ADVERTISEMENT

ಅಡಿಕೆ ಹಾನಿಕಾರಕ; ದುಬೆ ಹೇಳಿಕೆಗೆ ಬೆಳೆಗಾರರ ಆಕ್ರೋಶ

ಅಡಿಕೆ ಕ್ಯಾನ್ಸರ್‌ಕಾರಕ, ನಿಷೇಧಿಸಬೇಕು ಎಂದ ಜಾರ್ಖಂಡ್ ಬಿಜೆಪಿ ಸಂಸದ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 12:55 IST
Last Updated 12 ನವೆಂಬರ್ 2021, 12:55 IST
ಬಿ.ಎ.ರಮೇಶ್ ಹೆಗ್ಡೆ
ಬಿ.ಎ.ರಮೇಶ್ ಹೆಗ್ಡೆ   

ಶಿವಮೊಗ್ಗ: ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಅಡಿಕೆ ನಿಷೇಧ ಮಾಡಬೇಕು ಎಂದು ನೀಡಿರುವ ಹೇಳಿಕೆಗೆ ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಅಡಿಕೆ ಲಕ್ಷಾಂತರ ರೈತರ ಬದುಕಿಗೆ ಆಸರೆಯಾಗಿದೆ. ಔಷಧೀಯ ಗುಣವಿರುವುದು ಸಾಬೀತಾದರೂ, ನಿಶಿಕಾಂತ್ ಅಡಿಕೆ ಕ್ಯಾನ್ಸರ್‌ಕಾರಕ, ನಿಷೇಧಿಸಬೇಕು ಎಂದು ಹೇಳಿರುವುದು ಖಂಡನೀಯ. ಇದು ಬಿಜೆಪಿ ಸರ್ಕಾರದ ಅಡಿಕೆ ವಿರೋಧಿ ನೀತಿಯ ಭಾಗ. ಅಪಪ್ರಚಾರದ ಅಭಿಯಾನ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಒಂದು ಕಡೆ ಪ್ರಧಾನ ಮಂತ್ರಿ ಮೋದಿ ಅವರು ಅಡಿಕೆಗೆ ಗೌರವ ತಂದುಕೊಡುತ್ತೇವೆ. ಬೆಳೆಗಾರರ ಹಿತರಕ್ಷಣೆ ಮಾಡುತ್ತೇವೆ ಎಂದು ಚುನಾವಣಾ ಪ್ರಚಾರ ಮಾಡುತ್ತಾರೆ. ಈಗ ತಮ್ಮದೇ ಪಕ್ಷದ ಸಂಸದರೊಬ್ಬರು ಅಡಿಕೆಯ ಮಾನ ತೆಗೆಯುತ್ತಿದ್ದರೂ ಸುಮ್ಮನಿದ್ದಾರೆ. ಬಿಜೆಪಿ ಸರ್ಕಾರ ಬಂದಮೇಲೆ ಅಡಿಕೆಯ ಮಾನ ಹೋಗಿದೆ. ಎರಡು ದಶಕಗಳ ಹಿಂದೆ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಇದ್ದಾಗ ಅಂದಿನ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ರಂಗಮೂರ್ತಿ, ಪಿ.ರಾಮಭಟ್‌ ಮೊದಲಾದವರು ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ಹೇಳಿಕೆ ನೀಡಿದ್ದರು. ಕೇಂದ್ರ ಸಚಿವ ಅನುಪ್ರಿಯ ಪಟೇಲ್, ಅಶ್ವಿನ್ ಕುಮಾರ್ ಕೂಡ ಅಡಿಕೆ ವಿರೋಧಿಗಳಾಗಿದ್ದರು ಎಂದು ಟೀಕಿಸಿದರು.

ADVERTISEMENT

ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೃಷಿ ವೆಬ್‌ಸೈಟ್‌ನಲ್ಲಿ ಅಡಿಕೆಯನ್ನು ಡ್ರಗ್ಸ್ ಪಟ್ಟಿಗೆ ಸೇರಿಸಿದ್ದರು. ಬಿಜೆಪಿ ಸರ್ಕಾರ ಅಡಿಕೆಗೆ ಅವಮಾನ ಮಾಡುತ್ತಲೇ ಬಂದಿದೆ. 2018 ರ ಚುನಾವಣೆಯ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಥಹಳ್ಳಿಯಲ್ಲಿ ₹ 500 ಕೋಟಿ ವೆಚ್ಚದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದರು. ಅರಗ ಜ್ಞಾನೇಂದ್ರ ಗೆದ್ದರೂ ಸಂಶೋಧನಾ ಕೇಂದ್ರ ಆರಂಭವಾಗಿಲ್ಲ ಎಂದು ದೂರಿದರು.

ರಾಜ್ಯದ ಬಿಜೆಪಿ ಸಂಸದರು ನಿಶಿಕಾಂತ್ ಹೇಳಿಕೆಯನ್ನು ಮೌನವಾಗಿ ಸ್ವಾಗತಿಸಿದ್ದಾರೆ. ಅವರ ಮೌನ ಅಡಿಕೆಗೆ ಹಾನಿಕಾರಕ ಎಂದೇ ಅರ್ಥವಾಗುತ್ತದೆ. ತಕ್ಷಣ ಹೇಳಿಕೆ ಖಂಡಿಸಬೇಕು. ಕೇಂದ್ರ ಸರ್ಕಾರ ಅಡಿಕೆ ಹಾನಿಕಾರಕವಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಅಡಿಕೆ ಬೆಳೆಗಾರರ ಹಿತಕಾಯಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೊಷ್ಠಿಯಲ್ಲಿ ಸಂಘದ ಮುಖಂಡರಾದ ಹೊಳೆಮಡಿಲು ವೆಂಕಟೇಶ್, ಡಿ.ಸಿ.ನಿರಂಜನ, ಸುರೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.