ADVERTISEMENT

ಕೊಳೆ ರೋಗದಿಂದ ಅಡಿಕೆ ನಾಶ: ಖಾಸಗಿ ಪ್ರಯೋಗಾಲಯದ ಮೊರೆಗೆ ನಿರ್ಣಯ

ಬೆಳೆಗಾರರ ಮಹಾಮಂಡಲದ ಆತಂಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 7:25 IST
Last Updated 10 ಫೆಬ್ರುವರಿ 2026, 7:25 IST
ಶಿವಮೊಗ್ಗದ ಮ್ಯಾಮ್ಕೋಸ್ ಸಭಾಂಗಣದಲ್ಲಿ ಸೋಮವಾರ ನಡೆದ ಅಡಿಕೆ ಮಹಾಮಂಡಲದ ಸಭೆಯ ನೋಟ
ಶಿವಮೊಗ್ಗದ ಮ್ಯಾಮ್ಕೋಸ್ ಸಭಾಂಗಣದಲ್ಲಿ ಸೋಮವಾರ ನಡೆದ ಅಡಿಕೆ ಮಹಾಮಂಡಲದ ಸಭೆಯ ನೋಟ   

ಶಿವಮೊಗ್ಗ: ಎಲೆಚುಕ್ಕಿ, ಕೊಳೆ ರೋಗ ಸೇರಿ ಅಡಿಕೆ ಬೆಳೆಯನ್ನು ಕಾಡುತ್ತಿರುವ ರೋಗಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಖಾಸಗಿ ಸಂಶೋಧನಾ ಸಂಸ್ಥೆಗಳ ಮೊರೆ ಹೋಗಲು ಅಡಿಕೆ ಬೆಳೆಗಾರರ ಸಂಘ–ಸಂಸ್ಥೆಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಸೋಮವಾರ ಇಲ್ಲಿನ ಮ್ಯಾಮ್ಕೋಸ್ ಸಭಾಂಗಣದಲ್ಲಿ ಕರ್ನಾಟಕ ಅಡಿಕೆ ಮಹಾಮಂಡಲದಿಂದ ಮಂಡಲದ ಅಧ್ಯಕ್ಷರೂ ಆದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಲೆನಾಡು, ಕರಾವಳಿ ಹಾಗೂ ಮಧ್ಯಕರ್ನಾಟಕ ಭಾಗದ 33 ವಿವಿಧ ಸಂಘ– ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

‘ಎಲೆಚುಕ್ಕಿ ರೋಗ ಬಾಧೆಯಿಂದ ಮಲೆನಾಡಿನಲ್ಲಿ ಅಡಿಕೆ ಬೆಳೆ ಸಂಪೂರ್ಣ ನಾಶದ ಹಾದಿಯಲ್ಲಿದೆ. 20 ಕ್ವಿಂಟಲ್‌ ಅಡಿಕೆ ಬೆಳೆಯುತ್ತಿದ್ದವರು ಈಗ 4ರಿಂದ 5 ಕ್ವಿಂಟಲ್‌ಗೆ ಬಂದು ನಿಂತಿದ್ದಾರೆ. ಈಗ ಬೆಳೆಗಾರರು ವಿಪರೀತ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಡಿಕೆ ಬೆಳೆ ರಕ್ಷಣೆಗೆ ಸರ್ಕಾರವನ್ನು ನೆಚ್ಚಿಕೊಂಡರೆ ಆಗುವುದಿಲ್ಲ. ರೋಗ ಬಾಧೆ ತಡೆಯಲು ಸರ್ಕಾರಗಳೆಲ್ಲ ಪ್ರಯತ್ನ ಮಾಡುತ್ತಿವೆ. ಆದರೆ, ಸರ್ಕಾರದಿಂದ ಬರುವ ನೆರವಿನ ಮೊತ್ತವನ್ನು ಖರ್ಚು ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಅದಕ್ಕೆ ಶಾಶ್ವತ ಮದ್ದು ಕಂಡು ಹಿಡಿಯುವ, ಇಲ್ಲವೇ ನಿಗದಿತ ಅವಧಿಯಲ್ಲಿ ಫಲಿತಾಂಶ ಪಡೆಯುವ ಯೋಜನೆ ರೂಪಿಸುತ್ತಿಲ್ಲ. ಹೀಗಾಗಿ ಪರಿಣಾಮಕಾರಿಯಾಗಿ ಮದ್ದು ಕಂಡುಹಿಡಿಯಲು ಖಾಸಗಿಯವರ ಮೊರೆ ಹೋಗುವುದು ಸೂಕ್ತ’ ಎಂಬ ಕೂಗು ಸಭೆಯಲ್ಲಿ ಕೇಳಿಬಂದಿತು.

