ಶಿವಮೊಗ್ಗ: ಸೊರಬ ಪಟ್ಟಣದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹಾಗೂ ಪತ್ನಿ ಶಕುಂತಲಾ ಬಂಗಾರಪ್ಪ ಅವರ ಸಮಾಧಿ ಸ್ಥಳ ‘ಬಂಗಾರ ಧಾಮ’ಕ್ಕೆ ರಾಜ್ಯ ಸರ್ಕಾರ ಪ್ರವಾಸಿ ತಾಣವಾಗಿ ಮನ್ನಣೆ ನೀಡಿದೆ. ಆ ಬಗ್ಗೆ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಎಸ್. ಬಂಗಾರಪ್ಪ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿರುವ ಬಂಗಾರ ಧಾಮವನ್ನು ಅವರದ್ದೇ ನೇತೃತ್ವದ ಎಸ್. ಬಂಗಾರಪ್ಪ ಫೌಂಡೇಷನ್ ನಿರ್ವಹಿಸುತ್ತಿದೆ.
ಎಸ್.ಬಂಗಾರಪ್ಪ ಅವರ ಚಿಂತನೆ, ಅಭಿರುಚಿಗೆ ಪೂರಕವಾಗಿ ಒಂದು ಕಾಲು ಎಕರೆ ಪ್ರದೇಶದಲ್ಲಿ ಬಂಗಾಧಾಮ ನಿರ್ಮಾಣವಾಗಿದ್ದು, ಗ್ರಾನೈಟ್ ಮತ್ತು ಮಾರ್ಬಲ್ ಕೆತ್ತನೆಯ ಕಲಾಕೃತಿಗಳು ಅದರ ಸೌಂದರ್ಯ ಹೆಚ್ಚಿಸಿವೆ. ಧ್ಯಾನಮಂದಿರ, ಕುಡಿಯುವ ನೀರು, ಶೌಚಾಲಯ, ವಾಕಿಂಗ್ ಪಾಥ್, ಹೂವಿನ ತೋಟ, ಅಲಂಕಾರಿಕ ಗಿಡಗಳು ಸೇರಿದಂತೆ ಅಗತ್ಯ ಸೌಲಭ್ಯಗಳು ಲಭ್ಯವಿದೆ. 1,500 ಮಂದಿಗೆ ಆಸನ ವ್ಯವಸ್ಥೆಯೊಂದಿಗೆ ಆಧುನಿಕ ಬಯಲು ರಂಗಮಂದಿರ ನಿರ್ಮಾಣಗೊಂಡಿದೆ. ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ. ಹೆಲಿಫ್ಯಾನ್ ಅಳವಡಿಕೆ ಮಾಡಲಾಗಿದೆ.
ಸಂಪಿಗೆ ಮರ, ಕಲ್ಪವೃಕ್ಷ, ಈಚಲು ಮರಗಳನ್ನು ಒಳಗೊಂಡ ಸಸ್ಯ ಸಂಪತ್ತು, 56 ಅಡಿ ಎತ್ತರದ ಕ್ಲಾಕ್ ಟವರ್, ವಿದ್ಯುತ್ ದೀಪಾಲಂಕಾರ ಹಾಗೂ ಹಿನ್ನೆಲೆಯಲ್ಲಿ ಸುಮಧುರ ಸಂಗೀತ ಬಂಗಾರ ಧಾಮದ ವೈಶಿಷ್ಟ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.