
ಶಿವಮೊಗ್ಗ: ‘ಎಲೆಚುಕ್ಕಿ, ಕೊಳೆ ರೋಗಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿದು ಅಡಿಕೆ ಬೆಳೆಗಾರರಿಗೆ ನೆರವಾಗಲು ಸರ್ಕಾರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಡಿಕೆ ಸಂಶೋಧನಾ ವಿಭಾಗಕ್ಕೆ ₹3.5 ಕೋಟಿ ಬಿಡುಗಡೆ ಮಾಡಿದೆ’ ಎಂದು ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಭಾನುವಾರ ಕೃಷಿ ಮತ್ತು ತೋಟಗಾರಿಕೆ ಮೇಳದ ಮೂರನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ‘ಎಲೆಚುಕ್ಕಿ ಹಾಗೂ ಕೊಳೆ ರೋಗಗಳ ನಿಯಂತ್ರಣಕ್ಕೆ ಔಷಧಿಗಳನ್ನು ಕಂಡುಹಿಡಿಯಲು ವಿಜ್ಞಾನಿಗಳು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ಗೋಡಂಬಿ ಉತ್ಪಾದನೆ ಹೆಚ್ಚಳಕ್ಕೂ ಪ್ರಯತ್ನ ನಡೆದಿದೆ’ ಎಂದರು.
‘ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ ಮೂರು ದಿನಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ರೈತರು ಭೇಟಿ ನೀಡಿದ್ದಾರೆ. ಮೇಳ ವರ್ಷದಿಂದ ವರ್ಷಕ್ಕೆ ಕೃಷಿಕರಿಗೆ ಹತ್ತಿರವಾಗುತ್ತಿರುವುದು ಸಂತಸದ ವಿಚಾರ. ಈ ಬಾರಿ ವಿಶ್ವವಿದ್ಯಾಲಯದ ವಿಜ್ಞಾನಿಗಳು 15 ದಿನಗಳ ಕಾಲ ನೀರಿನೊಳಗೆ ಇದ್ದರೂ ಕೊಳೆಯದಂತಹ ಸಹ್ಯಾದ್ರಿ ಕೆಂಪು ಹೆಸರಿನ ಭತ್ತದ ತಳಿ ಕಂಡುಹಿಡಿದು ರೈತರಿಗೆ ನೆರವಾಗಿದ್ದಾರೆ. ಇದು ಶ್ಲಾಘನೀಯ’ ಎಂದು ಹೇಳಿದರು.
‘ಕಾಫಿ ಬೋರ್ಡ್, ಚಹಾ ಮಂಡಳಿ ಸೇರಿದಂತೆ ಖಾಸಗಿ ಕಂಪನಿಗಳು ಕೃಷಿ ಕ್ಷೇತ್ರದಲ್ಲಿನ ಸಂಶೋಧನೆಗಳ ಫಲ ಹಾಗೂ ಆವಿಷ್ಕಾರಗೊಳಿಸಿದ ಯಂತ್ರೋಪಕರಣಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಟ್ಟಿರುವುದು ಗಮನಾರ್ಹ. ಜೊತೆಗೆ ಈ ಬಾರಿ ರಾಸುಗಳ ಪ್ರದರ್ಶನವೂ ಚೆನ್ನಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಕಡಿಮೆ ನೀರು ಬಳಸಿ ಬೆಳೆಯಬಹುದಾದ ಬೆಳೆಗಳನ್ನು ವಿಜ್ಞಾನಿಗಳು ಪ್ರೋತ್ಸಾಹಿಸಬೇಕಿದೆ. ಜೊತೆಗೆ ಇರುವ ನೀರನ್ನು ಹೇಗೆ ಮಿತವಾಗಿ ಬಳಸಬೇಕು ಎಂಬುದರ ಅರಿವು ಮೂಡಿಸಬೇಕು’ ಎಂದು ಸುಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ ಸಲಹೆ ನೀಡಿದರು.
‘ಈ ಬಾರಿ ಅತಿವೃಷ್ಟಿಯಿಂದ ಮಲೆನಾಡು ಭಾಗದಲ್ಲಿ ಅಡಿಕೆ ಇಳುವರಿ ಕಡಿಮೆಯಾಗಿದೆ. ಜೊತೆಗೆ ರೋಗ ಬಾಧೆಯೂ ಕಾಣಿಸಿಕೊಂಡಿದೆ. ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಡಿಕೆಗೆ ಸಂಬಂಧಿಸಿದ ತೊಂದರೆಗಳ ನಿವಾರಣೆಗೆ ಒತ್ತು ಕೊಡಿ’ ಎಂದರು.
