ADVERTISEMENT

ಹೊಳೆಹೊನ್ನೂರು | ಪಂಚಾಯಿತಿಗಳಲ್ಲಿ ಆಟೊ, ಬಕೆಟ್ ಮಾಯ

ಹೊಳೆಹೊನ್ನೂರು ವ್ಯಾಪ್ತಿಯ 16 ಗ್ರಾಮ ಪಂಚಾಯಿತಿಗಳಲ್ಲಿ ಕಾಣುತ್ತಿಲ್ಲ ಕಸ ವಿಲೇವಾರಿ ಆಟೊ

ಕುಮಾರ್ ಅಗಸನಹಳ್ಳಿ
Published 9 ಫೆಬ್ರುವರಿ 2025, 5:52 IST
Last Updated 9 ಫೆಬ್ರುವರಿ 2025, 5:52 IST
ಹೊಳೆಹೊನ್ನೂರು ಸಮೀಪದ ಗ್ರಾಮವೊಂದರಲ್ಲಿ ಆಟೋ ನಿಂತಿರುವುದು
ಹೊಳೆಹೊನ್ನೂರು ಸಮೀಪದ ಗ್ರಾಮವೊಂದರಲ್ಲಿ ಆಟೋ ನಿಂತಿರುವುದು   

ಹೊಳೆಹೊನ್ನೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಗೆ ವಿತರಿಸಿದ್ದ ಲಗೇಜ್ ಆಟೊಗಳು ಕಾಣದಂತಾಗಿವೆ.

ಯೋಜನೆಯಡಿ ಮೂರು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಗೊಂದು ಲಗೇಜ್ ಆಟೊ, ಪ್ರತಿ ಮನೆಗೂ ಬಕೆಟ್ ವಿತರಣೆ ಮಾಡಲಾಗಿತ್ತು. ಆದರೆ ಈಗ ಆ ಆಟೊಗಳು ಕೆಲಸಕ್ಕೆ ಬಾರದಂತಾಗಿವೆ. 

ಒಂದು ಆಟೊ ಬೆಲೆ ₹ 6.5 ಲಕ್ಷ ಎಂದು ಅಂದಾಜಿಸಲಾಗಿದೆ. ರಾಜ್ಯದ 5,963 ಗ್ರಾಮ ಪಂಚಾಯಿತಿಗಳಿಗೆ ಇವುಗಳನ್ನು ಪೂರೈಸಲು ₹387 ಕೋಟಿ ಖರ್ಚು ಮಾಡಲಾಗಿದೆ. ಪಟ್ಟಣದ 16 ಗ್ರಾಮ ಪಂಚಾಯಿತಿಗೆ ಲಗೇಜ್‌ ಆಟೊಗಾಗಿ ₹ 1.4 ಕೋಟಿ ಖರ್ಚು ಮಾಡಲಾಗಿದೆ. ಜೊತೆಗೆ ಡ್ರೈವರ್, ಡೀಸೆಲ್‌ ವೆಚ್ಚವನ್ನೂ ನೀಡಲಾಗುತ್ತಿದೆ. ಪಟ್ಟಣದ ಸುತ್ತಮುತ್ತಲಿನ 16 ಗ್ರಾಮ ಪಂಚಾಯಿತಿಗಳ ಪೇಕಿ ಒಂದರಲ್ಲೂ ಕಸ ವಿಲೇವಾರಿ ಕಾರ್ಯ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ADVERTISEMENT

ವರ್ಷದಲ್ಲೊಮ್ಮೆ ಸ್ವಚ್ಛ ಭಾರತ್ ದಿನದಂದು ಈ ಆಟೊ ಕಾರ್ಯ ನಿರ್ವಹಿಸುತ್ತದೆ. ಅಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ಕೆಲವು ಸಂಘಟನೆಗಳೊಂದಿಗೆ ಸೇರಿ ಗ್ರಾಮಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತದೆ. ನಂತರದ ದಿನಗಳಲ್ಲಿ ಅದನ್ನು ಶೆಡ್‌ವೊಂದರ ಕೆಳಗೆ ನಿಲುಗಡೆ ಮಾಡಲಾಗುತ್ತದೆ. 

ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಆಟೊಗಳನ್ನು ಕಸ ವಿಲೇವಾರಿಗೆ ಬಳಸಲಾಗುತ್ತಿದೆ. ಇನ್ನೂ ಕೆಲವು ಕಡೆ ನರೇಗಾ ಯೋಜನೆಯಡಿ ಕೆಲಸಕ್ಕೆ ಜನರನ್ನು ಕರೆದೊಯ್ಯಲಷ್ಟೇ ಇವು ಬಳಕೆಯಾಗುತ್ತಿವೆ. ಈಗ ಅದೂ ಬಂದ್ ಆಗಿದೆ.

