ADVERTISEMENT

ಚಿಂದಿ ಆಯ್ದು ಮೊಮ್ಮಗನ ಓದಿಸುತ್ತಿರುವ ಅಜ್ಜಿ

2015ರಲ್ಲಿ ಹತ್ಯೆಯಾಗಿದ್ದ ಬಜರಂಗದಳದ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಕುಟುಂಬದ ಸಂಕಷ್ಟದ ಕಥೆ

ಚಂದ್ರಹಾಸ ಹಿರೇಮಳಲಿ
Published 26 ಫೆಬ್ರುವರಿ 2022, 19:51 IST
Last Updated 26 ಫೆಬ್ರುವರಿ 2022, 19:51 IST
 ಶಿವಮೊಗ್ಗದಲ್ಲಿ 2015ರಲ್ಲಿ ಕೋಮುದ್ವೇಷಕ್ಕೆ ಬಲಿಯಾಗಿದ್ದ ವಿಶ್ವನಾಥ್‌ ಶೆಟ್ಟಿ ಮನೆಗೆ ಶನಿವಾರ ಭೇಟಿ ನೀಡಿದ ಜೆಡಿಎಸ್‌ ಮುಖಂಡ ಎಂ.ಶ್ರೀಕಾಂತ್ ಅವರು ಮೀನಾಕ್ಷಿ ಅವರ ಯೋಗಕ್ಷೇಮ ವಿಚಾರಿಸಿದರು
ಶಿವಮೊಗ್ಗದಲ್ಲಿ 2015ರಲ್ಲಿ ಕೋಮುದ್ವೇಷಕ್ಕೆ ಬಲಿಯಾಗಿದ್ದ ವಿಶ್ವನಾಥ್‌ ಶೆಟ್ಟಿ ಮನೆಗೆ ಶನಿವಾರ ಭೇಟಿ ನೀಡಿದ ಜೆಡಿಎಸ್‌ ಮುಖಂಡ ಎಂ.ಶ್ರೀಕಾಂತ್ ಅವರು ಮೀನಾಕ್ಷಿ ಅವರ ಯೋಗಕ್ಷೇಮ ವಿಚಾರಿಸಿದರು   

ಶಿವಮೊಗ್ಗ: ನಗರದಲ್ಲಿ ಈಚೆಗೆ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ರಾಜ್ಯದ ವಿವಿಧೆಡೆಯಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇನ್ನೊಂದೆಡೆ ಏಳು ವರ್ಷಗಳ ಹಿಂದೆ ಕೋಮು ದ್ವೇಷಕ್ಕೆ ಹತ್ಯೆಯಾಗಿದ್ದ ಬಜರಂಗದಳದ ಕಾರ್ಯಕರ್ತ ಆಲ್ಕೊಳದ ವಿಶ್ವನಾಥ ಶೆಟ್ಟಿ ಅವರ ತಾಯಿ ಮೀನಾಕ್ಷಿ ಅವರು ಚಿಂದಿ ಆಯ್ದು ಬಂದ ಹಣದಲ್ಲಿ ಮೊಮ್ಮಗನನ್ನು ಓದಿಸಲು ಹೆಣಗಾಡುತ್ತಿದ್ದಾರೆ.

ಶಿವಮೊಗ್ಗ ನಗರದಲ್ಲಿ 2015ರಲ್ಲಿ ನಡೆದ ಪಿಎಫ್‌ಐ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಕೆಲವರು ಗಾಜನೂರು ಬಳಿ ವಿಶ್ವನಾಥ ಶೆಟ್ಟಿ ಅವರನ್ನು ಹತ್ಯೆ ಮಾಡಿದ್ದರು. ಆಗ ರಾಜ್ಯ ಸರ್ಕಾರ ₹ 5 ಲಕ್ಷ ಪರಿಹಾರ ನೀಡಿತ್ತು. ಆ ಹಣವೂ ಕಾಯಿಲೆಯಿಂದ ನರಳುತ್ತಿದ್ದ ಅವರ ಪತ್ನಿಯ ಚಿಕಿತ್ಸೆಗೆ ಖರ್ಚಾಗಿತ್ತು. ಕೊನೆಗೆ ಅವರೂ ಮೃತಪಟ್ಟರು.

ಅವರ ತಾಯಿ ಮೀನಾಕ್ಷಿ ಇಂದಿಗೂ ಚಿಂದಿ ಆಯ್ದು ಬಂದ ಹಣದಲ್ಲಿ ಬದುಕಿನ ಬಂಡಿ ಸಾಗಿಸಲು ನಿತ್ಯ ಹೋರಾಡುತ್ತಿದ್ದಾರೆ.