‘ಅನ್ನಭಾಗ್ಯ ಯೋಜನೆಯಲ್ಲಿ ಬರೀ ಅಕ್ಕಿಯ ಬದಲು ಆಯಾ ಭಾಗದಲ್ಲಿ ಹೆಚ್ಚು ಬಳಕೆ ಮಾಡುವ ಧಾನ್ಯಗಳ ವಿತರಣೆ ಮಾಡುವಂತೆ ಮಾಡಿದ ಮನವಿಗೆ ಸ್ಪಂದಿಸಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಮಲೆನಾಡು ಭಾಗಕ್ಕೆ ಅಕ್ಕಿ, ಮಂಡ್ಯ ಭಾಗದಲ್ಲಿ ರಾಗಿ, ಉತ್ತರ ಕರ್ನಾಟಕದಲ್ಲಿ ಜೋಳ ಕೊಡುವಂತೆ ಸೂಚನೆ ನೀಡಿದ್ದಾರೆ. ಅದು ಕಾರ್ಯರೂಪಕ್ಕೆ ಬರುತ್ತಿದೆ’ ಎಂದು ಹೇಳಿದರು.
ಶಿವಪ್ಪ ನಾಯಕನ ಶಿಸ್ತು ಮಾದರಿಯಾಗಲಿ: ‘ಅಡಿಕೆ ಸೇರಿದಂತೆ ಏಕ ಪದ್ಧತಿಯ ಹಾಗೂ ಬರೀ ವಾಣಿಜ್ಯ ಉದ್ದೇಶದ ಬೆಳೆಗಳ ಹೊರತಾಗಿಯೂ ಮಣ್ಣು, ವಾತಾವರಣ, ಪ್ರಾದೇಶಿಕತೆ, ನೀರಿನ ಲಭ್ಯತೆ ಅಧರಿಸಿ ಬೇರೆ ಬೇರೆ ಬೆಳೆಗಳತ್ತ ರೈತರನ್ನು ಆಕರ್ಷಿಸಲು ಸರ್ಕಾರ ಕೆಳದಿ ಶಿವಪ್ಪ ನಾಯಕನ ಶಿಸ್ತನ್ನು ಮಾದರಿಯಾಗಿಸಿಕೊಳ್ಳಲಿ’ ಎಂದು ಸಾನ್ನಿಧ್ಯ ವಹಿಸಿದ್ದ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಲಹೆ ನೀಡಿದರು.
‘ಶಿವಪ್ಪ ನಾಯಕ ಜಮೀನನ್ನು ಪ್ರಾಯೋಗಿಕವಾಗಿ ವಿಭಾಗಿಸಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಬೆಳೆ ಬೆಳೆದು ಎಷ್ಟು ನೀರು, ಗೊಬ್ಬರ ಖರ್ಚು ಆಗಲಿದೆ. ಅದರಿಂದ ಬರುವ ಆದಾಯ ಗಮನಿಸಿ ನಂತರ ಕಂದಾಯ ನಿಗದಿ ಮಾಡಿದ್ದರು. ಹೀಗೆ ರೈತರಿಗೆ ವೈಜ್ಞಾನಿಕವಾಗಿ ಪ್ರೋತ್ಸಾಹ ನೀಡುವ ಪರಂಪರೆ ಮುಂದುವರಿಸಿಕೊಂಡು ಹೋಗುವ ಕೆಲಸ ಆಗಲಿ’ ಎಂದು ಕಿವಿಮಾತು ಹೇಳಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್.ಸಿ.ಜಗದೀಶ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಎಲ್.ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಭೂಪಾಲ್, ರೈತ ಮುಖಂಡ ತೇಜಸ್ವಿ ಪಟೇಲ್, ಪ್ರೊ.ಶಶಾಂಕ್ ಹಾಜರಿದ್ದರು.
ಕುಲಕಸುಬು ಎಂದು ಅಪ್ಪ ಹಾಕಿದ್ದ ಆಲದ ಮರವನ್ನೇ ಪೋಷಿಸುವುದು ಸಲ್ಲ. ಹವಾಮಾನ ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ಹಾಗೂ ವಾಣಿಜ್ಯ ಮಹತ್ವ ಆಧರಿಸಿ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಸರ್ಕಾರ ಕೃಷಿ ವಿಶ್ವವಿದ್ಯಾಲಯ ಕೈಜೋಡಿಸಬೇಕು.ಎಚ್.ಎಸ್.ಸುಂದರೇಶ ಸುಡಾ ಅಧ್ಯಕ್ಷ
