ADVERTISEMENT

ಜ್ಞಾನದೀಪ ಶಾಲೆಯಲ್ಲಿ ‘ಅಟಲ್ ಟಿಂಕರಿಂಗ್ ಲ್ಯಾಬ್’’

ಟಿಂಕರಿಂಗ್ ಲ್ಯಾಬ್ ಪಡೆದ ಜಿಲ್ಲೆಯ 2ನೇ ಶಾಲೆ ಎಂಬ ಹಿರಿಮೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 6:30 IST
Last Updated 31 ಜನವರಿ 2019, 6:30 IST
ಶಿವಮೊಗ್ಗ ಹೊರವಲಯದ ಜಾವಳ್ಳಿ ಜ್ಞಾನದೀಪ ಶಾಲೆಯಲ್ಲಿ ಕೇಂದ್ರ ಸರ್ಕಾರದಿಂದ ಸ್ಥಾಪಿಸಿರುವ ‘ಅಟಲ್ ಟಿಂಕರಿಂಗ್ ಲ್ಯಾಬ್‌’ನ್ನು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಬಿ.ಎನ್.ಸುರೇಶ್ ಉದ್ಘಾಟಿಸಿ, ವಿದ್ಯಾರ್ಥಿಗಳ ಆವಿಷ್ಕಾರಗಳನ್ನು ವೀಕ್ಷಿಸಿದರು.
ಶಿವಮೊಗ್ಗ ಹೊರವಲಯದ ಜಾವಳ್ಳಿ ಜ್ಞಾನದೀಪ ಶಾಲೆಯಲ್ಲಿ ಕೇಂದ್ರ ಸರ್ಕಾರದಿಂದ ಸ್ಥಾಪಿಸಿರುವ ‘ಅಟಲ್ ಟಿಂಕರಿಂಗ್ ಲ್ಯಾಬ್‌’ನ್ನು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಬಿ.ಎನ್.ಸುರೇಶ್ ಉದ್ಘಾಟಿಸಿ, ವಿದ್ಯಾರ್ಥಿಗಳ ಆವಿಷ್ಕಾರಗಳನ್ನು ವೀಕ್ಷಿಸಿದರು.   

ಶಿವಮೊಗ್ಗ: ‘ಅಟಲ್ ಟಿಂಕರಿಂಗ್ ಲ್ಯಾಬ್’ ಹೊಂದಿದ ಶಾಲೆಗಳ ಸಾಲಿಗೆ ಇದೀಗ ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್‌ ಸೇರ್ಪಡೆಗೊಂಡಿದೆ. ಈ ಮೂಲಕ ಲ್ಯಾಬ್ ಹೊಂದಿದ ಜಿಲ್ಲೆಯ ಎರಡನೇ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದೆ.

ಕೇಂದ್ರ ಸರ್ಕಾರವು ನೀತಿ ಆಯೋಗದ ಅಟಲ್ ಇನೋವೇಷನ್ ಮಿಷನ್ ಅಡಿಯಲ್ಲಿ ರಾಜ್ಯದಲ್ಲಿ ಕೇವಲ 300 ಶಾಲೆಗಳಿಗೆ ಮಾತ್ರವೇ‘ಅಟಲ್ ಟಿಂಕರಿಂಗ್ ಲ್ಯಾಬ್’ ಅವಕಾಶ ನೀಡಿದ್ದು, ಅದರಲ್ಲಿ ಜ್ಞಾನದೀಪ ಶಾಲೆಯೂ ಒಂದಾಗಿದೆ. 2016ರಲ್ಲಿ ಸಾಗರದ ಹೊಂಗಿರಣ ಶಾಲೆಗೆ ಈ ಅವಕಾಶ ಸಿಕ್ಕಿತ್ತು.

ಲ್ಯಾಬ್‌ನ ಉದ್ದೇಶ:
ಮಕ್ಕಳಲ್ಲಿ ಸಂಶೋಧನೆಯ ದೃಷ್ಟಿಕೋನ, ವೈಜ್ಞಾನಿಕ ಚಿಂತನೆ, ವೈಜ್ಞಾನಿಕ ಮನೋಭಾವ, ಕಲ್ಪನಾಶಕ್ತಿ, ಕ್ರಿಯಾಶೀಲತೆ ಹಾಗೂ ಹೊಸತನ್ನು ಆವಿಷ್ಕರಿಸುವ ಮನೋಭಾವವನ್ನು ಉತ್ತೇಜಿಸಲು ಹಾಗೂ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರವು ದೇಶದ ಆಯ್ದ ಕೆಲವು ಶಾಲೆಗಳಲ್ಲಿ ಈ ಲ್ಯಾಬ್‌ ಆರಂಭಿಸುತ್ತಿದೆ. ಇಲ್ಲಿಮಕ್ಕಳ ಸಂಶೋಧನೆಗೆ ಅಗತ್ಯವಿರುವ ಉಪಕರಣಗಳನ್ನು ಒದಗಿಸಿ ಮಕ್ಕಳಿಂದಲೇ ಹಲವು ವಿಜ್ಞಾನದ ಮಾದರಿಗಳನ್ನು ಮಾಡಿಸಿ ಉನ್ನತ ಸಂಶೋಧನೆಗಳಿಗೆ ತರಬೇತಿ ನೀಡುವ ಉದ್ದೇಶವನ್ನು ಈ ಲ್ಯಾಬ್ ಹೊಂದಿದೆ.

