ADVERTISEMENT

ಶಿವಮೊಗ್ಗ | ಒಳಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 5:09 IST
Last Updated 2 ಸೆಪ್ಟೆಂಬರ್ 2025, 5:09 IST
   

ಶಿವಮೊಗ್ಗ: ‘ನಿವೃತ್ತ ನ್ಯಾ. ನಾಗಮೋಹನ ದಾಸ್‌ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅವೈಜ್ಞಾನಿಕವಾಗಿದ್ದು, ಬಂಜಾರ (ಲಂಬಾಣಿ) ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಇದನ್ನು ಸರಿಪಡಿಸಬೇಕು’ ಎಂದು ಗೋರಸೇನಾ ಸಮಿತಿ ರಾಷ್ಟ್ರೀಯ ಸಂಘಟನೆಯ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರು ಎಸ್. ನಾಯ್ಕ ಒತ್ತಾಯಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು

‘ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. 101 ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಬಂಜಾರ ಸೇರಿದಂತೆ ಹಲವು ಜಾತಿಗಳಿಗೆ ಇದರಿಂದ ಅನ್ಯಾಯವಾಗಿದೆ ಎಂದು ದೂರಿದರು. 

ADVERTISEMENT

‘ಬಿಜೆಪಿ ಅಧಿಕಾರವಧಿಯಲ್ಲಿ ಮಾಡಿದ ವರ್ಗೀಕರಣದಲ್ಲಿ 99 ಜಾತಿಗಳನ್ನು ಒಟ್ಟುಗೂಡಿಸಿ ಶೇ 4.5ರಷ್ಟು ಮೀಸಲಾತಿ ನೀಡಲಾಗಿತ್ತು. ಈಗ 63 ಜಾತಿಗಳನ್ನು ಒಗ್ಗೂಡಿಸಿ ಶೇ 5ರಷ್ಟು ಮೀಸಲಾತಿ ನೀಡಲಾಗಿದೆ. ಈ ಎರಡೂ ಮೀಸಲಾತಿಯ ವರ್ಗೀಕರಣವು ಅವೈಜ್ಞಾನಿಕವಾಗಿದೆ’ ಎಂದು ಆರೋಪಿಸಿದರು. 

‘ಬಂಜಾರ ಸಮುದಾಯದ ಅಂಕಿ–ಅಂಶ ತಪ್ಪಾಗಿದೆ. 2011ರ ಜಾತಿ ಗಣತಿಯಲ್ಲಿ ಎಸ್‌ಸಿ ಜನಸಂಖ್ಯೆ 1.8 ಕೋಟಿ ಇತ್ತು. ಈಗಿನ ಜಾತಿಗಣತಿಯಲ್ಲಿ 1.5 ಕೋಟಿ ಆಗಿದೆ. ಇಲ್ಲಿ ಜನಸಂಖ್ಯೆ ಕಡಿಮೆ ಆಗಲು ಕಾರಣವೇನು? ಈ ಬಗ್ಗೆ ಸರಿಯಾದ ಕ್ರಮದಲ್ಲಿ ಸರ್ಕಾರ ಸಮೀಕ್ಷೆ ನಡೆಸಿ ವರದಿ ಜಾರಿಗೊಳಸಿಬೇಕು’ ಎಂದು ಬಂಜಾರ ಜಿಲ್ಲಾ ಸಮುದಾಯದ ಮಾಜಿ ಕಾರ್ಯದರ್ಶಿ ಕೆ. ಶಶಿಕುಮಾ‌ರ್ ಒತ್ತಾಯಿಸಿದರು.  

ಸಂವಿಧಾನದಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯ ಪದ ಬಳಕೆ ನಿಷೇಧಿಸಿದ್ದು, ಆಯೋಗದ ವರದಿಯಲ್ಲೂ ಇದೇ ಪದ ಬಳಕೆ ಮಾಡಿ ವರ್ಗಿಕರಣ ಮಾಡಿರುವುದು ಸರಿಯಲ್ಲ. ಸಮುದಾಯದವರು ಉದ್ಯೋಗ ಅರಿಸಿ ಗುಳೆ ಹೋಗಿರುವುದರಿಂದ ಸಮೀಕ್ಷೆಯಿಂದ ಹೊರಗಿದ್ದಾರೆ. ಈ ಬಗ್ಗೆಯೂ ಸೂಕ್ತ ರೀತಿಯಲ್ಲಿ ಸಮೀಕ್ಷೆ ನಡೆಸಬೇಕು ಎಂದು ಬಂಜಾರ ಜಿಲ್ಲಾ ಸಮಾಜದ ಮುಖಂಡ ರೇಣುಕ ನಾಯ್ಕ ಆಗ್ರಹಿಸಿದರು.

ಶಿಕಾರಿಪುರ ತಾಲ್ಲೂಕು ಘಟಕ ಅಧ್ಯಕ್ಷ ಎಸ್. ಮಂಜುನಾಯ್ಕ, ಪ್ರಮುಖರಾದ ರಾಜೇಶ್ ದುಮ್ಮನಹಳ್ಳಿ, ಹನುಮಂತ ನಾಯ್ಕ, ಸಂತೋಷ್, ಲಿಂಗರಾಜ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.