
ಆರೋಪಿ ಮಲ್ಲೇಶ
ಶಿವಮೊಗ್ಗ: ಹಣದ ಆಸೆಗೆ ದೊಡ್ಡಪ್ಪ, ದೊಡ್ಡಮ್ಮನನ್ನು ಅರೆವಳಿಕೆ ಚುಚ್ಚುಮದ್ದು ನೀಡಿ ಕೊಲೆ ಮಾಡಿದ್ದ ಆಯುರ್ವೇದ ವೈದ್ಯನನ್ನು ಭದ್ರಾವತಿಯ ಹಳೇನಗರ ಠಾಣೆ ಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ.
ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಬಳಿಯ ಬಿ.ಬೀರನಹಳ್ಳಿ ನಿವಾಸಿ ಜಿ.ಪಿ.ಮಲ್ಲೇಶ (44) ಬಂಧಿತ ಆರೋಪಿ.
ಭದ್ರಾವತಿಯ ಭೂತನಗುಡಿ ನಿವಾಸಿ ಚಂದ್ರಪ್ಪ (78) ಹಾಗೂ ಜಯಮ್ಮ (75) ದಂಪತಿಯ ಶವ ಮಂಗಳವಾರ ಮನೆಯಲ್ಲಿ ಪತ್ತೆಯಾಗಿದ್ದವು. ಹಾಲ್ ನಲ್ಲಿ ಚಂದ್ರಪ್ಪ ಹಾಗೂ ಕೊಠಡಿಯಲ್ಲಿ ಜಯಮ್ಮ ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದರು.
ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗೆ ಮುಂದಾಗಿದ್ದರು. ಡಿವೈಎಸ್ಪಿ ಪ್ರಕಾಶ್ ರಾಥೋಡ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿತ್ತು.
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿ ಚಂದ್ರಪ್ಪ , ಪತ್ನಿಯೊಂದಿಗೆ ಭೂತನ ಗುಡಿಯಲ್ಲಿ ವಾಸವಿದ್ದರು. ಅವರಿಗೆ ಮೂವರು ಪುತ್ರರು ಇದ್ದು, ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಪ್ರತ್ಯೇಕವಾಗಿ ವಾಸವಿದ್ದಾರೆ.
ಆರೋಪಿ ಮಲ್ಲೇಶ ವೃದ್ಧ ಚಂದ್ರಪ್ಪ ಅವರ ಕಿರಿಯ ಸಹೋದರನ ಮಗ. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಮಲ್ಲೇಶ ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಈಚೆಗೆ ದುರ್ನಡತೆಯ ಕಾರಣಕ್ಕೆ ಆತನನ್ಬು ಕೆಲಸದಿಂದ ತೆಗೆದು ಹಾಕಿದ್ದರು ಎಂದು ತಿಳಿದುಬಂದಿದೆ.
ವಿಪರೀತ ಸಾಲ ಮಾಡಿಕೊಂಡಿದ್ದ ಮಲ್ಲೇಶ, ಅದನ್ನು ತೀರಿಸಲು ದೊಡ್ಡಪ್ಪ ಚಂದ್ರಪ್ಪ ಅವರ ಬಳಿ ₹15 ಲಕ್ಷ ಸಾಲ ಕೇಳಿದ್ದನು. ಅವರು ಕೊಟ್ಟಿರಲಿಲ್ಲ. ಇದರಿಂದ ಆಕ್ರೋಶಗೊಂಡ ಆರೋಪಿ ದಂಪತಿಯನ್ನು ಕೊಲೆ ಮಾಡಿ ಹಣ ದೋಚಲು ನಿರ್ಧರಿಸಿ ವ್ಯವಸ್ಥಿತ ಯೋಜನೆ ರೂಪಿಸಿದ್ದನು.
