ADVERTISEMENT

ಭದ್ರಾವತಿ | ಆಯುರ್ವೇದ ಎಲ್ಲ ವೈದ್ಯ ಪದ್ಧತಿಗಳ ತಾಯಿ; ಡಾ.ಕಜೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 5:02 IST
Last Updated 26 ಜನವರಿ 2026, 5:02 IST
ಭದ್ರಾವತಿಯಲ್ಲಿ ಭಾನುವಾರ ನಡೆದ ತರಳಬಾಳು ಹುಣ್ಣಿಮೆಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು
ಭದ್ರಾವತಿಯಲ್ಲಿ ಭಾನುವಾರ ನಡೆದ ತರಳಬಾಳು ಹುಣ್ಣಿಮೆಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು   

ಭದ್ರಾವತಿ: ಸೂರ್ಯ, ಚಂದ್ರ ಇಬ್ಬರೂ ಭೂಮಿಗೆ ಬೆಳಕು ಕೊಡುತ್ತಾರೆ. ದೇವರೇ ಸೂರ್ಯ, ಗುರುಗಳೇ ಚಂದ್ರ, ಅವರಿಂದಾಗಿಯೇ ನಾವೆಲ್ಲರೂ ಬೆಳಕು ಕಾಣುತ್ತಿದ್ದೇವೆ. ಹೀಗಾಗಿ ಈ ತರಳಬಾಳು ಹುಣ್ಣಿಮೆ ಜಗತ್ತಿನಲ್ಲಿರುವ ಎಲ್ಲ ಗುರುಗಳ ಮಹೋತ್ಸವ ಎಂದು ಆಯರ್ವೇದ ವೈದ್ಯ ಡಾ.ಗಿರಿಧರ ಕಜೆ ಬಣ್ಣಿಸಿದರು.

ಇಲ್ಲಿನ ವಿಐಎಸ್‌ಎಲ್ ಮೈದಾನದಲ್ಲಿ ಭಾನುವಾರ ತರಳಬಾಳು ಹುಣ್ಣಿಮೆ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದ ‘ಆರೋಗ್ಯ ಮತ್ತು ಸಮಾಜ’ ಗೋಷ್ಠಿಯಲ್ಲಿ ಮಾತನಾಡಿದರು.

ಆಯುರ್ವೇದ ಎಲ್ಲ ವೈದ್ಯ ಪದ್ಧತಿಗಳ ತಾಯಿ. ಅದರ ವಿಚಾರವನ್ನು ಅಳವಡಿಸಿಕೊಂಡರೆ ಸಮಾಜದ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ADVERTISEMENT

ಆತ್ಮಸ್ಥೈರ್ಯ, ಧೈರ್ಯದಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆ ಮೆಟ್ಟಿ ನಿಲ್ಲಲು ಸಾಧ್ಯ. ತಾಯಿಯನ್ನು ಮಕ್ಕಳು ಚೆನ್ನಾಗಿ ಇಟ್ಟುಕೊಂಡರೆ ಸಮಾಜದ ಆರೋಗ್ಯ ಚೆನ್ನಾಗಿರುತ್ತದೆ. ಇಂದ್ರಿಯಗಳು ಯೋಗ್ಯವಾಗಿರುವುದೇ ಆರೋಗ್ಯ. ಸಮಾಜದ ಸ್ವಾಸ್ಥ್ಯವನ್ನು ಬಹಳ ಚೆನ್ನಾಗಿಟ್ಟುಕೊಳ್ಳಬೇಕಾದರೆ ಮನಸ್ಸಿನ ಆರೋಗ್ಯವೂ ಮುಖ್ಯ. ಆಹಾರವನ್ನು ಆಧರಿಸಿ ಮನಸ್ಸು, ಸ್ಮೃತಿ ಇರುತ್ತದೆ. ಮನೆ ಊಟಕ್ಕೆ ಹೆಚ್ಚು ಮಹತ್ವ ಕೊಡಬೇಕಿದೆ ಎಂದು ಸಲಹೆ ನೀಡಿದರು.

