ADVERTISEMENT

ಆಟೊ ಸವಾರಿ ಪ್ರಯಾಣಿಕರಿಗೆ ಬಲು ದುಬಾರಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 4:10 IST
Last Updated 25 ಅಕ್ಟೋಬರ್ 2021, 4:10 IST
ಶಿವಮೊಗ್ಗದ ನಂಜಪ್ಪ ಆಸ್ಪತ್ರೆ ಬಳಿ ಇರುವ ಆಟೊ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಾದಿರುವ ಆಟೊಗಳು.   ಪ್ರಜಾವಾಣಿ ಚಿತ್ರ/ಶಿವಮೊಗ್ಗ ನಾಗರಾಜ್‌
ಶಿವಮೊಗ್ಗದ ನಂಜಪ್ಪ ಆಸ್ಪತ್ರೆ ಬಳಿ ಇರುವ ಆಟೊ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಾದಿರುವ ಆಟೊಗಳು.   ಪ್ರಜಾವಾಣಿ ಚಿತ್ರ/ಶಿವಮೊಗ್ಗ ನಾಗರಾಜ್‌   

ಶಿವಮೊಗ್ಗ: ಪೆಟ್ರೋಲ್‌, ಅನಿಲ ಬೆಲೆ ಏರಿಕೆ ನೆಪದಲ್ಲಿ ಜಿಲ್ಲೆಯ ಆಟೊರಿಕ್ಷಾಗಳಿಗೆ ಮೀಟರ್‌ ಅಳವಡಿಸದೆ ಪ್ರಯಾಣಿಕರಿಂದ ಮನಸೋ ಇಚ್ಛೆ ದುಬಾರಿ ಬಾಡಿಗೆ ವಸೂಲಿ ಮಾಡುತ್ತಿರುವುದು ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಆಟೊ ಹತ್ತಿ ಇಳಿದರೆ, ₹ 40ರಿಂದ 50 ಬಾಡಿಗೆ ತೆರಬೇಕು. ಇಲ್ಲಿನ ಬಹುತೇಕ ರಿಕ್ಷಾ ಚಾಲಕರು ಆಟೊ ಮೀಟರ್‌ಗಳನ್ನು ತೆಗೆದು, ಮನಬಂದಂತೆ ಬಾಡಿಗೆ ಪಡೆಯುತ್ತಿದ್ದಾರೆ ಎನ್ನುವುದು ಬಹುತೇಕ ನಾಗರಿಕರ ಆರೋಪ.

ಜಿಲ್ಲೆಯಲ್ಲಿ 5,600 ಆಟೊರಿಕ್ಷಾಗಳಿವೆ. ಆದರೆ, ಮೀಟರ್‌ನಲ್ಲಿ ನಿಗದಿಪಡಿಸಿದ ದರದಂತೆ ಬಾಡಿಗೆ ಪಡೆಯದವರೇ ಹೆಚ್ಚು. ಬಹುತೇಕ ಆಟೊಗಳು ಮೀಟರ್‌ ಅಳವಡಿಸಿಕೊಂಡಿಲ್ಲ. ಒಂದು ಆಟೊಗೂ ಇನ್ನೊಂದಕ್ಕೂ ಬಾಡಿಗೆ ದರದಲ್ಲಿ ‘ತರಕಾರಿ ಬೆಲೆ’ಯಂತೆ ವ್ಯತ್ಯಾಸ ಕಂಡುಬರುತ್ತಿದೆ. ಒಂದರಲ್ಲಿ ಕನಿಷ್ಠ ₹ 50 ಇದ್ದರೆ, ಇನ್ನೊಂದರಲ್ಲಿ ₹ 60 ಅನ್ನುತ್ತಾರೆ. ಪ್ರಯಾಣಿಕರ ಮುಖ ನೋಡಿ ಬಾಡಿಗೆ ನಿಗದಿ ಮಾಡಲಾಗುತ್ತಿದೆ.

