ADVERTISEMENT

ಶಿವಮೊಗ್ಗ ಜಿಲ್ಲೆಗೆ ಬಿ. ನಿಖಿಲ್ ಹೊಸ ಎಸ್‌ಪಿ

3 ವರ್ಷ ಎಸ್‌ಪಿ ಆಗಿದ್ದ ಜಿ.ಕೆ.ಮಿಥುನ್‌ಕುಮಾರ್‌ಗೆ ಬೆಂಗಳೂರಿಗೆ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:32 IST
Last Updated 1 ಜನವರಿ 2026, 5:32 IST
<div class="paragraphs"><p>ಬಿ.ನಿಖಿಲ್</p></div>

ಬಿ.ನಿಖಿಲ್

   

ಶಿವಮೊಗ್ಗ: ಬರೋಬ್ಬರಿ 3.2 ವರ್ಷ ಶಿವಮೊಗ್ಗ ಎಸ್‌ಪಿ ಆಗಿದ್ದ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಬುಧವಾರ ವರ್ಗಾವಣೆ ಆಗಿದೆ. ಅವರು ಬೆಂಗಳೂರು ನಗರದ ಡಿಸಿಪಿ ಆಗಿ ನೇಮಕಗೊಂಡಿದ್ದಾರೆ. ಹೊಸ ವರ್ಷದ ಮುನ್ನಾ ದಿನ ಈ ವರ್ಗಾವಣೆ ಆಗಿದ್ದು, ಮಿಥುನ್‌ ಅವರ ಸ್ಥಾನಕ್ಕೆ ಕೋಲಾರದಲ್ಲಿ ಎಸ್‌ಪಿ ಆಗಿದ್ದ ಬಿ.ನಿಖಿಲ್ ಅವರು ನೇಮಕಗೊಂಡಿದ್ದಾರೆ. 

ಶಿವಮೊಗ್ಗದಲ್ಲಿ ಅತಿ ದೀರ್ಘಾವಧಿ ಕಾರ್ಯನಿರ್ವಹಿಸಿದ ಐಪಿಎಸ್‌ ಅಧಿಕಾರಿಗಳಲ್ಲೊಬ್ಬರಾದ ಮಿಥುನ್‌ಕುಮಾರ್, 2022ರ ಅಕ್ಟೋಬರ್ 10ರಂದು ಜಿಲ್ಲೆಯ ಎಸ್ಪಿ ಆಗಿ ಬಿ.ಎಂ.ಲಕ್ಷ್ಮಿಪ್ರಸಾದ್ ಅವರಿಂದ ಅಧಿಕಾರ ಸ್ವೀಕರಿಸಿದ್ದರು. 

ADVERTISEMENT

ಬಿಗಿ ಕ್ರಮಗಳಿಂದಾಗಿ ಶಿವಮೊಗ್ಗದಲ್ಲಿ ಕೋಮು ಗಲಭೆಯನ್ನು ನಿಯಂತ್ರಣಗೊಳಿಸಿದ ಶ್ರೇಯ ಮಿಥುನ್‌ಕುಮಾರ್ ಅವರಿಗೆ ಸಲ್ಲುತ್ತದೆ. ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೀಗೆ ಮೂರು ಪಕ್ಷದ ನಾಯಕರೊಂದಿಗೆ ಸೌಹಾರ್ದಯುತ ಸಂಪರ್ಕ ಹೊಂದಿದ್ದರು. 

ಕಾನೂನು ಸುವ್ಯವಸ್ಥೆ ಪಾಲನೆ ಹಾದಿಯಲ್ಲಿ ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದವರ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಘಟನೆಗಳು ಇವರ ಅವಧಿಯಲ್ಲೇ ಹೆಚ್ಚಾಗಿ ನಡೆದವು. ಸಾಗರ ರಸ್ತೆಯಲ್ಲಿ ಪೊಲೀಸ್ ಸಮುದಾಯ ಭವನ ನಿರ್ಮಾಣ, ಡಿಎಆರ್ ಮೈದಾನದಲ್ಲಿ ಜಿಮ್‌ ಆರಂಭ, ಅಶೋಕ ನಗರದಲ್ಲಿ ಪೊಲೀಸ್ ವಸತಿ ಗೃಹ ನಿರ್ಮಾಣಕ್ಕೆ ಕೆಲಸ ಆರಂಭಿಸಿದ್ದರು. ಆದರೆ ಈಚೆಗೆ ಜಿಲ್ಲೆಯಲ್ಲಿ ಎಲ್ಲೆ ಮೀರಿದ ಗಾಂಜಾ, ಓಸಿ, ಇಸ್ಪೀಟ್ ಹಾವಳಿ ಶಿವಮೊಗ್ಗದಲ್ಲಿ ಅವರ ಅಧಿಕಾರಾವಧಿಯ ಕೊನೆಯ ದಿನಗಳನ್ನು ಕೊಂಚ ಮಂಕಾಗಿಸಿತ್ತು.  

ಮೂಲತಃ ಚಿತ್ರದುರ್ಗದವರಾದ ಬಿ.ನಿಖಿಲ್ 2014ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಈ ಹಿಂದೆ ರಾಯಚೂರು ಎಸ್‌ಪಿ ಆಗಿಯೂ ಕೆಲಸ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.