ಕಸ ಸಂಗ್ರಹಿಸಿಡಲು ಪ್ರತಿ ಮನೆಗೂ ಬಕೆಟ್ ವಿತರಿಸಲಾಗಿತ್ತು. ಆದರೆ, ಬಕೆಟ್‌ಗಳು ಮನೆಯಲ್ಲಿ ನೀರು ತುಂಬಲು, ಬಟ್ಟೆ ತೊಳೆಯಲು, ಪಾತ್ರೆ ತೊಳೆಯಲು ಬಳಕೆ ಆಗುತ್ತಿವೆ. ಕಸ ವಿಲೇವಾರಿ ಮಾಡಿರುವುದು ತುಂಬಾ ವಿರಳ. ವಾಣಿಜ್ಯ ಮಳಿಗೆಗಳಿಗೆ ಕಸದ ತೊಟ್ಟಿ (ಡಸ್ಟ್ ಬಿನ್) ನೀಡಲಾಗಿದೆ. ಅದು ತುಂಬಿದಾಗ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಪರಿಪರಿಯಾಗಿ ಬೇಡಿ ಕಸ ವಿಲೇವಾರಿ ಮಾಡಬೇಕಾದ ಪರಿಸ್ಥಿತಿ ಇದೆ.

ಎಲ್ಲೆಂದರಲ್ಲಿ ಕಸ: ಗ್ರಾಮೀಣ ಪ್ರದೇಶದ ಸರ್ಕಾರಿ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಇದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಕಸದ ರಾಶಿ ಹಾಕಿರುವುದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. 

ವೀರೇಶ್

ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ವಿಳಂಬವಾಗುತ್ತಿದೆ. ತಕ್ಷಣವೇ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕಸ ಸಂಗ್ರಹಿಸಲು ಮಹಿಳಾ ಡ್ರೈವರ್‌ಗಳನ್ನು ನಿಯೋಜಿಸಬೇಕು. ಆದರೆ ನಮ್ಮಲ್ಲಿ ಅವರ ಕೊರತೆ ಇದೆ. ಇದರಿಂದಾಗಿ ಸ್ವಲ್ಪ ಸಮಸ್ಯೆಯಾಗಿದೆ

- ಹುತ್ತೇಶ್ ದಾಸರಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ

ನಿರ್ಲಕ್ಷ್ಯದಿಂದ ಯೋಜನೆ ನನೆಗುದಿಗೆ ಬೀಳುವಂತಾಗಿದೆ. ಕೂಡಲೆ ಎಚ್ಚೆತ್ತು ಗ್ರಾಮಗಳಲ್ಲಿ ಸ್ವಚ್ಛತೆ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಉತ್ತಮ ವಾತಾವರಣ ಕಲ್ಪಿಸಬೇಕು

-ವೀರೇಶ್ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ

ಹೊಳೆಹೊನ್ನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಸ ಸಂಗ್ರಹಿಸುತ್ತಿಲ್ಲ ಎಂಬ ವಿಚಾರ ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟವರ ಜೊತೆ ಮಾತನಾಡಿ ಮಾಹಿತಿ ಪಡೆಯುವೆ.

- ಗಂಗಣ್ಣ ಭದ್ರಾವತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ

ಕಸ ವಿಲೇವಾರಿ ಘಟಕಗಳೇ ಇಲ್ಲ ಪಟ್ಟಣದ ಸುತ್ತಲಿನ 16 ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ವಿಲೇವಾರಿಗೆ ನಿರ್ದಿಷ್ಟ ಸ್ಥಳಾವಕಾಶವಿಲ್ಲ. ಕೆಲವೆಡೆ ಕಸ ವಿಲೇವಾರಿ ಘಟಕಗಳೇ ಇಲ್ಲ. ಗ್ರಾಮ ಪಂಚಾಯಿತಿಯೇ ಜನರ ತೆರಿಗೆ ಹಣ ಹಾಗೂ ನರೇಗಾ ಯೋಜನೆಯ ಹಣ ವಿನಿಯೋಗಿಸಿ ಕಸ ವಿಲೇವಾರಿ ಘಟಕ ಸ್ಥಾಪಿಸಬೇಕಿದೆ. ಆದರೆ ಈ ಕಾರ್ಯಕ್ಕೆ ಗ್ರಾಮಾಡಳಿತ ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದುವರೆಗೂ ಗ್ರಾಮ ಪಂಚಾಯಿತಿಯಲ್ಲೂ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.