ADVERTISEMENT

4 ಕಿ.ಮೀ. ₹ 100!: ಜಿಲ್ಲೆಯಲ್ಲಿ ಕನಿಷ್ಠ ಆಟೊ ಬಾಡಿಗೆಯೇ ₹ 40ರಿಂದ ₹ 50 ಇದೆ. ಇನ್ನು ನಗರದ ಖಾಸಗಿ ಬಸ್‌ ನಿಲ್ದಾಣದಿಂದ ವಿನೋಬನಗರಕ್ಕೆ ತೆರಳಲು ಕಡಿಮೆಯೆಂದರೂ ₹ 100 ತೆರಬೇಕು.

ಮೀಟರ್‌ ಅಳವಡಿಕೆ ಕಡ್ಡಾಯ ಎಂಬ ಸರ್ಕಾರದ ಆದೇಶ ಕೇವಲ ಕಾಗದಕ್ಕೆ ಸೀಮಿತವಾಗಿದೆ.
ಮೀಟರ್‌ ಬಡ್ಡಿ ದಂಧೆಕೋರರು, ಕೆಲವು ಸಂಘಟನೆಗಳು, ರಾಜಕೀಯ ಪ್ರಭಾವಿಗಳ ಬೆಂಬಲ ಪಡೆದು ಹತ್ತಾರು ಆಟೊಗಳನ್ನು ಖರೀದಿಸಿ ಬಾಡಿಗೆಗೆ ಬಿಟ್ಟಿದ್ದಾರೆ. ಬಡ, ನಿರುದ್ಯೋಗಿ ಹಾಗೂ ಆರ್ಧಕ್ಕೆ ಓದು ನಿಲ್ಲಿಸಿದ ಯುವಕರನ್ನು ಹುಡುಕಿ ಅವರಿಗೆ ದಿನದ ಗತ್ತಿಗೆ ಆಧಾರದ ಮೇಲೆ ಆಟೊ ನೀಡಲಾಗುತ್ತದೆ. ಈ ಯುವಕರು ರಿಕ್ಷಾ ನಿರ್ವಹಣೆಯ ಖರ್ಚು ನೋಡಿಕೊಂಡು ದಿನದ ಆದಾಯದಲ್ಲೇ ಇಂತಿಷ್ಟು ಎಂದು ಮಾಲೀಕರಿಗೆ ತಲುಪಿಸುತ್ತಾರೆ. ಒಂದು ದಿನ ತಪ್ಪಿದರೆ, ಅದಕ್ಕೆ ಬಡ್ಡಿ ಸೇರಿಸಿ ಮರು ದಿನ ಕಟ್ಟಬೇಕು. ಹೀಗೆ ಮಾಲೀಕರ ಕಪಿಮುಷ್ಟಿಯಲ್ಲಿರುವ ಚಾಲಕರು ಬೇರೆ ದಾರಿ ಕಾಣದೆ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುತ್ತಾರೆ ವಿನೋಬನಗರದ ದೇವರಾಜ್.

ಕೊರೊನಾ ಸಂಕಷ್ಟದ ಬಿಸಿ:

ಕೊರೊನಾ ಸಂಕಷ್ಟದ ನಂತರ ಬಹುತೇಕ ಆಟೊ ಚಾಲಕರ ಬದುಕು ಬೀದಿಗೆ ಬಿದ್ದಿದೆ. ಈಗ ಪೆಟ್ರೋಲ್‌, ಅನಿಲ ದರ ಹೆಚ್ಚಳ, ಸ್ಮಾರ್ಟ್‌ ಸಿಟಿ ಕಾಮಗಾರಿಯಿಂದ ಮತ್ತಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ.

ಮೊದಲಿನಿಂದಲೂ ನಗರ ಸಾರಿಗೆ, ಟ್ಯಾಕ್ಸಿ, ಕ್ಯಾಬ್‌ಗಳ ಹಾವಳಿಯಲ್ಲಿ ಬಹುತೇಕ ಆಟೊಗಳಿಗೆ ಸೂಕ್ತ ಬಾಡಿಗೆ ದೊರೆಯುತ್ತಿರಲಿಲ್ಲ. ಕೊರೊನಾ ಲಾಕ್‌ಡೌನ್ ನಂತರ ಶೇ 99ರಷ್ಟು ಚಾಲಕರ ಜೀವನ ನಿರ್ವಹಣೆಗೆ ಕಷ್ಟವಾಗಿದೆ.

