ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿಯ ತೋಟದಲ್ಲಿ ಕೊಳೆ ರೋಗದಿಂದ ಉದುರಿದ ಅಡಿಕೆ ಕಾಯಿ
ಶಿವಮೊಗ್ಗ: ನಿರಂತರ ಮಳೆ, ಮೋಡ ಮುಚ್ಚಿದ ವಾತಾವರಣದಿಂದ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆ ರೋಗ ವ್ಯಾಪಕಗೊಳ್ಳುತ್ತಿದೆ. ಮಲೆನಾಡಿನ ಸಾಗರ, ತೀರ್ಥಹಳ್ಳಿ ಹಾಗೂ ಹೊಸನಗರ ತಾಲ್ಲೂಕುಗಳಿಗೆ ಸೀಮಿತವಾಗಿದ್ದ ರೋಗ ಈಗ ಅರೆ ಮಲೆನಾಡು ಶಿವಮೊಗ್ಗ, ಸೊರಬ, ಶಿಕಾರಿಪುರ, ಭದ್ರಾವತಿ ತಾಲ್ಲೂಕುಗಳಿಗೂ ವ್ಯಾಪಿಸುತ್ತಿದೆ. ಇದು ಅಡಿಕೆ ಬೆಳೆಗಾರರನ್ನು ಕಂಗೆಡಿಸಿದೆ.
ಹೆಚ್ಚು ಮಳೆ, ಮೋಡಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆಯಿಂದ ಹೆಚ್ಚಾದ ಮಣ್ಣಿನ ತೇವಾಂಶ, ಅಧಿಕ ಆರ್ದ್ರತೆ (ಶೇ 70ಕ್ಕಿಂತ ಹೆಚ್ಚು) ಮತ್ತು ಸೂರ್ಯನ ಬೆಳಕಿನ ಕೊರತೆಯು ಕೊಳೆ ರೋಗ ಬಾಧಿಸಲು ಕಾರಣವಾಗುತ್ತದೆ. ರೋಗ ತೀವ್ರಗೊಳ್ಳುತ್ತಿದ್ದಂತೆಯೇ ಅಡಿಕೆ ಕೊನೆ ಹಾಗೂ ಕಾಯಿ ಕೊಳೆತು ಉದುರಲು ಆರಂಭಿಸುತ್ತವೆ.
ಈ ಬಾರಿ ಮುಂಗಾರು ಪೂರ್ವ ಮಳೆ ಹೆಚ್ಚು ಸುರಿದಿದೆ. ಮೇ ತಿಂಗಳಿನಿಂದ ಮಳೆ ಶುರುವಾಗಿದ್ದು, ಈಗಲೂ ಮುಂದುವರಿದಿದೆ. ಮಳೆ–ಮೋಡದ ಜುಗಲ್‌ಬಂದಿಯ ಕಾರಣ ರೋಗ ವ್ಯಾಪಿಸುವ ಪ್ರಮಾಣವೂ ಹೆಚ್ಚಳಗೊಂಡಿದೆ. ರೋಗ ಬಾಧೆಯ ಪ್ರಮಾಣವೂ ಮುಂದುವರಿದಿದೆ. ಮಲೆನಾಡು ಭಾಗದಲ್ಲಿ ಪರಿಸ್ಥಿತಿ ಗಂಭೀರವಾಗಿದೆ.
ತೋಟಗಾರಿಕೆ ಇಲಾಖೆ ಸಮೀಕ್ಷೆಯಂತೆ ಈ ಹಂಗಾಮಿನಲ್ಲಿ ಆ. 15ರವರೆಗೆ ಜಿಲ್ಲೆಯಲ್ಲಿ 18,545 ಹೆಕ್ಟೇರ್ ಅಡಿಕೆ ಬೆಳೆಗೆ ಕೊಳೆರೋಗ ಬಾಧಿಸಿದೆ. ತೀರ್ಥಹಳ್ಳಿ ಹೊರತುಪಡಿಸಿದರೆ ಅರೆಮಲೆನಾಡು ಪ್ರದೇಶ ಸೊರಬ ತಾಲ್ಲೂಕಿನಲ್ಲಿ ಅತಿಹೆಚ್ಚು ಕಾಣಿಸಿಕೊಂಡಿದೆ. ಸಾಗರಕ್ಕಿಂತ ಶಿಕಾರಿಪುರ ತಾಲ್ಲೂಕಿನಲ್ಲಿ ಹೆಚ್ಚು ಬಾಧಿಸಿದೆ.
