
ಜಯಮ್ಮ ಹಾಗೂ ಚಂದ್ರಪ್ಪ ದಂಪತಿ
ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ಹಣದ ಆಸೆಗಾಗಿ ಸ್ವಂತ ದೊಡ್ಡಪ್ಪ ಮತ್ತು ದೊಡ್ಡಮ್ಮನಿಗೆ ಆಯುರ್ವೇದ ವೈದ್ಯನೊಬ್ಬ ಅರಿವಳಿಕೆ ಚುಚ್ಚುಮದ್ದು ನೀಡಿ ಕೊಲೆ ಮಾಡಿರುವುದು ಗೊತ್ತಾಗಿದ್ದು, ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ.
ಮೃತ ಚಂದ್ರಪ್ಪ ಅವರ ಸಹೋದರನ ಮಗ, ಭದ್ರಾವತಿ ತಾಲ್ಲೂಕು ಬಿ.ಬೀರನಹಳ್ಳಿ ಗ್ರಾಮದ ನಿವಾಸಿ ಡಾ.ಜಿ.ಪಿ. ಮಲ್ಲೇಶ (44) ಬಂಧಿತ ಆರೋಪಿ.
ಭದ್ರಾವತಿಯ ಭೂತನಗುಡಿ ಬಡಾವಣೆ ನಿವಾಸಿ, ವಿಐಎಸ್ಎಲ್ ಕಾರ್ಖಾನೆ ನಿವೃತ್ತ ನೌಕರ ಚಂದ್ರಪ್ಪ (78), ಅವರ ಪತ್ನಿ ಜಯಮ್ಮ (75) ದಂಪತಿಯು ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿರುವುದು ಪತ್ತೆಯಾಗಿದ್ದು, ಸಾವಿನ ಕುರಿತು ಶಂಕೆ ಮೂಡಿತ್ತು.
ಮಂಗಳವಾರ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ಪ್ರಕಾಶ್ ರಾಥೋಡ್ ನೇತೃತ್ವದಲ್ಲಿ ತನಿಖಾ ತಂಡ ರಚನೆ ಆಗಿತ್ತು. ಸಂಬಂಧಿಯೇ ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.
ಸಾಲ ಕೊಡದ್ದಕ್ಕೆ ಕೊಲೆ: ಚಂದ್ರಪ್ಪ ಅವರಿಗೆ ಮೂವರು ಪುತ್ರರಿದ್ದು ಶಿವಮೊಗ್ಗ, ಭದ್ರಾವತಿಯಲ್ಲಿ ಪ್ರತ್ಯೇಕವಾಗಿ ವಾಸವಿದ್ದಾರೆ. ಆರೋಪಿ ಮಲ್ಲೇಶ ಆಗಾಗ ಚಂದ್ರಪ್ಪ ಅವರ ಮನೆಗೆ ಬಂದು ಹೋಗುತ್ತಿದ್ದ. ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ದುರ್ನಡತೆ ಕಾರಣಕ್ಕೆ ಈಚೆಗೆ ಆಸ್ಪತ್ರೆಯವರು ಕೆಲಸದಿಂದ ತೆಗೆದು ಹಾಕಿದ್ದರು.
‘ವಿಪರೀತ ಸಾಲವಿದ್ದ ಮಲ್ಲೇಶ, ಚಂದ್ರಪ್ಪ ಅವರ ಬಳಿ ₹ 15 ಲಕ್ಷ ಸಾಲ ಕೇಳಿದ್ದ. ಅವರು ಹಣ ಕೊಟ್ಟಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಆರೋಪಿ ಕೊಲೆ ಮಾಡಿ ಹಣ ದೋಚುವ ಸಂಚು ರೂಪಿಸಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಂಪತಿ ಮಂಡಿ ನೋವಿನಿಂದ ಬಳಲುತ್ತಿದ್ದರು. ನೋವು ನಿವಾರಣೆಗೆ ಚಿಕಿತ್ಸೆ ಕೊಡುತ್ತಿದ್ದ ಮಲ್ಲೇಶ ಸೋಮವಾರ ಮಧ್ಯಾಹ್ನ ಚುಚ್ಚುಮದ್ದು ಕೊಡಲು ಮನೆಗೆ ಬಂದಿದ್ದ. ಇಬ್ಬರಿಗೂ ಅರಿವಳಿಕೆ ಮದ್ದನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದ್ದ. ರಕ್ತದೊತ್ತಡ ಕುಸಿದು ದಂಪತಿ ಮೃತಪಟ್ಟಿದ್ದರು. ಮನೆಯ ಕಪಾಟಿನಲ್ಲಿದ್ದ ಚಿನ್ನಾಭರಣ, ನಗದು ದೋಚಿ ಆರೋಪಿ ಪರಾರಿಯಾಗಿದ್ದ. ಚಿನ್ನಾಭರಣ ಅಡವಿಟ್ಟು, ಬಂದ ಹಣದಲ್ಲಿ ಸಾಲ ತೀರಿಸಿದ್ದ ಆರೋಪಿ, ಉಳಿದ ಮೊತ್ತವನ್ನು ಬ್ಯಾಂಕ್‌ನ ತನ್ನ ಖಾತೆಗೆ ಜಮೆಮಾಡಿದ್ದ ಎಂದು ತಿಳಿದುಬಂದಿದೆ.
‘ಮನೆಗೆ ಯಾರೂ ಪ್ರವೇಶಿಸಿರಲಿಲ್ಲ. ದಂಪತಿಯ ವೈದ್ಯಕೀಯ ವರದಿ ಕಡತ ಟೇಬಲ್ ಮೇಲಿತ್ತು. ಅದೂ ಸೇರಿ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬರುವ ಮುನ್ನವೇ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರು ತಿಳಿಸಿದ್ದಾರೆ.
ಆರೋಪಿ ಮಲ್ಲೇಶ ದೋಚಿದ್ದ ಚಿನ್ನಾಭರಣವೆಷ್ಟು? ಆಯುರ್ವೇದ ವೈದ್ಯನಾದ ಆತನಿಗೆ ಅಷ್ಟು ಪ್ರಮಾಣದಲ್ಲಿ ಅರಿವಳಿಕೆ ಮದ್ದು ಕೊಟ್ಟವರು ಯಾರು ಎಂಬ ಬಗ್ಗೆ ತನಿಖೆ ನಡೆದಿದೆ.-ಬಿ.ನಿಖಿಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಮೊಗ್ಗ
ಡಾ.ಜಿ.ಪಿ.ಮಲ್ಲೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.