ನಗರದಲ್ಲಿ ಪರವಾನಗಿ ಪಡೆದ 5,600 ಆಟೊಗಳಿವೆ. ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸುವಾಗ ಬ್ಯಾಡ್ಜ್ ಹೊಂದಿರುವ ಚಾಲಕರಿಗೆ ಅವಕಾಶ ನೀಡಲಾಗಿತ್ತು. ಇದರಿಂದ ಅರ್ಧಕ್ಕಿಂತ ಹೆಚ್ಚಿನ ಚಾಲಕರು ಅವಕಾಶ ವಂಚಿತರಾಗಿದ್ದಾರೆ. ಪ್ರಯಾಣಿಕರ ಆಟೊಗಳು ವಾಣಿಜ್ಯ ಉದ್ದೇಶ ಹೊಂದಿರುವ ಕಾರಣ ಹಳದಿ ಬೋರ್ಡ್ ಇರುತ್ತದೆ. ಹಾಗಾಗಿ, ಸಾಮಾನ್ಯ ಚಾಲನಾ ಪರವಾನಗಿ ಜೊತೆಗೆ ಭಾರಿ ವಾಹನಗಳ ಚಾಲಕರ ಬ್ಯಾಡ್ಜ್ ಹೊಂದಬೇಕು ಎನ್ನುವುದು ಸಾರಿಗೆ ಇಲಾಖೆಯ ನಿಯಮ. ಶಿವಮೊಗ್ಗ ನಗರದಲ್ಲಿ 2,300 ಚಾಲಕರು ಮಾತ್ರ ಬ್ಯಾಡ್ಜ್‌ ಹೊಂದಿದ್ದಾರೆ.

ಆಟೊಗಳ ನಿಲುಗಡೆಗೂ ಜಾಗವಿಲ್ಲ:

ನಗರದ ಬಸ್‌ನಿಲ್ದಾಣ, ರೈಲುನಿಲ್ದಾಣ, ಆಸ್ಪತ್ರೆಗಳು, ಚಿತ್ರಮಂದಿರಗಳು, ವಾಣಿಜ್ಯ ಮಳಿಗೆಗಳು, ಪ್ರಮುಖ ವೃತ್ತಗಳು, ಜನನಿಬಿಡ ಸ್ಥಳಗಳಲ್ಲಿ ಆಟೊಗಳು ನಿಲುಗಡೆ ಮಾಡುತ್ತವೆ. ಇಡೀ ನಗರದ ವ್ಯಾಪ್ತಿಯಲ್ಲಿ ಐದಾರು ಕಡೆ ಬಿಟ್ಟರೆ ಉಳಿದ ಆಟೊ ನಿಲ್ದಾಣಗಳಲ್ಲಿ ಸೂಕ್ತ ಜಾಗವೇ ಇಲ್ಲ. ಮುಖ್ಯ ಬಸ್‌ನಿಲ್ದಾಣ, ರೈಲುನಿಲ್ದಾಣಗಳ ಬಳಿಯೂ ಆಟೊಗಳು ರಸ್ತೆಯ ಬದಿಯೇ ನಿಲ್ಲುತ್ತವೆ. ಜನರು ಇಳಿಸುವಾಗಲೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಎಲ್ಲೂ ಇಲ್ಲ. ಈಗ ಸ್ಮಾರ್ಟ್‌ ಸಿಟಿ ಕಾಮಗಾರಿ ಪರಿಣಾಮ ನಿಲುಗಡೆಯೂ ಕಷ್ಟವಾಗಿದೆ.