ADVERTISEMENT

‘ಖಾಸಗಿಯವರು ರೈತರ ತೋಟಗಳಿಗೆ ಭೇಟಿ ಕೊಟ್ಟು ತಳ ಹಂತದಿಂದಲೇ ಪ್ರಯೋಗಗಳನ್ನು ಮಾಡುತ್ತಾರೆ. ಅವರ ಬಳಿ ಸುಸಜ್ಜಿತ ಪ್ರಯೋಗಾಲಯ, ಅತ್ಯಾಧುನಿಕ ಉಪಕರಣಗಳು ಇವೆ. ಪೇಟೆಂಟ್ ಪಡೆದಿರುವ ವಿಜ್ಞಾನಿ, ಸಿಬ್ಬಂದಿಯ ತಂಡ ಇದೆ. ಏನಾದರೂ ಮಾಡಬೇಕು ಎಂಬ ಹಸಿವು ಅವರಿಗೆ ಇದೆ. ಹೀಗಾಗಿ ಅವರ ಮೊರೆ ಹೋಗೋಣ’ ಎಂದು ಸಭೆಯಲ್ಲಿದ್ದ ಸದಸ್ಯರು ಸಲಹೆ ನೀಡಿದರು.

ಔಷಧಿ ಕಂಡು ಹಿಡಿಯಲು ಬೆಂಗಳೂರಿನ ಖಾಸಗಿ ‍ಪ್ರಯೋಗಾಲಯದೊಂದಿಗೆ ಒ‍ಪ್ಪಂದ ಮಾಡಿಕೊಳ್ಳುವ ಬಗ್ಗೆ ಕೊನೆಗೆ ಸಭೆ ನಿರ್ಣಯ ಕೈಗೊಂಡಿತು. ಸಂಶೋಧನೆಗೆ ತಗುಲುವ ವೆಚ್ಚವನ್ನು ಮಹಾಮಂಡಲದ ಅಡಿಯಲ್ಲಿ ಬರುವ ಎಲ್ಲ ಸಂಘ–ಸಂಸ್ಥೆಗಳು ಭರಿಸಬೇಕು. ಅವರಲ್ಲಿ ಆವಕವಾಗುವ ಮೂಟೆಗಳಿಗೆ ಅನುಗುಣವಾಗಿ ಹಣ ನಿಗದಿ ಮಾಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ, ಸಾಗರದ ಆಪ್ಕೋಸ್ ಅಧ್ಯಕ್ಷ ಇಂದೂಧರ ಗೌಡ, ಉಪಾಧ್ಯಕ್ಷ ಕೆ.ಎಂ.ಸೂರ್ಯನಾರಾಯಣ, ಚನ್ನಗಿರಿಯ ತುಮ್ಕೋಸ್ ಅಧ್ಯಕ್ಷ ಶಿವಕುಮಾರ್‌, ಮಂಗಳೂರಿನ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ, ದಾವಣಗೆರೆ ದಾಮ್ಕೋಸ್‌ನ ಅಧ್ಯಕ್ಷ ಬಿ.ಕೆ.ಶಿವಕುಮಾರ್‌, ಕುಮಟಾ ಅಡಿಕೆ ಸೌಹಾರ್ದ ಸಹಕಾರಿ ನಿಯಮಿತದ ಸಿಇಒ ನಾಗರಾಜ್‌, ಉತ್ತರ ಕನ್ನಡ ಜಿಲ್ಲೆಯ ಟಿಎಂಎಸ್‌ ಸಂಸ್ಥೆಯ ಪ್ರತಿನಿಧಿಗಳು ‍ಪಾಲ್ಗೊಂಡಿದ್ದರು.

ಎಲೆಚುಕ್ಕಿ ರೋಗ ಸೇರಿ ಬೇರೆ ಬೇರೆ ರೋಗ ಬಾಧೆಗಳ ಆತಂಕದಿಂದ ಅಡಿಕೆ ಬೆಳೆಗಾರರನ್ನು ಹೊರ ತರಲು ಯಾವೆಲ್ಲ ಮಾರ್ಗಗಳನ್ನು ಅನುಸರಿಸಬಹುದೋ ಅವೆಲ್ಲವನ್ನೂ ಮಾಡಲಿದ್ದೇವೆ.
–ಆರಗ ಜ್ಞಾನೇಂದ್ರ, ಅಡಿಕೆ ಮಹಾಮಂಡಲದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.