
ಹೊಸನಗರ: ‘ಆರ್ಥಿಕ ಶೋಷಣೆ ತಪ್ಪಿಸುವ ಕಾರಣದಿಂದ ಸಹಕಾರಿ ಕ್ಷೇತ್ರ ಜನ್ಮ ತಾಳಿ, ಬೆಳೆದು ನಿಂತಿದೆ. ಈ ಆರ್ಥಿಕ ಕ್ಷೇತ್ರದ ಬೆಳವಣಿಗೆಯು ನಂಬಿಕೆಯ ತಳಹದಿ ಮೇಲೆ ನಿಂತಿದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲ್ಲೂಕಿನ ಸಂಪೇಕಟ್ಟೆಯಲ್ಲಿ ₹ 65 ಲಕ್ಷ ವೆಚ್ಚದ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
‘ಆರ್ಥಿಕ ವಹಿವಾಟು ಶಿಸ್ತುಬದ್ಧವಾಗಿ ನಡೆದರೆ ಮಾತ್ರ ವ್ಯವಹಾರ ಉತ್ತಮವಾಗಿರುತ್ತದೆ. ಇಂದು ರೈತರಿಗೆ ಬೆಳೆ ಸುಲಭವಾಗಿ ದಕ್ಕುತ್ತಿಲ್ಲ. ರೋಗ ರುಜಿನದಿಂದ ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದ ಜವಾಬ್ದಾರಿ ಹೆಚ್ಚಿದೆ. ಈ ಸಹಕಾರ ಕ್ಷೇತ್ರದಲ್ಲೂ ಮೀಸಲಾತಿ ಬಂದಿದೆ. ಅದು ಸರಿಯಲ್ಲ, ಆಡಳಿತ ಮಂಡಳಿಗೆ ಸ್ವತಂತ್ರ ನೀಡಬೇಕಿದೆ’ ಎಂದರು.
ಭದ್ರತಾ ಕೊಠಡಿ ಉದ್ಘಾಟಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿ, ‘ಗ್ರಾಮಾಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರ ನಿರ್ಣಾಯಕ ಪಾತ್ರ ವಹಿಸುತ್ತಿದೆ. ರೈತರಿಗೆ ಒಂದೇ ಸೂರಿನಲ್ಲಿ ಎಲ್ಲಾ ಸೌಲಭ್ಯಗಳು ಸಿಗಬೇಕು. ಸರ್ಕಾರದ ಅನುದಾನ ತೆಗೆದುಕೊಳ್ಳದೇ ಸಂಪೇಕಟ್ಟೆಯಲ್ಲಿ ನೂತನ ಕಟ್ಟಡ ನಿರ್ಮಿಸಿರುವುದು ಸಾಧನೆ. ಅಲ್ಲದೇ ಸಂಪೂರ್ಣ ಗಣಕೀಕರಣ ಮಾಡಿ ಆನ್‌ಲೈನ್ ಎಂಟ್ರಿ ಮಾಡುವುದರಲ್ಲಿ ಸಂಪೇಕಟ್ಟೆ ಸಹಕಾರಿ ಶಿವಮೊಗ್ಗ ಜಿಲ್ಲೆಯಲ್ಲೇ ಪ್ರಥಮಸ್ಥಾನ ಪಡೆದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ನೂತನ ಕಟ್ಟಡದ ಗುತ್ತಿಗೆದಾರ ಪುಟ್ಟಪ್ಪ ಅವರನ್ನು ಸನ್ಮಾನಿಸಲಾಯಿತು.
ಸಂಪೇಕಟ್ಟೆ ಸಹಕಾರ ಸಂಘದ ಅಧ್ಯಕ್ಷ ರಮೇಶ ಟಿ.ಎಂ.ಅಧ್ಯಕ್ಷತೆ ವಹಿಸಿದ್ದರು. ಸಿಇಒ ಪ್ರಸನ್ನ ವರದಿ ವಾಚಿಸಿದರು.
ಸಂಪೇಕಟ್ಟೆ ಸಹಕಾರಿ ಸಂಘದ ಉಪಾಧ್ಯಕ್ಷ ನಾರಾಯಣ ಎಚ್.ಕೆ., ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ.ಪರಮೇಶ್, ಜಿ.ಎನ್.ಸುಧೀರ್, ಮಧುಸೂದನ್ ನಾವಡ, ಡಿಸಿಸಿ ಬ್ಯಾಂಕ್ ಎಂ.ಡಿ.ರಾಜಣ್ಣ ರೆಡ್ಡಿ, ಸಾಗರ ಆಪ್ಸ್‌ಕೋಸ್ ಅಧ್ಯಕ್ಷ ಇಂದೂಧರ ಗೌಡ, ಮ್ಯಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ಪ್ರಮುಖರಾದ ರಾಮಚಂದ್ರ ಅಂಬ್ಲಾಡಿ, ಕೃಷ್ಣಮೂರ್ತಿ ಬಿ., ಚಂದ್ರಶೆಟ್ಟಿ, ಕೃಷ್ಣಪ್ಪ ಟಿ.ಪಿ., ಪುಟ್ಟಪ್ಪ ಎಂ.ಕೆ., ಧರ್ಮಪ್ಪ, ಎಸ್.ವಿ.ಮಲ್ಲಿಕಾರ್ಜುನ್, ಮೋಹನಶೆಟ್ಟಿ, ನಿರೂಪಕಿ ಅಶ್ವಿನಿ ಪಂಡಿತ್ ಸಂಪೇಕಟ್ಟೆ, ಮುತ್ತ, ಆಶಾ, ಸುಧಾ, ಶಿವಕುಮಾರ್, ಕೂಡ್ಲುಕೊಪ್ಪ ಸುರೇಶ್, ಪ್ರಸನ್ನ, ರಾಜೇಂದ್ರ, ಸೀಮಾ, ಸಹಕಾರಿ ಇಲಾಖೆ ಅಧಿಕಾರಿಗಳು, ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.