‘ಮೊದಲು ನಿತ್ಯವೂ ₹ 500ರಿಂದ ₹ 600 ದುಡಿಮೆ ಇತ್ತು. ಅದರಲ್ಲಿ ದುಬಾರಿ ಪೆಟ್ರೋಲ್ ಮತ್ತಿತರ ಖರ್ಚು ಕಳೆದು ₹ 200ರಿಂದ ₹ 250 ಉಳಿಸುತ್ತಿದ್ದೆವು. ಈಗ ಇಡೀ ದಿನ ಸುತ್ತಿದ್ದರೂ
₹ 300 ಸಂಗ್ರಹವಾಗುವುದಿಲ್ಲ. ಖರ್ಚಿಗೂ ಸಾಲುವುದಿಲ್ಲ. ಜತೆಗೆ ತೆರಿಗೆ, ವಾಹನ ವಿಮೆ, ಹೊಗೆ ತಪಾಸಣೆ, ಪರವಾನಗಿ ನವೀಕರಣ ಮತ್ತಿತರ ಖರ್ಚು ಭರಿಸಲು ಸಾಧ್ಯವಾಗದೇ ಪರಿತಪಿಸುತ್ತಿದ್ದೇವೆ’ ಎನ್ನುತ್ತಾರೆಶಿವಮೊಗ್ಗ ನಗರದ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಖಂಜಾಚಿ ಅಲ್ಲಾ ಬಕ್ಷ್‌.

ಕೆಲವರ ಕುತಂತ್ರವಿದು:

ಜಿಲ್ಲೆಯ ಆಟೊಗಳಿಗೆ ಮೀಟರ್‌ ಹಾಕಿಲ್ಲ ಎಂದು ಎಲ್ಲರೂ ದೂರುತ್ತಾರೆ. ಆಟೊಗಳಿಗೆ ಅಳವಡಿಸಿರುವ ಮೀಟರ್‌ನಲ್ಲಿರುವ ಒಂದು ಬಟನ್‌ ಹಾಳಾದರೂ ಮತ್ತೆ ಹಾಕಿಸಬೇಕು. ಒಮ್ಮೆಗೆ ₹ 200 ಖರ್ಚು ಬರುತ್ತದೆ. ಆದರೆ, ನಗರದಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಯಿಂದ ಎಲ್ಲ ರಸ್ತೆಗಳು ಹದಗೆಟ್ಟಿವೆ. ಎಲ್ಲಿ ನೋಡಿದರೂ ಗುಂಡಿಗಳಿವೆ. ಒಮ್ಮೆ ಗುಂಡಿಗೆ ಇಳಿಸಿದರೆ ಬಟನ್‌ ಹೋಗುತ್ತದೆ. ಎಷ್ಟು ಸಲ ಬಟನ್‌ ಹಾಕಿಸಬೇಕು? ಇದು ನಮಗೂ ಕಷ್ಟವಾಗುತ್ತದೆ.ನಿತ್ಯ ಆಟೊ ಓಡಿಸಿಯೇ ಜೀವನ ಮಾಡುವವರು ನಗರದಲ್ಲಿ ಹಲವು ಮಂದಿ ಇದ್ದಾರೆ. ಇವರು ಕನಿಷ್ಠ ಬೆಲೆಗಿಂತ ಹೆಚ್ಚಿಗೆ ಕೇಳಲ್ಲ. ಆದರೆ, ಕೆಲವರು ಹೆಚ್ಚುವರಿ ಹಣ ವಸೂಲಿ ಪಡೆಯುತ್ತಿರುವ ಬಗ್ಗೆ ಸಾಕಷ್ಟು ದೂರು ಕೇಳಿಬಂದಿವೆ. ಯಾರೋ ಒಬ್ಬಿಬ್ಬರು ಮಾಡುವ ಕೆಲಸಕ್ಕೆ ಇಡೀ ಆಟೊ ಚಾಲಕರಿಗೆ ಕೆಟ್ಟ ಹೆಸರು. ಈ ಬಗ್ಗೆ ಕೂಡಲೇ ಸಭೆ ಕರೆದು, ಎಲ್ಲ ಚಾಲಕರಿಗೆ ಎಚ್ಚರಿಕೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಆಟೊ ಚಾಲಕರಿಗೆ ಆರ್ಥಿಕ ನಷ್ಟ:

