
ಶಿವಮೊಗ್ಗ: ಬಜೆಟ್‌ನಲ್ಲಿ ಘೋಷಿಸಿರುವಂತೆ ಆಶಾ ಕಾರ್ಯಕರ್ತೆರಿಗೆ ಪ್ರೋತ್ಸಾಹ ಧನ ಸೇರಿಸಿ ಕನಿಷ್ಠ ₹10,000 ಮಾಸಿಕ ಗೌರವಧನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯಿಂದ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆಯಂತೆ 2019ರ ಏಪ್ರಿಲ್‌ನಿಂದ ಅನ್ವಯವಾಗುವಂತೆ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಸೇರಿಸಿ ಕನಿಷ್ಟ ₹10,000 ಗೌರವಧನ ನೀಡಬೇಕು. ಜೊತೆಗೆ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಬೇಕು. ಒಂದು ವೇಳೆ ಯಾರಿಗಾದರೂ ಕಡಿಮೆ ಮೊತ್ತದ ಪ್ರೋತ್ಸಾಹ ಧನ ಬಂದಲ್ಲಿ ಅಂತಹ ಆಶಾ ಕಾರ್ಯಕರ್ತೆಯರಿಗೆ ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ ₹10,000 ಗ್ಯಾರಂಟಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯದ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತರಿಗೆ ಈ ಬಾರಿಯ ಬಜೆಟ್‌ನಲ್ಲಿ ₹1 ಸಾವಿರ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆರಿಗೂ ಹೆಚ್ಚಿಸಬೇಕು. ಆರೋಗ್ಯ ಸಚಿವರ ಸಮ್ಮುಖದಲ್ಲಿ ಸಭೆ ಮಾಡಿ ಆಶಾ ಕಾರ್ಯಕರ್ತೆಯರ ಬಹುದಿನದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಇಲಾಖೆ ಆಶಾ ಕಾರ್ಯಕ್ರಮದಲ್ಲಿ ಒಂದಾದ ಮೇಲೆ ಒಂದರಂತೆ ಬದಲಾವಣೆ ಮಾಡುತ್ತಿರುವುದು ಸರಿಯಲ್ಲ. 20 ಆಶಾ ಗಳಿಗೆ ಒಬ್ಬರಂತೆ ಆಶಾ ಸುಗಮಕಾರರನ್ನು ನೇಮಿಸಿಕೊಂಡು ಕಳೆದ 12 ವರ್ಷಗಳಿಂದ ಕೇವಲ ₹6000 ನೀಡಿ ಕೆಲಸ ತೆಗೆದುಕೊಂಡಿದ್ದಾರೆ. ಈಗ ಏಕಏಕಿ ಆಶಾ ಸುಗಮಗಾರರ ಕೆಲಸ ಕೊನೆಗೊಳಿಸಿ ಆದೇಶ ಹೊರಡಿಸಿರುವುದು ಸರಿಯಲ್ಲ. ಅವರಿಗೆ ಗೌರವಧನ ನೀಡಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಳಗೊಳಿಸಿ ಬೇರೆ ಬೇರೆ ರಾಜ್ಯಗಳಲ್ಲಿರುವಂತೆ ನಿವೃತ್ತಿಯ ಸೌಕರ್ಯಗಳ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ಚಂದ್ರಕಲಾ ಪ್ರಮುಖರಾದ ಆಶಾ. ಸುಮಾ, ಸುಮಿತ್ರ, ಗಾಯತ್ರಿ, ರೇಣುಕಾ, ಲತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.