ತ್ಯಾಗಿ ದಾಸೋಹಿ ಕಾಯಕ ಜೀವಿ ಹೀಗೆ ಗುಣ ವಿಶೇಷಗಳಲ್ಲಿಯೇ ರೈತ ಕಳೆದುಹೋಗುತ್ತಿದ್ದಾನೆ. ಸರ್ಕಾರ ಜನರು ವಿಶ್ವವಿದ್ಯಾಲಯದ ಅಧಿಕಾರಿಗಳು ಹೀಗೆ ಎಲ್ಲರ ಸಾಮೂಹಿಕ ಪ್ರಯತ್ನ ಕೃಷಿಕನ ಬದುಕನ್ನು ಸಮೃದ್ಧಗೊಳಿಸಿದರೆ ಮಾತ್ರ ದೇಶದ ಕಲ್ಯಾಣವಾಗುತ್ತದೆ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬೆಕ್ಕಿನಕಲ್ಮಠ ಶಿವಮೊಗ್ಗ
ಹೆಚ್ಚಿದ ಬೆಳೆ ಅಸಮಾನತೆ: ಅರುಣ್ ಕಳವಳ
‘ರಾಜ್ಯದ ದಕ್ಷಿಣ ಭಾಗದಲ್ಲಿ ಬೆಳೆಯ ಅಸಮಾನತೆ ಹೆಚ್ಚಳಗೊಳ್ಳುತ್ತಿದೆ. ತೆಂಗು ಭತ್ತ ಸೇರಿದಂತೆ ಆಹಾರ ಬೆಳೆಗಳನ್ನು ತೆಗೆದು ರೈತರು ಅಡಿಕೆ ಹಾಕುತ್ತಿದ್ದಾರೆ. ಇದರಿಂದ ಸಾವಿರಾರು ಹೆಕ್ಟೇರ್ ಅಡಿಕೆಮಯವಾಗುತ್ತಿದೆ’ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಬೇಸರ ವ್ಯಕ್ತಪಡಿಸಿದರು. ‘ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡಿ ಯಾವ ಯಾವ ಜಾಗದಲ್ಲಿ ಏನನ್ನು ಬೆಳೆಯಬೇಕು ಎಂಬ ನಿಯಮ ರೂಪಿಸಲಿ’ ಎಂದು ಸಲಹೆ ನೀಡಿದರು. ‘ಹಸಿರು ತಂತ್ರಜ್ಞಾನದ ಬಳಕೆಯ ಮೂಲಕ ಕೃಷಿ ಕ್ಷೇತ್ರವನ್ನು ಇನ್ನಷ್ಟು ಬಲವರ್ಧನೆ ಮಾಡಿ ಚೀನಾ ಹಾಗೂ ಅಮೆರಿಕದ ರೈತರ ಮಟ್ಟಕ್ಕೆ ಭಾರತೀಯ ರೈತರು ಬೆಳೆಯಲು ವೇದಿಕೆ ಸಿದ್ಧಪಡಿಸಲು ವಿಶ್ವವಿದ್ಯಾಲಯಗಳು ಕೈಜೋಡಿಸಬೇಕಿದೆ’ ಎಂದರು.
ಮಣ್ಣು ಪರೀಕ್ಷೆ ಘಟಕಗಳ ಹೆಚ್ಚಿಸಿ: ಡಾ.ಸರ್ಜಿ ಸಲಹೆ
‘ಮಣ್ಣಿನ ಪರೀಕ್ಷೆ ನಡೆಸದೇ ರೈತರು ಜಮೀನುಗಳಿಗೆ ಸುರಿಯುತ್ತಿರುವ ರಾಸಾಯನಿಕ ಗೊಬ್ಬರ ಔಷಧಗಳ ಪರಿಣಾಮವಾಗಿ ನದಿ ಹಳ್ಳ ತೊರೆಗಳು ಸೇರಿದಂತೆ ಜಲಮೂಲಗಳು ವಿಷಮಯವಾಗುತ್ತಿವೆ. ಜೊತೆಗೆ ಕೃಷಿಯ ಖರ್ಚು ಹೆಚ್ಚುತ್ತಿದೆ. ಇದಕ್ಕೆ ಶಿವಮೊಗ್ಗದ ತುಂಗಾ ನದಿಯೂ ಹೊರತಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು. ‘ನೀರಿನಲ್ಲಿ ಅಲ್ಯುಮಿನಿಯಂ ಪ್ರಮಾಣ ಅಪಾಯದ ಪ್ರಮಾಣದಲ್ಲಿದ್ದು ಇದರ ಪರಿಣಾಮ ಮಿದುಳು ಸಂಬಂಧಿ ಕಾಯಿಲೆ ಲಿವರ್ ಸೋರೊಸಿಸ್ ಕ್ಯಾನ್ಸರ್ ಮೂಳೆ ಸಂಬಂಧಿ ರೋಗಗಳು ಹೆಚ್ಚಳಗೊಳ್ಳುತ್ತಿವೆ. ಇಂದು ಪ್ರತಿ 9 ಜನರಲ್ಲಿ ಒಬ್ಬರು ಒಂದಿಲ್ಲೊಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಮಣ್ಣು ಪರೀಕ್ಷಾ ಘಟಕಗಳ ಸಂಖ್ಯೆ ಹೆಚ್ಚಿಸಿ ಜಮೀನಿಗೆ ಔಷಧಿ ರಸಗೊಬ್ಬರ ಹಾಕುವ ಮುನ್ನ ಕಡ್ಡಾಯವಾಗಿ ಮಣ್ಣು ಪರೀಕ್ಷೆ ನಡೆಸುವಂತೆ ರೈತರ ಮನವೊಲಿಸಬೇಕಿದೆ’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.