ಮೊದಲೇ ಪೆಟ್ರೋಲ್, ವಾಣಿಜ್ಯ ಬಳಕೆಯ ಅನಿಲ ದರ ಗಗನಕ್ಕೇರಿದೆ. ಈ ಮಧ್ಯೆ ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಅವೈಜ್ಞಾನಿಕ ನಿರ್ವಹಣೆಯ ಪರಿಣಾಮ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಐದಾರು ಕಿ.ಮೀ. ಸುತ್ತುವ ಅನಿವಾರ್ಯ ಇದೆ. ಯಾವ ರಸ್ತೆಗೆ ಹೋದರೂ ಮುಂದಕ್ಕೆ ಸಾಗುವುದೇ ಇಲ್ಲ. ಅಷ್ಟೊಂದು ಅಡೆತಡೆ, ಗುಂಡಿಗಳಿಂದ ತುಂಬಿಹೋಗಿವೆ. ಇದು ಆಟೊ ಚಾಲಕರು ದರ ಹೆಚ್ಚು ಕೇಳಲುಕಾರಣ ಎನ್ನುತ್ತಾರೆ ಶಿವಮೊಗ್ಗದ ಆಟೊ ಚಾಲಕ ರಮೇಶ್.

ಬೆಲೆ ಏರಿಕೆ: ಆಟೊ ಪ್ರಯಾಣ ದರ ಹೆಚ್ಚಳ

ಶಿಕಾರಿಪುರ:ಅಡುಗೆ ಅನಿಲ ಬೆಲೆ ಏರಿಕೆಯಾದ ಕಾರಣದಿಂದ ಅನಿವಾರ್ಯವಾಗಿ ಆಟೊ ಮಾಲೀಕರು ಹಾಗೂ ಚಾಲಕರು ಪ್ರಯಾಣ ದರ ಹೆಚ್ಚಿಸಿದ್ದಾರೆ.

ಪಟ್ಟಣದಲ್ಲಿ ಸುಮಾರು 300ಕ್ಕೂ ಹೆಚ್ಚು ಆಟೊಗಳುಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ಖಾಸಗಿ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಶಿರಾಳಕೊಪ್ಪ ಸರ್ಕಲ್, ಶಿವಮೊಗ್ಗ ಸರ್ಕಲ್, ಚಾನಲ್ ಪಕ್ಕ, ಮೆಸ್ಕಾಂ ಸಮೀಪದ ವಿನಾಯಕ ನಗರ, ಕೋರ್ಟ್ ಸರ್ಕಲ್, ರಂಗಮಂದಿರ ಸಮೀಪ ಆಟೊ ನಿಲ್ದಾಣಗಳಿವೆ.

ಪಟ್ಟಣದಲ್ಲಿ ಗ್ಯಾಸ್ ಬಂಕ್ ಇಲ್ಲದ ಕಾರಣಬಹುತೇಕ ಆಟೊ ಮಾಲೀಕರು ಅಡುಗೆ ಅನಿಲವನ್ನು ಉಪಯೋಗಿಸಿಕೊಂಡು ಸಂಚಾರ ನಡೆಸುತ್ತಿದ್ದಾರೆ. ಪ್ರಸ್ತುತ ಗ್ಯಾಸ್ ಬೆಲೆ ಹೆಚ್ಚಾಗಿರುವ ಕಾರಣ ಆಟೊ ಪ್ರಯಾಣ ದುಬಾರಿಯಾಗಿದೆ. ಪಟ್ಟಣದಲ್ಲಿ ಆಟೊಗಳಿಗೆ ಮೀಟರ್ ಅಳವಡಿಸಿಲ್ಲ. ಆದರೆ ಪ್ರಯಾಣಿಕರಿಂದ ಮೊದಲು ಕನಿಷ್ಠ ದರ ₹ 30 ಪಡೆದು ಅವರು ಹೇಳಿದ ಸ್ಥಳಗಳಿಗೆ ಬರುತ್ತಿದ್ದರು.

ಪ್ರಸ್ತುತ ಅಡುಗೆ ಅನಿಲ ಬೆಲೆ ಏರಿಕೆಯಿಂದ ಪ್ರಯಾಣಿಕರಿಂದ ಕನಿಷ್ಠ ₹40 ಪಡೆಯುತ್ತಿದ್ದಾರೆ. ಆಟೊ ಪ್ರಯಾಣ ದರ ಏರಿಕೆಯಿಂದ ಪ್ರಯಾಣಿಕರು ಹೇಳಿದ ಹಣವನ್ನು ಕೊಡಲು ಹಿಂದೇಟು ಹಾಕಿರುವ ಪ್ರಸಂಗಗಳು ನಡೆದಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಪ್ರಯಾಣ ದರ ಹೆಚ್ಚಿಸಿರುವ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಆಟೊ ಚಾಲಕರು.

