ADVERTISEMENT

ಶಿವಮೊಗ್ಗ | ಅಡಿಕೆ ಇಳುವರಿ ತೀವ್ರ ಕುಂಠಿತ: ರೈತರ ಹಣೆ ಮೇಲೆ ಆತಂಕದ ಗೆರೆ

ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆಗೆ ಒತ್ತಡ; ಕೋತಿಗಳ ಕಾರುಬಾರು

ನಿರಂಜನ ವಿ.
Published 20 ನವೆಂಬರ್ 2025, 2:38 IST
Last Updated 20 ನವೆಂಬರ್ 2025, 2:38 IST
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈ ವರ್ಷ ಕಡಿಮೆ ಅಡಿಕೆ ಕಾಯಿಗಳನ್ನು ಹೊಂದಿರುವ ಕೊನೆಗಳು.
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈ ವರ್ಷ ಕಡಿಮೆ ಅಡಿಕೆ ಕಾಯಿಗಳನ್ನು ಹೊಂದಿರುವ ಕೊನೆಗಳು.   

ತೀರ್ಥಹಳ್ಳಿ: ರೋಗಗಳಿಂದ ರಕ್ಷಿಸಿ ಜತನದಿಂದ ಕಾಪಾಡಿಕೊಂಡಿದ್ದ ಅಡಿಕೆ ಬೆಳೆ ಕೈಸೇರುವ ಮುನ್ನವೇ ಬೆಳೆಗಾರರು ಕಂಗಾಲಾಗಿದ್ದಾರೆ. ಅಡಿಕೆ ಇಳುವರಿಯಲ್ಲಿ ತೀವ್ರ ಇಳಿಮುಖವಾಗಿದ್ದು, ಔಷಧೋಪಚಾರದ ಖರ್ಚು ಕೂಡ ಮರಳಿ ದೊರೆಯದ ದುಃಸ್ಥಿತಿ ನಿರ್ಮಾಣವಾಗಿದೆ.

ಮೇ ತಿಂಗಳಿನಿಂದ ಆರಂಭಗೊಂಡ ಮಳೆ ಅಕ್ಟೋಬರ್‌ ಅಂತ್ಯದವರೆಗೂ ಸುರಿದ ಪರಿಣಾಮ ಅಡಿಕೆ ತೋಟಗಳಲ್ಲಿ ವಿಪರೀತ ಪ್ರಮಾಣದ ರೋಗಗಳು ಕಾಣಿಸಿಕೊಂಡಿದ್ದವು. ಎಲೆಚುಕ್ಕಿ, ಕೊಳೆ, ಹಳದಿ, ಬೇರುಹುಳು ರೋಗಗಳಿಂದ ತಪ್ಪಿಸಲು ಅನೇಕ ರೈತರು 5ರಿಂದ 6 ಬಾರಿ ಬೋರ್ಡೋ ದ್ರಾವಣ ಸಿಂಪಡಿಸಿದ್ದಾರೆ. ಆದರೂ ಬೆಳೆ ಉಳಿಸಿಕೊಳ್ಳುವುದರಲ್ಲಿ ಹಿನ್ನಡೆಯಾಗಿದೆ. ಸಣ್ಣ ಬೆಳಗಾರರ ಗೋಳಂತೂ ಹೇಳತೀರದಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಮಳೆ ವರದಿಯಂತೆ ಪ್ರಸಕ್ತ ವರ್ಷ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಒಟ್ಟಾರೆ 3,217 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ 14ರಷ್ಟು ಜಾಸ್ತಿಯಾಗಿದೆ. ಆಗುಂಬೆ ಹೋಬಳಿಯಲ್ಲಿ ಶೇ 14ರಷ್ಟು ಕಡಿಮೆ ಇದೆ. ಆದರೂ ಆಗುಂಬೆ ಹೋಬಳಿಯಲ್ಲಿಯೇ ಅಧಿಕ ಬೆಳೆಹಾನಿ ಸಂಭವಿಸಿದೆ.