‘ಊಟಕ್ಕಿಂತ ಔಷಧಿ ಹೆಚ್ಚು ಬಳಸುತ್ತಿದ್ದೇವೆ. ಬರೀ ಮಾತ್ರೆಯೇ ಔಷಧಿ ಅಲ್ಲ. ಬೆಳಿಗ್ಗೆ ಬೇಗ ಏಳುವುದು, ವಾಕಿಂಗ್, ಯೋಗ, ಸಾತ್ವಿಕ ಆಹಾರ, ಚಿಂತೆಯಿಂದ ದೂರವಿರುವುದು, ಒಳ್ಳೆಯ ಸ್ನೇಹಿತರು ಇವೆಲ್ಲವೂ ಆರೋಗ್ಯಕರ ಬದುಕಿಗೆ ನಿಜವಾದ ಔಷಧಿ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅಭಿಪ್ರಾಯಪಟ್ಟರು.

ದೇಹದ ತೂಕ ಇಳಿಸಬೇಕಾದರೆ ವ್ಯಾಯಾಮ, ಮನಸ್ಸಿನ ಒತ್ತಡ ಇಳಿಸಬೇಕಾದರೆ ಯೋಗ, ಜೀವನದಲ್ಲಿ ಯಶಸ್ಸು ಕಾಣಲು ಗುರುಗಳ ಆಶೀರ್ವಾದ ಪಡೆಯಬೇಕು. ಊಟದ ತಟ್ಟೆಯಲ್ಲಿ ಕೋಸಂಬರಿ, ಸೊಪ್ಪು, ತರಕಾರಿ ಅರ್ಧಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇರಬೇಕು. ಅದು ಆರೋಗ್ಯದ ಗುಟ್ಟು ಎಂದು ಕಿವಿಮಾತು ಹೇಳಿದರು.

ಮಧ್ಯ ಕರ್ನಾಟಕದಲ್ಲಿ ಏತ ನೀರಾವರಿ ಯೋಜನೆಗಳ ಮೂಲಕ ರೈತರಿಗೆ ನೆರವಾದ ಆಧುನಿಕ ಭಗೀರಥ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎಂದು ಬಣ್ಣಿಸಿದ ಅವರು, ‘12ನೇ ಶತಮಾನದ ವಚನ ಸಾಹಿತ್ಯದಿಂದ ಕನ್ನಡ ಭಾಷೆ ಉಳಿಯುತ್ತದೆ ಎಂದು ಚಂದ್ರಶೇಖರ ಕಂಬಾರ ಹೇಳಿದ್ದರು. ಫ.ಗು.ಹಳಕಟ್ಟಿ ಅವರು ಸಂಗ್ರಹಿಸಿದ್ದ 22 ಸಾವಿರಕ್ಕೂ ಹೆಚ್ಚು ವಚನಗಳನ್ನು ಡಿಜಿಟಲೀಕರಣ ಮಾಡಿ ಕನ್ನಡ ಭಾಷೆಯನ್ನು ಉಳಿಸಿದ ಶ್ರೇಯ ಶ್ರೀಗಳಿಗೆ ಸಲ್ಲುತ್ತದೆ’ ಎಂದರು. 

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್, ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಬಿ. ದೇವೇಂದ್ರಪ್ಪ, ಡಾ.ಧನಂಜಯ ಸರ್ಜಿ, ವೈದ್ಯ ಡಾ.ಜಿ.ಎಸ್.ಶಿವಪ್ರಸಾದ್, ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಬಿ.ಕೆ.ಜಗನ್ನಾಥ್, ವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ರವಿಕುಮಾರ್‌, ಡಾ.ಎಚ್.ಜೆ.ವಿಜಯಕುಮಾರ್, ಡಾ.ಸಿ.ಎನ್.‍ಪಾಟೀಲ್, ಕೋಗಳಿ ಕೊಟ್ರೇಶ್ ಹಾಜರಿದ್ದರು. ಆನವೇರಿಯ ಬಿ.ಜಿ.ಜಗದೀಶಗೌಡ ಸ್ವಾಗತಿಸಿದರು. 