‘ಪಟ್ಟಣದಲ್ಲಿ ಗ್ಯಾಸ್ ಬಂಕ್ ಇಲ್ಲ. ಅಡುಗೆ ಅನಿಲ ಉಪಯೋಗಿಸಿ ಆಟೊ ಓಡಿಸುತ್ತಿದ್ದೇವೆ. ಅಡುಗೆ ಅನಿಲ ಏರಿಕೆ ಕಾರಣದಿಂದ ಪ್ರಯಾಣ ದರ ಹೆಚ್ಚಿಸಿದ್ದೇವೆ. ಕೆಲವು ಪ್ರಯಾಣಿಕರು ಅರ್ಥ ಮಾಡಿಕೊಂಡು ಹಣ ನೀಡುತ್ತಾರೆ. ಕೆಲವರು ನೀಡುವುದಿಲ್ಲ. ಕೆಲವೊಮ್ಮೆ ಪ್ರಯಾಣಿಕರಿಗೆ ನಾವೇ ಹೊಂದಿಕೊಂಡು ಹೋಗುತ್ತಿದ್ದೇವೆ’ ಎಂದರು ಆಟೊ ಮಾಲೀಕಮೇಘರಾಜ್.

ಆಟೊಗಳಿಗೆ ಮೀಟರ್ ಅಳವಡಿಕೆ ಎಫ್‌ಸಿಗೆ ಸೀಮಿತ

ಭದ್ರಾವತಿ: ಆಟೊಗಳಿಗೆ ಮೀಟರ್ ಅಳವಡಿಸುವ ಮಾತು ಕೇವಲ ವಾಹನ ಫಿಟ್‌ನೆಸ್ ಪ್ರಮಾಣಪತ್ರಕ್ಕೆ ಮಾತ್ರ ಸೀಮಿತವಾಗಿದ್ದು, ಇದರ ಮೇಲೆ ಬಾಡಿಗೆ ಕೇಳಿದರೆ ಪ್ರಯಾಣಿಕರು ಹತ್ತುವುದೇ ಇಲ್ಲ ಎಂಬ ಸ್ಥಿತಿ ಇಲ್ಲಿದೆ.

‘ಬಸ್ ಮತ್ತು ರೈಲ್ವೆ ನಿಲ್ದಾಣದಿಂದ ಪ್ರಯಾಣಿಸುವ ಜನರು ಮಾತ್ರ ನೇರವಾಗಿ ಬಾಡಿಗೆ ನೀಡುತ್ತಾರೆ. ಇನ್ನುಳಿದ ಕಡೆ ನಡೆದಿರುವುದು ಕಟ್ ಸೀಟ್ ಬಾಡಿಗೆ ದರವೇ’ ಎನ್ನುತ್ತಾರೆ ಆಟೊ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ.

‘ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಒಟ್ಟು 22 ಆಟೊ ನಿಲ್ದಾಣಗಳಿವೆ. ಬಸ್ ಹಾಗೂ ರೈಲ್ವೆನಿಲ್ದಾಣ ಹೊರತುಪಡಿಸಿ ಬೇರೆಡೆ ನೇರವಾಗಿ ಬಾಡಿಗೆ
ಹಣ ಕೊಟ್ಟು ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ವಿರಳ. ಉಳಿದೆಡೆ ಸೀಟ್ ಒಂದಕ್ಕೆ ₹ 10 ರಂತೆ ಹಣ ಕೊಟ್ಟು ತೆರಳುವ ನಾಗರಿಕರ ಸಂಖ್ಯೆಯೇ ಹೆಚ್ಚಿದೆ. ಈ ರೀತಿ ಐದಾರು ಜನ ಪ್ರಯಾಣ ಮಾಡಿದರೆ ನಮ್ಮ ಚಾಲಕರಿಗೆ ಉತ್ತಮ ಬಾಡಿಗೆ ಸಿಕ್ಕಂತೆ. ಈಗ ಕನಿಷ್ಠ ಎರಡು ಕಿ.ಮೀ ತನಕ ₹ 40 ದರ ನಿಗದಿ ಮಾಡಿಕೊಂಡಿದ್ದೇವೆ’ ಎಂದರು ಅವರು.

