ADVERTISEMENT

ಕುವೆಂಪು ವಿ.ವಿಯಲ್ಲಿ ಅವ್ಯವಹಾರ ಆರೋಪ; ಆತ್ಮಹತ್ಯೆಗೆ ವಿದ್ಯಾರ್ಥಿ ಯತ್ನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 15:56 IST
Last Updated 10 ಜುಲೈ 2024, 15:56 IST

ಶಿವಮೊಗ್ಗ: ಹಾಸ್ಟೆಲ್‌ನಲ್ಲಿ ಊಟೋಪಚಾರ ಗುಣಮಟ್ಟದಿಂದ ಕೂಡಿಲ್ಲ ಎಂದು ಆರೋಪಿಸಿ ಕುವೆಂಪು ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿಯೊಬ್ಬರು ಬುಧವಾರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆ ಯತ್ನಕ್ಕೆ ಕಾರಣವನ್ನು ಗೆಳೆಯರ ವಾಟ್ಸ್ ಆ್ಯಪ್ ಗ್ರೂಪ್‌ಗೆ ಹಂಚಿಕೊಂಡಿರುವ ವಿದ್ಯಾರ್ಥಿಯು ವಿಷ ಸೇವಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

‘ನಾನು ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರ ಸಂಬಂಧಿ’ ಎಂದು ಪತ್ರದಲ್ಲಿ ಹೇಳಿಕೊಂಡಿರುವ ವಿದ್ಯಾರ್ಥಿ, ‘ವಿಶ್ವವಿದ್ಯಾಲಯದಲ್ಲಿನ ಅವ್ಯವಸ್ಥೆಯಿಂದ ಬೇಸತ್ತಿದ್ದೇನೆ. ಜೊತೆಗೆ ವೈಯಕ್ತಿಕವಾಗಿಯೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

‘ವಿದ್ಯಾರ್ಥಿಯು ಆತ್ಮಹತ್ಯೆಗೆ ಪ್ರಯತ್ನಿಸಿರುವುದು ಗೊತ್ತಾಗಿತ್ತು. ವಿಶ್ವವಿದ್ಯಾಲಯದಿಂದ ಅವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಪಾಲಕರಿಗೂ ಮಾಹಿತಿ ನೀಡಲಾಗಿದೆ. ಆರೋಗ್ಯ ಸಮಸ್ಯೆಯ ಕಾರಣಕ್ಕೆ ಆತ್ಮಹತ್ಯೆಗೆ ಪ್ರಯತ್ನ ಎಂದು ಹೇಳಲಾಗಿತ್ತು. ಡೆತ್‌ನೋಟ್ ಬರೆದು ವಾಟ್ಸ್‌ಆ್ಯಪ್‌ನಲ್ಲಿ ಶೇರ್‌ ಮಾಡಿರುವ ಸಂಗತಿ ಗೊತ್ತಿರಲಿಲ್ಲ. ವಿದ್ಯಾರ್ಥಿಯ ಆತ್ಮಹತ್ಯೆ ಯತ್ನದ ವಿಷಯವನ್ನು ಕುಲಪತಿ ಅವರ ಗಮನಕ್ಕೂ ತರಲಾಗಿದೆ’ ಎಂದು ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಸತ್ಯಪ್ರಕಾಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಈ ಬಗ್ಗೆ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.