ಅರೆಮಲೆನಾಡಿನ ನಾಲ್ಕು ತಾಲ್ಲೂಕುಗಳಲ್ಲಿ ಆಗಸ್ಟ್ ಕೊನೆ ಇಲ್ಲವೇ ಸೆಪ್ಟೆಂಬರ್ ಮೊದಲ ವಾರದಲ್ಲಿ ಅಡಿಕೆ ಕೊಯ್ಲು ಶುರುವಾಗುತ್ತದೆ. ಹೀಗಾಗಿ ರೋಗ ಬಾಧೆಯಿಂದ ಭಾರೀ ಪ್ರಮಾಣದಲ್ಲಿ ಹಾನಿ ಆಗುವುದಿಲ್ಲ. ಆದರೆ, ಮಲೆನಾಡಿನ ಮೂರು ತಾಲ್ಲೂಕುಗಳಲ್ಲಿ ಅಕ್ಟೋಬರ್ ಕೊನೆಯ ವಾರ ಇಲ್ಲವೇ ನವೆಂಬರ್‌ನಲ್ಲಿ ಕೊಯ್ಲು ಆಗುತ್ತದೆ. ಹೀಗಾಗಿ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆ ಬಾಧಿತವಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಮೂಲಗಳು ಹೇಳುತ್ತವೆ.
ಪರಿಹಾರ ಮೊತ್ತ ಹೆಚ್ಚಳಗೊಳಿಸಿ:
‘ಅಡಿಕೆಗೆ ರೋಗ ಬಾಧೆ ದಿನೇ ದಿನೆ ವ್ಯಾಪಿಸುತ್ತಿದೆ. ಹೀಗಾಗಿ ತೋಟಗಾರಿಕೆ ಇಲಾಖೆ ಸಮೀಕ್ಷೆ ಮುಂದುವರಿಸಬೇಕು. ಹಿಂದಿನ ಅವಧಿಯಲ್ಲಿ ಆಗುಂಬೆಯ ಕೊಳೆರೋಗ ಪೀಡಿತ ತೋಟಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತೀ ಹೆಕ್ಟೇರ್‌ಗೆ ₹18,000 ಪರಿಹಾರ ನಿಗದಿಪಡಿಸಿ ಹಣ ಬಿಡುಗಡೆ ಮಾಡಿದ್ದರು. ಈಗಲೂ ಅದೇ ಮಾದರಿಯಲ್ಲಿ ಕೊಳೆ ರೋಗ ಬಾಧಿತ ತೋಟಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರ ನಿಗದಿಪಡಿಸಬೇಕು’ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ ಹೆಗ್ಡೆ ಒತ್ತಾಯಿಸುತ್ತಾರೆ.
ಕೊಳೆ ರೋಗ ಬಾಧೆಗೆ ಹೆಕ್ಟೇರ್‌ಗೆ ₹5 ಸಾವಿರ ಮೊತ್ತದ ಔಷಧಿ ಸಿಂಪಡಣೆ ಮಾಡಿದಲ್ಲಿ ಅದರ ಶೇ 30ರಷ್ಟು ಮೊತ್ತ ₹1500 ಅನ್ನು ಸಬ್ಸಿಡಿ ರೂಪದಲ್ಲಿ ಬೆಳೆಗಾರರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತೇವೆ. ಇದಕ್ಕಾಗಿ ಔಷಧಿ ಖರೀದಿಯ ರಸೀದಿ ಕೊಡಬೇಕುಜಿ.ಸವಿತಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ
ಕೊಳೆ ರೋಗಕ್ಕೆ ಔಷಧಿ ಪಥ್ಯ ಹೀಗಿರಲಿ..:
ಕೊಳೆರೋಗ ನಿಯಂತ್ರಣಕ್ಕೆ ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಕೊಳೆ ರೋಗ ಬಾಧಿತ ಕಾಯಿಗಳ ಆರಿಸಿ ಹೊರಗೆ ಹಾಕಬೇಕು. ಗಾಳಿ ಆಡುವಂತೆ ತೋಟದ ಅಂಚಿನ ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು. ಶೇ 1ರ ಬೋರ್ಡೋ ದ್ರಾವಣ ಅಥವಾ ಶೇ.0.2 ರ ಮೆಟಲಾಕ್ಸಿಲ್ ಎಂ.ಜಡ್ (2 ಗ್ರಾಂ 1 ಪ್ರತಿ ಲೀ. ನೀರಿನಲ್ಲಿ ಕರಗಿಸಿ) ಅಥವಾ ಶೇ.0.2 ರ ಮೆಟಲಾಕ್ಸಿಲ್ + ಮ್ಯಾಂಕೋಜೆಬ್ (2 ಗ್ರಾಂ 1 ಪ್ರತಿ ಲೀ. ನೀರಿನಲ್ಲಿ ಕರಗಿಸಿ) ಅಥವಾ ಶೇ. 0.1 ರ ಮ್ಯಾಂಡಿಪ್ರೇಪಮಿಡ್ (1 ಮಿ.ಲಿ ಪ್ರತಿ ಲೀ. ನೀರಿನಲ್ಲಿ) ಅಥವಾ ಶೇ. 0.3 ರ ತಾಮ್ರದ ಆಕ್ಸಿಕ್ಲೋರೈಡ್ (3 ಗ್ರಾಂ 1 ಪ್ರತಿ ಲೀ. ನೀರಿನಲ್ಲಿ ಕರಗಿಸಿ) ಗೊನೆಗಳಿಗೆ ಹಾಗೂ ಎಲೆಗಳಿಗೆ ಮತ್ತು ಸುಳಿಭಾಗಕ್ಕೆ ಚೆನ್ನಾಗಿ ನೆನೆಯುವಂತೆ ಸೂಕ್ತ ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡಬೇಕು. ಹೀಗೆ ಮಾಡುವುದರಿಂದ ಕೊಳೆ ರೋಗ ನಿಯಂತ್ರಿಸಲು ಸಾಧ್ಯ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳುತ್ತಾರೆ.