ADVERTISEMENT

ಆಗುಂಬೆ, ಮುತ್ತೂರು, ಕಸಬಾ, ಹೊಸನಗರ ತಾಲ್ಲೂಕಿನ ನಗರ ಹೋಬಳಿಯಲ್ಲಿ ಅಡಿಕೆ ಫಸಲು ಸಂಪೂರ್ಣ ಹಾಳಾಗಿದೆ. ಎಕರೆಗೆ 10ರಿಂದ 15 ಕ್ವಿಂಟಲ್‌ ಒಣ ಅಡಿಕೆ ಪಡೆಯುತ್ತಿದ್ದ ತೋಟಗಳಲ್ಲಿ ಇದೀಗ ಕೇವಲ 3 ಕ್ವಿಂಟಲ್‌ ಅಡಿಕೆ ಮಾತ್ರ ಸಿಗುವಂತಾಗಿದೆ. ಬೆಳೆ, ತೋಟ ನಂಬಿ ಸಾಲ ಪಡೆದಿದ್ದ ರೈತರು ಸಾಲ ತೀರಿಸುವ ಮಾರ್ಗಗಳಿಲ್ಲದೆ ಹತಾಶರಾಗಿದ್ದಾರೆ.

ಅತಿ ಹೆಚ್ಚು ನೀರು ಬಳಕೆ, ಪ್ರಾಕೃತಿಕ ಅಸಮತೋಲನ, ಅಕಾಲಿಕ ಮಳೆ, ಬಿಸಿಲು, ಚಳಿಯ ವಾತಾವರಣವು ರೋಗ ಉಲ್ಬಣಕ್ಕೆ ಕಾರಣ. ಬೇಸಾಯ ಕ್ರಮ ಬದಲಾವಣೆ, ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಏರುಪೇರು ಮುಂತಾದ ಕಾರಣದಿಂದ ನಿರೀಕ್ಷಿತ ಪ್ರತಿಫಲ ದೊರೆಯುತ್ತಿಲ್ಲ ಎಂಬ ಬಿರುಸಿನ ಚರ್ಚೆ ರೈತ ವಲಯದಲ್ಲಿ ಕೇಳಿಬರುತ್ತಿದೆ.

ಅಡಿಕೆ ದೋಟಿ ಲಭ್ಯವಾದ ಕಾರಣ ಔಷಧ ಸಿಂಪರಣೆ, ಕೊನೆ ತೆಗೆಯುವುದು ಈಚೆಗೆ ಸುಲಭವಾಗಿದೆ. ಆದರೂ ರೋಗ ನಿರ್ವಹಣೆಯ ಉಪಕ್ರಮಗಳ ವೆಚ್ಚ ಹೆಚ್ಚುತ್ತಿದೆ. ಬೋರ್ಡೋ ಮಿಶ್ರಣ ಔಷಧಕ್ಕೆ ಮೈಲು ತುತ್ತ, ರಾಳ (ಅಂಟು), ಸುಣ್ಣ ಬಳಸಲಾಗುತ್ತದೆ. ಎಕರೆ ಅಡಕೆ ತೋಟದ ಔಷಧ ಸಿಂಪರಣೆಗೆ ಕುಶಲ ಕಾರ್ಮಿಕರ ವೇತನ, ಔಷಧ ಸಾಮಗ್ರಿ ಬಾಬ್ತಿಗೆ ಕನಿಷ್ಠ ₹ 20,000 ವೆಚ್ಚ ತಗಲುತ್ತಿದೆ. ಇದರಿಂದ ಎಕರೆ ತೋಟಕ್ಕೆ ₹ 1 ಲಕ್ಷ ಖರ್ಚಾಗುತ್ತಿದೆ.

