ADVERTISEMENT

ತೀರ್ಥಹಳ್ಳಿ | ದೇಶದ ನಾಗರಿಕರಿಗೆ ಮಾತ್ರ ಮತದಾನದ ಹಕ್ಕು: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 3:45 IST
Last Updated 15 ಫೆಬ್ರುವರಿ 2026, 3:45 IST
ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಬಿಎಲ್‌ಎ-2 ಕಾರ್ಯಗಾರವನ್ನು ಶನಿವಾರ ಉದ್ಘಾಟಿಸಿದರು.
ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಬಿಎಲ್‌ಎ-2 ಕಾರ್ಯಗಾರವನ್ನು ಶನಿವಾರ ಉದ್ಘಾಟಿಸಿದರು.   

ತೀರ್ಥಹಳ್ಳಿ: ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಹಕ್ಕು ಇಲ್ಲ. ಭಾರತದ ನಾಗರೀಕ ಆಗಿರಬೇಕು. ವಿದೇಶಿ ವಲಸಿಗರಿಗೆ, ಮೃತಪಟ್ಟವರಿಗೆ ಈ ಹಿಂದೆ ಕಾಂಗ್ರೆಸ್‌ ಅವಧಿಯಲ್ಲಿ ಮತ ಚಲಾವಣೆ ಹಕ್ಕು ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಮತಪಟ್ಟಿ ಪರಿಷ್ಕರಣೆ ಮುಖ್ಯ ಘಟ್ಟ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಶನಿವಾರ‌ ಕುರುವಳ್ಳಿಯ ಆರ್‌ಎಸ್‌ಬಿ ಸಭಾಭವನದಲ್ಲಿ ನಡೆದ ಬಿಜೆಪಿ ಬಿಎಲ್‌ಎ-2 ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಪಕ್ಷದ ಗೆಲುವಿನಲ್ಲಿ ಕಾರ್ಯಕರ್ತರ ತಾಕತ್ತು ಇದೆ. ಚುನಾವಣೆಯ ಸಂದರ್ಭ ಬೂತ್‌ ಎಜೆಂಟರು ನೀಡಿದ ಲೆಕ್ಕಾಚಾರ ತಪ್ಪಾಗಲೆ ಇಲ್ಲ. ಅಷ್ಟೊಂದು ಅಚ್ಚುಕಟ್ಟು ಲೆಕ್ಕಾಚಾರ ಎಲ್ಲಾ ಚುನಾವಣೆಯಲ್ಲಿಯೂ ನೀಡಿದ್ದಾರೆ ಎಂದರು.

ದೇಶದಲ್ಲಿ 65 ವರ್ಷಗಳ ಕಾಂಗ್ರೆಸ್‌ ಆಡಳಿತದಿಂದ ಇಂದಿಗೂ ವಿದೇಶಿಗರ ಮುಂದೆ ಬಿಕ್ಷಾಪಾತ್ರೆ ಹಿಡಿಯುವಂತಾಗಿದೆ. ಇಲ್ಲಿ ಹುಟ್ಟಿದ ಹುಳಕೆಲ್ಲ ಗಾಂಧಿ ಹೆಸರು ಇಟ್ಟಿದ್ದಾರೆ. ಸಂವಿಧಾನ ವಿರೋಧಿ ಕೃತ್ಯಗಳು, ಅಭಿವೃದ್ಧಿ ಶೂನ್ಯ ಯೋಜನೆ ನೀಡಿದ್ದಾರೆ. ಆದರೆ ಬಿಜೆಪಿ ಯಾವತ್ತು ತೋಳ್ಬಲ, ಸುಳ್ಳಿನ ಆಧಾರದಲ್ಲಿ ಪಕ್ಷ ಕಟ್ಟಿಲ್ಲ ಎಂದು ನುಡಿದರು.

ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ ಎಲ್ಲಾ ಕಾರ್ಯಕರ್ತರು ಎಚ್ಚರದಿಂದ ಕೆಲಸ ಮಾಡಬೇಕು. ಬಿಎಲ್‌ಓಗಳಿಗೆ ಸರಿಯಾದ ಮಾಹಿತಿ ನೀಡಿ ವಿದೇಶಿಗರು, ಮೃತಪಟ್ಟವರ ಹೆಸರು ಇದ್ದಲ್ಲಿ ರದ್ದುಪಡಿಸಲು ಅರ್ಜಿ ನೀಡಬೇಕು. ನಿಮ್ಮ ಹೊಣೆಗಾರಿಕೆ ಮರೆಯಬಾರದು. ನೈಜ ಮತದಾರರಿಂದ ಮಾತ್ರ ಚುನಾವಣೆ ನಡೆಯಬೇಕು ಎಂದರು.

ವಿಧಾನಸಭೆಯ ಒಳಗೆ ಸಾಮಾನ್ಯ ವ್ಯಕ್ತಿಗಳು ಕಾಲಿಟ್ಟರೆ ಬಿಗುವಿನ ತಪಾಸಣೆ ನಡೆಯುತ್ತದೆ. ಹೀಗಿರುವಾಗ ಮಿನಿಸ್ಟರ್‌ ಕಚೇರಿಗೆ ಹಣ, ಬಂಗಾರ ಹೇಗೆ ಸೇರುತ್ತದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ಅಭಿವೃದ್ಧಿ ಶೂನ್ಯವಾಗುತ್ತದೆ. ಮಾನ ಮರ್ಯಾದೆ ಇದ್ದರೆ ಅಬಕಾರಿ ಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ತು ಸದಸ್ಯ ಡಾ.ಧನಂಜಯ ಸರ್ಜಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್‌, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್‌ ಕುಕ್ಕೆ, ಮುಖಂಡರಾದ ಜ್ಞಾನೇಶ್ವರ, ಆರ್.ಟಿ.ಗೋಪಾಲ್‌,‌ ಅಶೋಕಮೂರ್ತಿ, ಚಂದುವಳ್ಳಿ ಸೋಮಶೇಖರ್, ಭಾರತಿ ಸುರೇಶ್, ಸುಮಾ ರಾಮಚಂದ್ರ, ರಕ್ಷಿತ್ ಮೇಗರವಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.