ಸಿರಿಗೆರೆಯ ಅಕ್ಕನ ಬಳಗ, ತರಳಬಾಳು ಸ್ಪೋರ್ಟ್ಸ್ ಅಕಾಡೆಮಿಯಿಂದ ಯೋಗಾಸನ, ದಾವಣಗೆರೆಯ ಬಾಪೂಜಿ ದಂತ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಂದ ಕಿರುನಾಟಕ, ಸಿರಿಗೆರೆಯ ಬಿ.ಲಿಂಗಯ್ಯ ವಸತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಲಾವಣಿ ನೃತ್ಯ, ಕಥಕ್ ನೃತ್ಯ ಪ್ರದರ್ಶನ ನಡೆಯಿತು.

ಹೆಚ್ಚು ರಕ್ತದಾನ ಮಾಡುವುದರಿಂದ ಹೃದಯಾಘಾತ ಪಾರ್ಶ್ವವಾಯು ಕ್ಯಾನ್ಸರ್‌ನ ಅಪಾಯ ಬಹಳಷ್ಟು ಕಡಿಮೆ. ಜತೆಗೆ ದೇಹದ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ರಕ್ತದಾನಕ್ಕೆ ಹೆಚ್ಚು ಒತ್ತು ಕೊಡಬೇಕಿದೆ
ಡಾ.ಧನಂಜಯ ಸರ್ಜಿ ವಿಧಾನ ಪರಿಷತ್ ಸದಸ್ಯ
ಆರೋಗ್ಯವೆಂದರೆ ಏನು ಎಂಬುದು ಗೊತ್ತಿದ್ದರೂ ಅದನ್ನು ಪಾಲಿಸುವುದಿಲ್ಲ. ಧೂಮಪಾನ ಇಲ್ಲದಿದ್ದರೆ ಬಹಳಷ್ಟು ಆಸ್ಪತ್ರೆಗಳೇ ಇರುತ್ತಿರಲಿಲ್ಲ. ಧೂಮಪಾನ 10ರಿಂದ 15 ವರ್ಷ ಆಯಸ್ಸನ್ನು ಕಡಿಮೆ ಮಾಡುತ್ತದೆ
ಡಾ.ಸಿ.ಎನ್.ಪಾಟೀಲ ಕ್ಯಾನ್ಸರ್ ತಜ್ಞ

ತರಳಬಾಳು ಹುಣ್ಣಿಮೆಯಲ್ಲಿ ಇಂದು ‘ರಾಜಕಾರಣ ಮತ್ತು ಸಮಾಜ’ ಗೋಷ್ಠಿ ಆಶೀರ್ವಚನ: ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅತಿಥಿಗಳು: ಮಾಜಿ ಸಚಿವ ಡಿ.ಎಚ್.ಶಂಕರಮೂರ್ತಿ ಉಡುಪಿ–ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಉಪನ್ಯಾಸ: ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ.ರವಿ ರಮೇಶ್‌ ಬಾಬು ಎಸ್‌.ಎಲ್‌.ಭೋಜೇಗೌಡ ಮಾಜಿ ಸಚಿವ ಎಚ್.ಆಂಜನೇಯ ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಪತ್ರಕರ್ತ ಪ್ರಶಾಂತ ನಾತು ಹಾಗೂ ಮಿಮಿಕ್ರಿ ಕಲಾವಿದ ಗೋಪಿ. ವಿಶೇಷ ಆಹ್ವಾನಿತರು: ಹಗರಿಬೊಮ್ಮನಹಳ್ಳಿ ಶಾಸಕ ನೇಮಿಚಂದ್ರ ನಾಯ್ಕ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ. ಸಾಂಸ್ಕೃತಿಕ ಕಾರ್ಯಕ್ರಮಗಳು: ವಚನಗೀತೆ–ಸಿಂದಗಿಯ ಸಪ್ತಸ್ವರ ಕಲಾ ಬಳಗದ ಯಶವಂತ್ ಬಡಿಗೇರ್ ಬಂಜಾರ ನೃತ್ಯ–ಆನಗೋಡು ಮರುಳಸಿದ್ದೇಶ್ವರ ಶಾಲೆ ವಿದ್ಯಾರ್ಥಿಗಳು ಜನಪದ ನೃತ್ಯ ಹಾಗೂ ಭರತನಾಟ್ಯ– ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕಂಗೀಲು ನೃತ್ಯ– ಪಲ್ಲಾಗಟ್ಟೆ ಸಿದ್ದಮ್ಮ ಗ್ರಾಮೀಣ ಪ್ರೌಢಶಾಲೆ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.