‘ನಗರಸಾರಿಗೆ ಬಸ್ ಸಹ ಹೆಚ್ಚಾಗಿ ಸಂಚಾರ ಮಾಡುತ್ತಿರುವ ಕಾರಣ ಒಂದು ಕಡೆಯಿಂದ ಮತ್ತೊಂದು ಕಡೆ ಬಾಡಿಗೆ ತೆತ್ತು ಓಡಾಡುವ ಜನರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ನಾವು ಸಹ ಕಟ್ ಸೀಟ್ ಪ್ರಯಾಣಿಕರಿಗೆ ನೆರವಾಗುತ್ತಿದ್ದೇವೆ.ನಗರ ಗ್ರಾಮೀಣ ಭಾಗದಲ್ಲಿ ಸುಮಾರು 1,500‌ಕ್ಕೂಅಧಿಕ ಆಟೊಗಳಿದ್ದು, ಬಹುತೇಕ ಎಲ್ಲಕ್ಕೂ ಮೀಟರ್ ಅಳವಡಿಕೆ
ಮಾಡಲಾಗಿದೆ. ಆದರೆ ಅದನ್ನು ಜಾರಿ ಮಾಡುವ ಪ್ರಯತ್ನ ಮಾತ್ರ ಆಗಿಲ್ಲ.ಇದಕ್ಕೆ ಹಲವು ರೀತಿಯ ತೊಂದರೆಗಳಿವೆ’ ಎನ್ನುತ್ತಾರೆ ಆಟೊಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಮ.

ಎಫ್‌ಸಿ ಮಾಡುವಾಗ ಇದನ್ನು ಕಡ್ಡಾಯವಾಗಿ ಪಾಲಿಸಬೇಕಾದ ಅನಿವಾರ್ಯ ಇರುವ ಕಾರಣ ಸಹಜವಾಗಿ ಇದನ್ನು ಅಳವಡಿಕೆ ಮಾಡಲಾಗಿದೆ. ಕೋವಿಡ್ ಕಾಲದಲ್ಲಿ ತಿಂಗಳುಗಟ್ಟಲೇ ವಾಹನ ಚಲಾವಣೆ ಇಲ್ಲದೆ ಚಾಲಕ, ಮಾಲೀಕರು ಸಾಕಷ್ಟು ನಷ್ಟ ಹೊಂದಿದ್ದಾರೆ. ಜತೆಗೆ ಶಾಲೆಗಳು ಆರಂಭವಾಗದೆ ಇರುವುದು ಸಹ ದುಡಿಮೆ ಶಕ್ತಿಯನ್ನು ಕುಂದಿಸಿದೆ ಎನ್ನುತ್ತಾರೆ ಅವರು.

‘ಐದಾರು ಕಿ.ಮೀ. ಸಾಗುವ ವೇಳೆ ಐದಾರು ಪ್ರಯಾಣಿಕರು ಹತ್ತಿ ಇಳಿದು ಹೋದರೆ ಕನಿಷ್ಠ ₹ 60 ಬಾಡಿಗೆ ಸಿಗುತ್ತದೆ. ಕೆಲವೊಮ್ಮೆ₹ 100 ತನಕ ಸಿಗುವ ಸಾಧ್ಯತೆ ಇದೆ. ಇದಕ್ಕೆ ಹೊರತಾಗಿ ಮೀಟರ್ ವ್ಯವಹಾರಕ್ಕೆ ಇಳಿದರೆ ಬಾಡಿಗೆ ಕಡಿಮೆ ಜತೆಗೆ ಪ್ರಯಾಣಿಕರಿಗೂ ಹೊರೆ ಆಗಲಿದೆ.ಪೆಟ್ರೋಲ್ ದರ ಹೆಚ್ಚಳ ಸಹ ನಮಗೆ ಹೊರೆಯಾಗಿದೆ. ಇನ್ನು ಗ್ಯಾಸ್ ಅಳವಡಿಸಿದರೆ ಒಂದಿಷ್ಟು ಉಳಿತಾಯವಾಗಲಿದೆ’ ಎನ್ನುತ್ತಾರೆ ಕೆಲ ಚಾಲಕರು.

