ್ಕೆ ಸಮಾಜದಲ್ಲಿನ ನಾಗರೀಕರು ಹಾಗೂ ಸ್ಥಳೀಯ ಸಂಸ್ಥೆಗಳು ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಆಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ.
-ಎಂ.ಎಸ್.ಸಂತೋಷ್, ಹಿರಿಯ ಸಿವಿಲ್ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.