ADVERTISEMENT

ಹರ್ಷ ಹತ್ಯೆಯಾದ ಬಳಿಕ ರಾಜ್ಯದ ವಿವಿಧೆಡೆಯಿಂದ ಅವರ ಮನೆಗೆ ಬರುತ್ತಿರುವ ನಾಯಕರು ಹಣಕಾಸಿನ ನೆರವು ನೀಡುತ್ತಿದ್ದಾರೆ. ನೆರವಿನ ಪ್ರಮಾಣ ₹ 1 ಕೋಟಿ ದಾಟಿದೆ. ಆದರೆ, ವಿಶ್ವನಾಥ್ ಅವರ ತಾಯಿ ಮಾತ್ರ ಪುಟ್ಟ ಮನೆಯಲ್ಲಿ ‘ಕತ್ತಲೆ’ಯಲ್ಲೇ ಬದುಕು ಸಾಗಿಸುತ್ತಿದ್ದಾರೆ.

ವಿಶ್ವನಾಥ್‌ ಅವರ ತಾಯಿ ಇದ್ದ ಒಬ್ಬ ಮೊಮ್ಮಗನನ್ನು ಕೊಪ್ಪದ ವಸತಿ ಶಾಲೆಯಲ್ಲಿ ಬಿಟ್ಟು ಓದಿಸುತ್ತಿದ್ದಾರೆ. ನಗರದಲ್ಲಿ ನಿತ್ಯವೂ ಚಿಂದಿ ಆಯ್ದು ಬಂದ ಹಣವನ್ನು ಮೊಮ್ಮಗನಿಗೆ ಕಳುಹಿಸುತ್ತಿದ್ದಾರೆ.

ದುಡಿದು ಕುಟುಂಬ ಮುನ್ನಡೆಸಬೇಕಾಗಿದ್ದ ಮಗನನ್ನು ಕಳೆದುಕೊಂಡ ಬಳಿಕ ತಾಯಿ ಮೀನಾಕ್ಷಿ ಅವರ ಹೆಗಲಿಗೇ ಸಂಸಾರ ಸರಿದೂಗಿಸಿಕೊಂಡು ಹೋಗುವ ಭಾರ ಬಿದ್ದಿತ್ತು. ಮಗನನ್ನು ಕಳೆದುಕೊಂಡ ಬಳಿಕ ಹೇಳಿಕೊಳ್ಳುವಂತಹ ನೆರವಿನ ಹಸ್ತವನ್ನು ಯಾರೂ ಚಾಚದೇ ಇರುವುದರಿಂದ ಚಿಂದಿ ಆಯ್ದು ಬದುಕು ಸಾಗಿಸುವುದು ಇವರಿಗೆ ಅನಿವಾರ್ಯವಾಗಿತ್ತು.

ವಿದ್ಯುತ್‌ ಸಂಪರ್ಕ ಕಡಿತ: ವಿದ್ಯುತ್‌ ಬಿಲ್‌ ಕಟ್ಟದ ಕಾರಣ ಮೂರು ವರ್ಷಗಳಿಂದ ಮನೆಯ ವಿದ್ಯುತ್‌ ಸಂಪರ್ಕವೂ ಕಡಿತಗೊಂಡಿತ್ತು. ನಲ್ಲಿ ನೀರು ಕೂಡ ಬಂದ್‌ ಆಗಿತ್ತು. ಮನೆ ಸುಣ್ಣ– ಬಣ್ಣ ಕಾಣದೇ ಬೀಳುವ ಸ್ಥಿತಿಗೆ ಬಂದಿತ್ತು. ಈ ವಿಷಯ ತಿಳಿದ ಜೆಡಿಎಸ್‌ ಮುಖಂಡ ಎಂ. ಶ್ರೀಕಾಂತ್ ಅವರು ಶನಿವಾರ ಇವರ ಮನೆಗೆ ಭೇಟಿ ನೀಡಿ ನೆರವಿನ ಹಸ್ತ ಚಾಚಿದರು. ವಿದ್ಯುತ್ ಶುಲ್ಕ, ನಲ್ಲಿ ಕಂದಾಯವನ್ನು ಭರಿಸಿದರು. ಮನೆಗೆ ಸುಣ್ಣ– ಬಣ್ಣ ಬಳಿಸಲು ಹಣಕಾಸಿನ ನೆರವು ನೀಡಿದರು.

ಕೀಟಲೆ ಮಾಡಲುಹೋಗಿ ಸಂಕಷ್ಟ ತಂದುಕೊಂಡ ಯುವತಿ!

