ADVERTISEMENT

ಶಿವಮೊಗ್ಗ: ಭಾರತ ಬಂದ್‌: ಖಾಸಗಿ ಬಸ್‌ ಸೇವೆ ಲಭ್ಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 15:22 IST
Last Updated 7 ಜನವರಿ 2019, 15:22 IST

ಶಿವಮೊಗ್ಗ:ಮೋಟಾರು ವಾಹನ ತಿದ್ದುಪಡಿ ಮಸೂದೆ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಎಡ ಪಕ್ಷಗಳು ನೀಡಿರುವ ಎರಡು ದಿನಗಳ ಬಂದ್‌ಗೆ ಜಿಲ್ಲೆಯಲ್ಲೂ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ.ಮಂಗಳವಾರ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ. ಆದರೆ, ಖಾಸಗಿ ಬಸ್‌ಗಳ ಸೇವೆ ಎಂದಿನಂತೆ ಮುಂದುವರಿಯಲಿದೆ. ಕೆಲವು ಆಟೊ ರಿಕ್ಷಾಗಳ ಸೇವೆ ಇರುವುದಿಲ್ಲ. ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸದ ಕಾರಣ ಎಂದಿನಂತೆ ತೆರೆದಿರುತ್ತವೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿವೆ. ಬ್ಯಾಂಕ್‌ ನೌಕರರ ಸಂಘಟನೆಗಳು, ಅಂಚೆ ನೌಕರರ ಸಂಘಟನೆ ಬಂದ್‌ಗೆ ಬೆಂಬಲ ನೀಡಿದೆ. ಆದರೆ, ಬ್ಯಾಂಕ್‌ ವಹಿವಾಟು ಕ್ಷೀಣಿಸುವ ಸಾಧ್ಯತೆ ಇದೆ. ಅಂಗಡಿ ಮುಂಗಟ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗಿಲು ಮುಚ್ಚುವ ಸಾಧ್ಯತೆ ಕಂಡುಬಂದಿಲ್ಲ.

ಅಂಗನವಾಡಿ ಕಾರ್ಯಜರ್ತೆಯರುಗಾಗೂ ಸಹಾಯಕಿಯರು, ಬಿಸಿಯೂಟ ತಯಾರಕರು ಬಂದ್‌ಗೆ ಬೆಂಬಲ ನೀಡಿರುವ ಕಾರಣ ಶಾಲಾ ಮಕ್ಕಳಿಗೆ ಬಿಸಿಯೂಟ ಸಿಗುವುದಿಲ್ಲ. ಅಂಗನವಾಡಿಗಳಿಗೆ ರಜೆ ಇರುತ್ತದೆ.

ADVERTISEMENT

ಪರೀಕ್ಷೆ ಮುಂದೂಡಿಕೆ:

ಬಂದ್‌ ಹಿನ್ನೆಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯ ಜ. 8 ಮತ್ತು 9ರಂದು ನಡೆಯಬೇಕಿದ್ದ ಬಿಇಡಿ ಪರೀಕ್ಷೆಯನ್ನು ಕ್ರಮವಾಗಿ ಜ. 20 ಮತ್ತು 21ಕ್ಕೆಮುಂದೂಡಿದೆ.

ಯುವ ಜನ ಮೇಳ ಮುಂದೂಡಿಕೆ:

ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಜ. 8ರಿಂದ ಎರಡು ದಿನ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಯುವ ಜನ ಮೇಳವನ್ನು ಜ. 10 ಹಾಗೂ 11ಕ್ಕೆ ಮುಂದೂಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಾಲೆಗಳಿಗೆ ರಜೆ ಇಲ್ಲ

ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಮಂಗಳವಾರ, ಬುಧವಾರ ರಜೆ ಇಲ್ಲ.

ಖಾಸಗಿ ಬಸ್‌ ಮಾಲೀಕರು ಬಂದ್‌ಗೆ ಬೆಂಬಲ ನೀಡಿಲ್ಲ. ಜಿಲ್ಲೆಯ ಜನರು ಹೆಚ್ಚಾಗಿ ಖಾಸಗಿ ಬಸ್‌ಗಳ ಮೇಲೆ ಅವಲಂಬಿತರಾಗಿರುವ ಕಾರಣ ಶಾಲಾ, ಕಾಲೇಜುಗಳಿಗೆ ರಜೆ ನೀಡುವ ಅಗತ್ಯವಿಲ್ಲ. ಪರೀಕ್ಷಾ ಸಮಯವಾದ ಕಾರಣ ಸಣ್ಣಪುಟ್ಟ ತೊಂದರೆ ನಿವಾಸಿಕೊಂಡು ಪೋಷಕರು ಶಾಲೆಗೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.