ದಂಪತಿ ವಯೋಸಹಜ ಕಾರಣ ಮಂಡಿ ನೋವಿನಿಂದ ಬಳಲುತ್ತಿದ್ದು, ಅದರ ನಿವಾರಣೆಗೆ ಇಂಜೆಕ್ಷನ್ ಕೊಡುವುದಾಗಿ ಹೇಳಿದ್ದನು. ಪುತ್ರ ವೈದ್ಯ ಎಂಬ ಕಾರಣಕ್ಕೆ ದಂಪತಿ ಇಂಜೆಕ್ಷನ್ ಪಡೆಯಲು ಮುಂದಾಗಿದ್ದರು. ಸೋಮವಾರ ಮಧ್ಯಾಹ್ನ ಮನೆಗೆ ಬಂದಿದ್ದ ಮಲ್ಲೇಶ, ಇಬ್ಬರಿಗೂ ಅನಸ್ತೇಶಿಯಾ ಇಂಜೆಕ್ಷನ್ ಪ್ರೊಪೊಫೋಲ್ (propofol) ಹೆಚ್ಚಿನ ಪ್ರಮಾಣದಲ್ಲಿ (50 ಎಂ.ಜಿ) ನೀಡಿದ್ದು, ರಕ್ತದೊತ್ತಡ ಕುಸಿದು ತಕ್ಷಣವೇ ದಂಪತಿ ಸಾವಿಗೀಡಾಗಿದ್ದಾರೆ. ನಂತರ ಮನೆಯ ಕಪಾಟಿನಲ್ಲಿದ್ದ ಚಿನ್ನಾಭರಣ, ನಗದು ದೋಚಿದ್ದ ಆರೋಪಿ ಪರಾರಿಯಾಗಿದ್ದನು. ಚಿನ್ನಾಭರಣ ಅಡವಿಟ್ಟು, ಬಂದ ಹಣದಲ್ಲಿ ಸಾಲ ತೀರಿಸಿದ್ದ ಆರೋಪಿ, ಉಳಿದ ಮೊತ್ತ ತನ್ನ ಬ್ಯಾಂಕ್ ಖಾತೆಗೆ ಹಾಕಿದ್ದನು.
ಹೆಚ್ಚಿನ ಪ್ರಮಾಣದಲ್ಲಿ ಅರೆವಳಿಕೆ ಮದ್ದು ಕೊಟ್ಟು ಪತ್ನಿಯ ಕೊಲೆ ಮಾಡಿದ್ದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ವೈದ್ಯನ ಕೃತ್ಯವೇ ಈ ಘಟನೆಗೂ ಪ್ರೇರಣೆ ಎಂದು ಪೊಲೀಸರು ಹೇಳುತ್ತಾರೆ.
ಚಂದ್ರಪ್ಪ ಹಾಗೂ ಜಯಮ್ಮ
ಪೊಲೀಸರಿಗೆ ನಗದು ಬಹುಮಾನ-ಎಸ್ಪಿ
'ಸ್ಥಳ ಪರಿಶೀಲನೆ ನಡೆಸಿದ್ದಾಗ ಯಾರೋ ಬಲವಂತವಾಗಿ ಮನೆಯೊಳಗೆ ಪ್ರವೇಶಿಸಿದ್ದ ಕುರುಹು ಇರಲಿಲ್ಲ. ಜೊತೆಗೆ ದಂಪತಿಯ ವೈದ್ಯಕೀಯ ವರದಿಯ ಕಡತ ಟೇಬಲ್ ಮೇಲೆ ಇಡಲಾಗಿತ್ತು. ಆ ಸಾಕ್ಷ್ಯಗಳ ಆಧರಿಸಿ ತನಿಖೆ ನಡೆಸಿರುವ ಭದ್ರಾವತಿ ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಬರುವ ಮುನ್ನವೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿ ಪ್ರಶಂಸನೀಯ ಕೆಲಸ ಮಾಡಿದ್ದಾರೆ. ತನಿಖಾ ತಂಡಕ್ಕೆ ನಗದು ಬಹುಮಾನ ನೀಡಲಾಗುವುದು' ಎಂದು ಎಸ್ಪಿ ಬಿ.ನಿಖಿಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ಮಲ್ಲೇಶ ಮನೆಯಿಂದ ದೋಚಿದ್ದ ಚಿನ್ನಾಭರಣವೆಷ್ಟು ಹಾಗೂ ಆಯುರ್ವೇದ ವೈದ್ಯನಾದ ಆತನಿಗೆ ಅಷ್ಟೊಂದು ಪ್ರಮಾಣದಲ್ಲಿ ಅನಸ್ತೇಶಿಯಾ ಮದ್ದು ಕೊಟ್ಟವರು ಯಾರು? ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಎಸ್ಪಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.