ಕೃಷಿ ಕಾರ್ಮಿಕರಿಗಿಲ್ಲ ಕೆಲಸ

‘ಮಲೆನಾಡು ಭಾಗದಲ್ಲಿ ಅಡಿಕೆ ಆರ್ಥಿಕ ಚೈತನ್ಯದ ಕೇಂದ್ರ ಬೆಳೆ. ಧಾರಣೆ ಹೆಚ್ಚಿದರೆ ರೈತರು ಸೇರಿ ಕೃಷಿ ಕಾರ್ಮಿಕರಿಗೆ ಲಾಭದಾಯಕ. ರೈತರು ರೋಗಗಳಿಂದ ಕಂಗೆಟ್ಟರೆ ಕಾರ್ಮಿಕರು ಕೆಲಸವಿಲ್ಲದೆ ಪರದಾಡುವಂತಾಗಿದೆ. ಎಲ್ಲ ವಹಿವಾಟಿನ ಆಧಾರ ಈ ಬೆಳೆಯಾದ್ದರಿಂದ ಮಲೆನಾಡು ಭಾಗದ ವಹಿವಾಟು ಮೊಟಕುಗೊಳ್ಳಲಿದೆ. ಇದರಿಂದ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸುವ ಜೊತೆಗೆ ರೋಗಗಳ ನಿವಾರಣೆಗೆ ಅಗತ್ಯ ಸಂಶೋಧನೆ ನಡೆಸಬೇಕು’ ಎಂದು ಯುವ ರೈತ ನಾಗರಾಜ್‌ ಸೌಳಿ ಒತ್ತಾಯಿಸುತ್ತಾರೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈ ವರ್ಷ ಕಡಿಮೆ ಅಡಿಕೆ ಕಾಯಿಗಳನ್ನು ಹೊಂದಿರುವ ಕೊನೆಗಳು.
ಸರ್ಕಾರ ಮಧ್ಯಸ್ಥಿಕೆ ವಹಿಸದಿದ್ದರೆ ಅಡಿಕೆ ಬೆಳೆಗಾರರು ಆತ್ಮಹತ್ಯೆಗೆ ಮುಂದಾಗುತ್ತಾರೆ. ಬೆಳೆ ಕೈಕೊಟ್ಟಿರುವುದರಿಂದ ಸಾಲ ತೀರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.
– ರಕ್ಷಿತ್‌ ಮೇಗರವಳ್ಳಿ, ಕೃಷಿಕ
ನಿರಂತರ ಮಳೆಯಿಂದ ಅಡಿಕೆ ಬೆಳೆಗೆ ಹಾನಿಯಾಗಿದೆ. ಶೇ 75ರಷ್ಟು ಬೆಳೆನಷ್ಟ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
– ಸೋಮಶೇಖರ್‌ ಕೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ತೀರ್ಥಹಳ್ಳಿ

ಕೋತಿಗಳಿಗೆ ಚೆಲ್ಲಾಟ; ರೈತರಿಗೆ ಸಂಕಟ

ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಮಂಗಗಳನ್ನು ಅಟ್ಟಲಾಗುತ್ತಿದೆ. ಅವು ನಗರದ ಭಾಗಗಳಲ್ಲಿ ಮಾಡುತ್ತಿದ್ದ ಚೇಷ್ಟೆಗಳನ್ನು ಹಳ್ಳಿಗಳಲ್ಲಿಯೂ ಮುಂದುವರಿಸುತ್ತಿದ್ದು ಮನೆಗಳಿಗೂ ನುಗ್ಗುತ್ತಿವೆ. ಅಡಿಕೆ ತೋಟಗಳಿಗೆ ದಾಳಿ ಮಾಡುತ್ತಿರುವ ಮಂಗಗಳು ಅಡಿಕೆಯ ಎಳೆಯ ಕಾಯಿಗಳನ್ನು ಕಿತ್ತು ಹೀರುತ್ತಿವೆ. ಕೋತಿಗಳು ಪರಸ್ಪರ ಹೊಡೆದಾಟಕ್ಕೂ ಅಡಿಕೆ ಕಾಯಿ ಬಳಸುತ್ತಿವೆ. ಇದರ ಜೊತೆಗೆ ಕೆಂದಳಿಲು ಹಂದಿ ಕಾಡುಕೋಣ ಕಾಡಾನೆ ನವಿಲುಗಳ ಹಾವಳಿಯೂ ಬೆಳೆಗಳನ್ನು ಹಾಳು ಮಾಡುತ್ತಿವೆ ಎಂದು ರೈತ ನಿತಿನ್‌ ಹೆಗ್ಡೆ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.