ADVERTISEMENT

ಶಿವಮೊಗ್ಗ: ಸಂತೋಷ್ ಪಾಟೀಲ ಕುಟುಂಬಕ್ಕೆ ನೆರವು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 6:33 IST
Last Updated 17 ಏಪ್ರಿಲ್ 2022, 6:33 IST

ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ ಕುಟುಂಬಕ್ಕೆ ಶಿವಮೊಗ್ಗ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ನೆರವು ನೀಡಲಾಗುವುದು ಎಂದು ಸಮಾಜದ ಮುಖಂಡ ಎಸ್.ಪಿ. ದಿನೇಶ್ ತಿಳಿಸಿದರು.

ಏ.23ರಂದು ಮೃತ ಸಂತೋಷ್ ಪಾಟೀಲ ಅವರ ಕುಟುಂಬಕ್ಕೆ ಸಮಾಜದಿಂದ ಸಂಗ್ರಹಿಸಲಾದ ಹಣವನ್ನು ನೀಡಲಾಗುವುದು. ಪಕ್ಷಾತೀತವಾಗಿ ದೇಣಿಗೆ ನೀಡುವಂತೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಸರ್ಕಾರ ತಕ್ಷಣವೇ ಸಂತೋಷ್ ಅವರ ಬಾಕಿ ಬಿಲ್ ಮೊತ್ತವಾದ ₹ 4.24 ಕೋಟಿ ಹಣವನ್ನು ಬಿಡುಗಡೆ ಮಾಡಬೇಕು. ಅವರು ತಮ್ಮ ಮನೆಯ ಒಡವೆ, ಇತರೆ ಆಸ್ತಿಯನ್ನು ಅಡವಿಟ್ಟು ದುಡ್ಡು ಖರ್ಚು ಮಾಡಿದ್ದಾರೆ. ಅವರ ಕುಟುಂಬಕ್ಕೆ ನೆರವು ನೀಡಬೇಕು. ವೀರಶೈವ ಮುಖಂಡರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆರವು ನೀಡಲು ಮತ್ತು ದೇಣಿಗೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಮುಖಂಡ ಎಚ್.ಎಲ್‌. ಷಡಾಕ್ಷರಿ ಮಾತನಾಡಿ, ‘ದೇವರ ಹೆಸರು ಹೇಳಿಕೊಂಡು ಪಲಾಯನ ಮಾಡಲು ಸಾಧ್ಯವೇ ಇಲ್ಲ. ಈಶ್ವರಪ್ಪ ಅವರು ಈಗ ತಮಗೇನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಕೆಲವು ಬಿಜೆಪಿ ನಾಯಕರು ಟೆಂಡರ್ ಇಲ್ಲದೇ ಕಾಮಗಾರಿ ಮಾಡಿದ್ದು ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಅರ್ಥವಾಗಬೇಕು. ಪ್ರಧಾನಿ ಮೋದಿ ಅವರು ಹೊಳೆಹೊನ್ನೂರಿಗೆ ಬರುತ್ತಾರೆ ಎಂಬ ಕಾರಣಕ್ಕೆ ಮೊನ್ನೆ ಲಕ್ಷಾಂತರ ರೂಪಾಯಿ ಕಾಮಗಾರಿಯನ್ನು ಮಾಡಿಸಲಾಯಿತು. ಇದಕ್ಕೆ ಟೆಂಡರ್ ಕರೆದಿದ್ದಾರೆಯೇ? ಶಿವಮೊಗ್ಗದಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳನ್ನೂ ಟೆಂಡರ್ ಕರೆದೇ ಮಾಡುತ್ತಿದ್ದಾರೆಯೇ’ ಎಂದು ಪಶ್ನಿಸಿದರು.

ಎಚ್.ಸಿ.ಯೋಗೀಶ್ ಮಾತನಾಡಿ, ‘ನೊಂದ ಜೀವಕ್ಕೆ ಸಹಾಯ ಮಾಡುವುದು ನಮ್ಮ ಸಮಾಜದ ಕರ್ತವ್ಯ ಎಂದು ಭಾವಿಸಿದ್ದೇವೆ. ಇಲ್ಲಿ ಯಾವ ಪಕ್ಷವೂ ಇಲ್ಲ. ರಾಜಕೀಯವೂ ಇಲ್ಲ. ಒಟ್ಟಾರೆ ವೀರಶೈವ ಲಿಂಗಾಯತ ಸಮಾಜದವರು ಮತ್ತು ಇತರೆ ಸಮಾಜದವರು ಕೂಡ ಕುಟುಂಬಕ್ಕೆ ನೆರವು ನೀಡಬೇಕು. ಪ್ರಮುಖ ದೇವಸ್ಥಾನಗಳಲ್ಲಿ ಸಹಾಯ ನೀಡಲು ಅನುಕೂಲವಾಗುವಂತೆ ಪ್ರತ್ಯೇಕ ಹುಂಡಿಯನ್ನು ಇಡಲಾಗುವುದು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಚ್.ಪಿ. ಗಿರೀಶ್, ಸುಧೀರ್, ಪಿ.ವೀರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.