ಶಿಫಾರಸು ₹41 ಸಾವಿರ ಕೊಟ್ಟಿದ್ದು ₹1500!:
ಶಿವಮೊಗ್ಗ ಜಿಲ್ಲೆಯಲ್ಲಿ ಎಲೆಚುಕ್ಕಿ ರೋಗ ಬಾಧಿತ ಪ್ರದೇಶಕ್ಕೆ 2023ರ ಆಗಸ್ಟ್ 16ರಂದು ಕಾಸರಗೋಡಿನ ಕೇಂದ್ರೀಯ ಪ್ಲಾಂಟೇಷನ್ ಬೆಳೆಗಳ ಸಂಶೋಧನಾ ಸಂಸ್ಥೆಯ (ಸಿಪಿಸಿಆರ್‌ಐ) ವಿಜ್ಞಾನಿಗಳ ತಂಡ ಭೇಟಿ ನೀಡಿತ್ತು. ರೋಗ ಪೀಡಿತ ತೋಟಗಳನ್ನು ಪರಿಶೀಲಿಸಿದ್ದ ತಂಡ ಐದು ಬೇರೆ ಬೇರೆ ಹಂತಗಳಲ್ಲಿ ಪ್ರತೀ ಹೆಕ್ಟೇರ್‌ಗೆ ₹41 ಸಾವಿರ ಪರಿಹಾರ ನೀಡುವಂತೆ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ಗೆ ಶಿಫಾರಸು ಮಾಡಿತ್ತು. ವಿಜ್ಞಾನಿಗಳ ತಂಡ ಜಿಲ್ಲೆಯಲ್ಲಿ 11950 ಹೆಕ್ಟೇರ್ ಬಾಧಿತ ತೋಟಗಳ ಗುರುತಿಸಿ ಪರಿಹಾರಕ್ಕೆ ಸೂಚಿಸಿತ್ತು. ಅದರನ್ವಯ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ಗೆ 2023ರ ಅಕ್ಟೋಬರ್ 10ರಂದು ಮನವಿ ಸಲ್ಲಿಸಲಾಗಿತ್ತು. ಆದರೆ ವಿಜ್ಞಾನಿಗಳು ಶಿಫಾರಸು ಮಾಡಿದ್ದ ಐದು ಹಂತಗಳಲ್ಲಿ ಒಂದನ್ನು ಮಾತ್ರ ಎನ್‌ಎಚ್‌ಎಂ ಪರಿಗಣಿಸಿದ್ದು ಎರಡು ವರ್ಷಗಳ ನಂತರ ಪ್ರತೀ ಹೆಕ್ಟೇರ್‌ಗೆ ₹1500ರಂತೆ ಬೆಳೆಗಾರರಿಗೆ ಎರಡು ಹೆಕ್ಟೇರ್‌ಗೆ ಸೀಮಿತಗೊಳಿಸಿ ಜಿಲ್ಲೆಗೆ ₹1.89 ಕೋಟಿ ಪರಿಹಾರ ಮೊತ್ತ ಬಿಡುಗಡೆ ಮಾಡಿದೆ. ‘ಎನ್‌ಎಚ್‌ಎಂ ಅಡಿ ಬಿಡುಗಡೆ ಮಾಡಿರುವ ಪರಿಹಾರದ ಮೊತ್ತಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಅದು ಅಡಿಕೆ ಬೆಳೆಗಾರರನ್ನು ಅಣಕಿಸುವಂತಿದೆ. ಕರ್ನಾಟಕದ ಅಡಿಕೆ ಬೆಳೆಗಾರರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಇರುವ ದ್ವೇಷದ ಮನೋಭಾವಕ್ಕೆ ಇದು ಸಾಕ್ಷಿ’ ಎಂದು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ ಹೆಗ್ಡೆ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.