ಸಹಪಾಠಿ ಬಳಿ ಬಜರಂಗದಳದ ಕಾರ್ಯಕರ್ತ ಹರ್ಷನ ಮೊಬೈಲ್‌ ನಂಬರ್ ಪಡೆದು ಫೆ.20ರ ರಾತ್ರಿ ಹಾಸ್ಟೆಲ್‌ ಕೊಠಡಿಯಲ್ಲಿ ಗೆಳತಿಯರ ಜತೆ ಕುಳಿತು ಕೀಟಲೆ ಮಾಡಲು ಹೋಗಿದ್ದ ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಅರೆ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಯುವತಿ ಸಂಕಷ್ಟವನ್ನು ತಂದುಕೊಂಡಿದ್ದಾರೆ.

ಹರ್ಷನ ಮನೆಯ ಬಳಿ ಇರುವ ಕಾಲೇಜಿನ ಸಹಪಾಠಿ ಮೂಲಕ ಆತನ ಹಿಂದುತ್ವದ ಹೋರಾಟ, ಸಂಘಟನಾ ಚತುರತೆ ಬಗ್ಗೆ ತಿಳಿದಿದ್ದ ಜಿಲ್ಲೆಯವರೇ ಆದ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದ ಯುವತಿಯು ಅಂದು ವಿಡಿಯೊ ಕಾಲ್‌ ಮಾಡಿ ಮಾತನಾಡಿದ್ದಾರೆ. ಪರಿಚಯವಿಲ್ಲದ ಈ ಯುವತಿಯರನ್ನು ನೋಡಿದ್ದೀರಾ ಎಂದು ಹರ್ಷ ಸ್ನೇಹಿತರಿಗೂ ತೋರಿಸಿ ಕೇಳಿದ್ದಾರೆ. ಮಾತನಾಡುತ್ತಾ ನಡೆದುಕೊಂಡು ಹೋದಾಗಲೇ ಹರ್ಷನ ಹತ್ಯೆಯಾಗಿದೆ ಎಂದು ಮೂಲಗಳು ತಿಳಿಸಿವೆ. ತಾನು ಕರೆ ಮಾಡಿದ ಸಮಯದಲ್ಲೇ ಹತ್ಯೆ ನಡೆದ ವಿಷಯ ತಿಳಿದು ಯುವತಿ ಆಫಾತಕ್ಕೆ ಒಳಗಾಗಿದ್ದಾರೆ. ತಾನೇ ಪೊಲೀಸರನ್ನು ಸಂಪರ್ಕಿಸಿ ವಿಷಯ ಮನವರಿಕೆ ಮಾಡಿಕೊಟ್ಟಿದ್ದಾರೆ. ವಿಚಾರಣೆಗೆ ಕರೆದಾಗ ಠಾಣೆಗೆ ಬರಬೇಕು ಎಂಬ ಷರತ್ತಿನ ಮೇಲೆ ಯುವತಿಯನ್ನು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.

ಸಂಜೆ 4ರವರೆಗೆ ಕರ್ಫ್ಯೂ ಸಡಿಲಿಕೆ

ನಗರದಲ್ಲಿ ಶನಿವಾರದಂತೆ ಭಾನುವಾರವೂ ಬೆಳಿಗ್ಗೆ 6ರಿಂದ ಸಂಜೆ 4ರವರೆಗೆ ಕರ್ಫ್ಯೂ ಸಡಿಲಿಸಲಾಗಿದೆ. ವ್ಯಾಪಾರ ವಹಿವಾಟು, ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಫೆ.28ರಿಂದ ಶಾಲೆ, ಕಾಲೇಜು ಆರಂಭಿಸುವ ಕುರಿತು ಶೀಘ್ರ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ಮಾಹಿತಿ ನೀಡಿದರು.

‘ಕಾಂಗ್ರೆಸ್‌ ಬೆಂಲಿಸಿದರೆ ತಾಲಿಬಾನ್ ಅಧಿಕಾರಕ್ಕೆ’

ಶಿವಮೊಗ್ಗ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದರೆ ತಾಲಿಬಾನ್ ಸರ್ಕಾರ ಅಧಿಕಾರ ಪಡೆದಂತೆ. ಈ ಕುರಿತು ಜನರು ಜಾಗೃತರಾಗಬೇಕು’ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದರು.

ಮೃತ ಹರ್ಷ ಮನೆಗೆ ಭೇಟಿ ನೀಡಿ, ₹ 5 ಲಕ್ಷ ಆರ್ಥಿಕ ನೆರವು ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.