‘ಸಿಟಿ ಬಸ್‌ಗೆ ಕೊಡುವ ಹಣವೇ ಆಟೊಗೂ ಕೊಟ್ಟು ಓಡಾಟ ಮಾಡಬಹುದು. ಏಕೆಂದರೆ ಕಟ್ ಸೀಟ್ ಓಡಾಟ ಇರುವ ಕಾರಣ ಎಲ್ಲೆಡೆ ಸಂಚರಿಸಲು ಆಟೊ ನೆರವಾಗಿದೆ. ಕೆಲವೊಮ್ಮೆ ಬಾಡಿಗೆ ಸಿಗದಾಗ ಒಂದಿಬ್ಬರೇ ಓಡಾಟ ಮಾಡಿದಾಗ ಹೊರೆ ಬಂದೇ ಬರುತ್ತದೆ’ ಎನ್ನುತ್ತಾರೆ ದಿನನಿತ್ಯ ಓಡಾಟ ಮಾಡುವ ಪ್ರಯಾಣಿಕ ಯೋಗಪ್ಪ.

ಮೀಟರ್ ಅಳವಡಿಕೆ ವಾಹನ ಎಫ್‌ಸಿಗೆ ಸೀಮಿತವಾಗಿದ್ದರೂ ಕಟ್ ಸೀಟ್ ಓಡಾಟ ಪ್ರಯಾಣಿಕರಿಗೂ, ಚಾಲಕರಿಗೂ ಒಂದಿಷ್ಟು ಹಗುರ ಎನಿಸುವ ಪರಿಸ್ಥಿತಿ ತಾಲ್ಲೂಕಿನಲ್ಲಿದೆ.

ಕಾಮಗಾರಿ ವಿಳಂಬದ ಕಾರಣ ಆಟೊ ಚಾಲಕರಿಗೆ ತುಂಬಾ ಸಮಸ್ಯೆಯಾಗಿದೆ. ಎಲ್ಲ ಮಾರ್ಗಗಳಲ್ಲೂ ಸುತ್ತಿ ಬಳಸಿ ಸಾಗಬೇಕಿದೆ. ಬಾಡಿಗೆ ನಷ್ಟವಾಗುತ್ತಿದೆ. ಶೀಘ್ರ ಪೂರ್ಣಗೊಳಿಸಿದರೆ ಅನುಕೂಲವಾಗುತ್ತದೆ.

ಕುಂಸಿ ರವಿ, ಗೋ‍ಪಿವೃತ್ತದ ಆಟೊ ಚಾಲಕ

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ನಡೆಯುವ ಸಭೆಯಲ್ಲಿ ನಿರ್ಧಾರವಾಗುವ ಕನಿಷ್ಠ ದರವನ್ನು ಆಟೊ ಚಾಲಕರು ಪಡೆಯಬೇಕು. ಅದನ್ನು ಬಿಟ್ಟು ಮನಸಿಗೆ ಬಂದಷ್ಟು ವಸೂಲಿ ಮಾಡಬಾರದು. ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು.

ಕೆ.ವಿ.ವಸಂತ್‌ಕುಮಾರ್‌, ಪ್ರಧಾನ ಕಾರ್ಯದರ್ಶಿ, ನಾಗರಿಕ ಹಿತರಕ್ಷಣಾ ವೇದಿಕೆ

ಆಟೊಗಳ ದರ ಹೆಚ್ಚಳದ ಬಗ್ಗೆ ಆರ್‌ಟಿಒ ಸಭೆಯಲ್ಲಿ ಚರ್ಚೆಯಾಗಿದೆ. ಕಡ್ಡಾಯವಾಗಿ ಮೀಟರ್‌ ಹಾಕುವಂತೆ ಚಾಲಕರಿಗೆ ಸೂಚನೆ ನೀಡಲಾಗಿದೆ. ಮೀಟರ್‌ ಹಾಕದವರ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು.

ಲಕ್ಷ್ಮೀಪ್ರಸಾದ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.