ADVERTISEMENT

ಕೇಂದ್ರದ ನೆರವು:
5 ವರ್ಷಗಳ ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ₹20 ಲಕ್ಷ ಅನುದಾನ ದೊರೆಯುತ್ತದೆ. ಈ ಹಣವನ್ನು 5 ವರ್ಷಗಳವರೆಗೆ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ. ಈ ಹಣಕ್ಕೆ ಜ್ಞಾನದೀಪ ಶಾಲೆಯ ಆಡಳಿತ ಮಂಡಳಿಯು ₹5 ಲಕ್ಷ ನೀಡಿ ಲ್ಯಾಬ್‌ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಚಿಂತಿಸಿದೆ.

ಕಾರ್ಯ ನಿರ್ವಹಣೆ ಹೇಗೆ:
6 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಈ ಲ್ಯಾಬ್‌ನ ಸದ್ಬಳಕೆ ಮಾಡಬಹುದು. ನಿಗದಿತ ಅವಧಿಯಲ್ಲಿ ಲ್ಯಾಬ್‌ಗೆ ಅವಕಾಶ ನೀಡಿ, ಅವರಿಗೆ ನಿರ್ದಿಷ್ಟ ಪ್ರಾಜೆಕ್ಟ್‌ ನೀಡಿ ಅದರ ಮೇಲೆ ಪೂರ್ಣಗೊಳಿಸುವವರೆಗೆ ನಿರಂತರವಾಗಿ ಪ್ರಯೋಗ ಮಾಡಲು ಅವಕಾಶ ನೀಡಲಾಗುತ್ತದೆ. ಆರಂಭದಲ್ಲಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ರೋಬೊಟಿಕ್ಸ್, ಮೆಕ್ಯಾನಿಕಲ್ ಮತ್ತು ಸಾಲ್ಡರಿಂಗ್‌ಗಳನ್ನು ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವ ಮೂಲ ಜ್ಞಾನವನ್ನು ಮಕ್ಕಳಿಗೆ ನೀಡಲಾಗುತ್ತದೆ. ಅವುಗಳನ್ನು ಪ್ರಾಯೋಗಿಕವಾಗಿ ಮಾಡಲು ಉತ್ತೇಜಿಸಲಾಗುತ್ತದೆ. ಬರಬರುತ್ತಾ ಅವುಗಳ ಆಧಾರದ ಮೇಲೆ ಹೊಸ–ಹೊಸ ಸಂಶೋಧನೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಮಕ್ಕಳ ಸಂಶೋಧನೆಗೆ ಮೆಚ್ಚುಗೆ:
ಅಟಲ್‌ ಟಿಂಕರಿಂಗ್ ಲ್ಯಾಬ್‌ನಲ್ಲಿ ಈಗಾಗಲೇ ಜ್ಞಾನದೀಪ ಶಾಲೆಯ ವಿದ್ಯಾರ್ಥಿಗಳು ನಡೆಸಿದ ಆವಿಷ್ಕಾರಗಳಿಗೆ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಬಿ.ಎನ್. ಸುರೇಶ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯವಾಗಿ ರೋಬೋಟ್, ಡ್ರೋಣ್, ತ್ರೀಡಿ ಪ್ರಿಟಿಂಗ್, ತ್ರೀಡಿ ಪೆನ್, ವಿ.ಆರ್. ಬಾಕ್ಸ್, ಟೆಲಿಸ್ಕೋಪ್, ಅಸಿಲೋಸ್ಕೋಪ್, ಹೋಮ್ ಆಟೋಮೇಷನ್, ಬೂಮ್ ಬರೀರ್, ಅರೆಟ್–ಡಿ ಬೈ ಇನ್ನಿತರೆ ಅತ್ಯಾಧುನಿಕ ಆವಿಷ್ಕಾರಗಳು ನೋಡುಗರ ಗಮನ ಸೆಳೆದವು.

ಉದ್ಘಾಟನೆ:
ಜ್ಞಾನದೀಪ ಶಾಲೆಯಲ್ಲಿ ಆರಂಭವಾದ ‘ಅಟಲ್ ಟಿಂಕರಿಂಗ್ ಲ್ಯಾಬ್‌’ಗೆ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಾಗೂ ತಿರುವನಂತಪುರ ಐಐಎಸ್‌ಟಿ ಕುಲಪತಿ ಡಾ.ಬಿ.ಎನ್. ಗಣೇಶ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕಲಿಕೆ, ಸಂಶೋಧನೆ, ಹೊಸದನ್ನು ಹುಡುಕಲು ಇಂತಹ ಲ್ಯಾಬ್ ಹೆಚ್ಚು ಉಪಯುಕ್ತ. ಅಲ್ಲದೇ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಾದರೆ ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳನ್ನು ಮಾಡಬೇಕು. ಈ ರೀತಿಯ ಲ್ಯಾಬ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಉಪಸ್ಥಿತಿ:
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಶ್ರೀಕಾಂತ್ ಎಂ. ಹೆಗಡೆ, ಆಡಳಿತಾಧಿಕಾರಿ ಮಧು, ಕಾರ್ಯದರ್ಶಿ ವಿ. ದೇವೇಂದ್ರ, ಸಹ ಕಾರ್ಯದರ್ಶಿ ನೀಲಕಂಠಮೂರ್ತಿ, ಉಪ ಪ್ರಾಂಶುಪಾಲರಾದ ಡಾ.ರೇಜಿ ಜೋಸೆಫ್, ಮುಖ್ಯ ಶಿಕ್ಷಕಿ ವಾಣಿ ಕೃಷ್ಣಪ್ರಸಾದ್, ಕನ್ನಡ ಉಪನ್ಯಾಸಕ ಮಲ್ಲಿಕಾರ್ಜುನ್, ಸಂಪನ್ಮೂಲ ವ್ಯಕ್ತಿ ಗುರುಮೂರ್ತಿ, ಹಳೆಯ ವಿದ್ಯಾರ್ಥಿ ಡಿ.ಸಿ. ವಿನಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.